ಶನಿವಾರ, ಡಿಸೆಂಬರ್ 14, 2019
25 °C
ಕೂಡಿಗೆಯಲ್ಲಿ ಮಳೆ ನಡುವೆಯೂ ಪಾಲ್ಗೊಂಡಿದ್ದ ಸಾವಿರಾರು ಭಕ್ತರು

ಕೂಡಿಗೆ ಗ್ರಾಮ: ವಿಜೃಂಭಣೆಯ ಚಂಪಾಷಷ್ಟಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಉತ್ತರ ಕೊಡಗಿನ ಕಾವೇರಿ ಮತ್ತು ಹಾರಂಗಿ ನದಿಗಳ ಪವಿತ್ರ ಸಂಗಮ ಕ್ಷೇತ್ರವಾದ ಕೂಡಿಗೆ ಗ್ರಾಮದಲ್ಲಿ ಸೋಮವಾರ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾಷಷ್ಠಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ 51ನೇ ವಾರ್ಷಿಕ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಟಾಟಾ ಕಾಫಿ ಕಂಪನಿಯ ಕಾಫಿ ಸಂಸ್ಕರಣಾ ಕೇಂದ್ರದ ಆವರಣದಲ್ಲಿರುವ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿಯ ಅಂಗವಾಗಿ ಬೆಳಿಗ್ಗೆಯಿಂದಲೇ ಶೃಂಗೇರಿ ಮಠದ ಸುರೇಶ್ ಗೋಪಿ ಹಾಗೂ ದೇವಾಲಯದ ಪ್ರಧಾನ ಅರ್ಚಕ ನವೀನ್ ಭಟ್, ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಅಭಿಷೇಕ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.

11.30 ಗಂಟೆಗೆ ಸ್ವಾಮಿ ಸನ್ನಿಧಿಯಲ್ಲಿ ದಿಗ್ಬಲಿ, ರಥ ಬಲಿ, ರಥಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಸುಬ್ರಮಣ್ಯ ಸ್ವಾಮಿ ಗರ್ಭ ಗುಡಿ ಹಾಗೂ ಆವರಣವನ್ನು ವಿವಿಧ ಬಗೆಯ ಪುಷ್ಪಾಗಳಿಂದ ಶೃಂಗರಿಸಲಾಗಿತ್ತು.

ವೈಭವಯುತವಾಗಿ ಜರುಗಿದ ವಾರ್ಷಿಕ ರಥೋತ್ಸವದಲ್ಲಿ ಮೈಸೂರು ಮತ್ತು ಹಾಸನ ಜಿಲ್ಲೆಗಳ ಗಡಿ ಭಾಗದ ಭಕ್ತರು ಸೇರಿದಂತೆ ಜಿಲ್ಲೆಯ ಇತರೆಡೆಗಳಿಂದಲೂ ಬಂದಿದ್ದರು.

ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ರಥಕ್ಕೆ ಮಧ್ಯಾಹ್ನ ಮಧ್ಯಾಹ್ನ 12.30 ಗಂಟೆಗೆ  ಸುಬ್ರಮಣ್ಯ ಸ್ವಾಮಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿ ಮಂಗಳವಾದ್ಯಗೋಷ್ಠಿಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥದ ಮುಂಭಾಗದಲ್ಲಿ ನೆರೆದಿದ್ದ ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳು ಕರ್ಪೂರ ಬೆಳೆಗಿ ಭಕ್ತಿ ಮೆರೆದರು.

ಷಷ್ಠಿ ರಥೋತ್ಸವಕ್ಕೆ ಬಂದ ಭಕ್ತರು ರಥವನ್ನು ಸುಬ್ರಹ್ಮಣ್ಯ ದೇವಸ್ಥಾನದಿಂದ ಉದ್ಘೋಷ ಹಾಗೂ ಜಯಕಾರಗಳೊಂದಿಗೆ ಕೂಡುಮಂಗಳೂರು ಸಮುದಾಯ ಭವನದವರೆಗೆ ರಥವನ್ನು ಭಕ್ತಿ ಪರವಶರಾದರು.

ಮೆರವಣಿಗೆ ಸಂದರ್ಭದಲ್ಲಿ ಭಕ್ತಾರು ಈಡುಗಾಯಿ ಹಾಗೂ ಹಣ್ಣು ಜವನ ಎಸೆದು ಭಕ್ತಿ ಮೆರೆದರು. ರಥೋತ್ಸವಕ್ಕೆ ಬಂದಿದ್ದ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ‌

ಹರಕೆ ಹೊತ್ತ ಭಕ್ತರು ಸರ್ಪದೋಷ ಮತ್ತು ಕರ್ಮದೋಷ ಪರಿಹಾರಕ್ಕಾಗಿ ಬೆಳ್ಳಿಯ ನಾಗರ ಸೆಡೆಯನ್ನು ದೇವರಿಗೆ ಸಮರ್ಪಿಸಿದರು. ಮೆರವಣಿಗೆಯಲ್ಲಿ ವೀರಭದ್ರೇಶ್ವರ ವೀರಗಾಸೆ ಕುಣಿತ, ಕಂಸಾಳೆ ನೃತ್ಯ, ಗೊಂಬೆ ಕುಣಿತ, ಕೀಲು ಕುದುರೆ, ಸೋಮನಕುಣಿತ ಹಾಗೂ ಕೇರಳದ ಚಂಡೆವಾದ್ಯ ಮೆರುಗು ನೀಡಿದವು.

ದೇವಸ್ಥಾನ ಸಮಿತಿ ಅಧ್ಯಕ್ಷ ರಿಕಿ ಅಯ್ಯಪ್ಪ, ಕಾರ್ಯದರ್ಶಿ ಡಿ.ಕೆ.ಪೊನ್ನಪ್ಪ, ಸಹ ಕಾರ್ಯದರ್ಶಿ ಎಂ.ಎಂ.ಮಂದಣ್ಣ, ಸಮಿತಿ ಸದಸ್ಯರಾದ ದಿನೇಶ್ ಕುಮಾರ್, ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಬಿ.ಜಯಂತ್, ಉದ್ಭವ ಯುವಕ ಸಂಘದ ಅಧ್ಯಕ್ಷ ಎಲ್.ರಾಜೇಶ್, ಕಾರ್ಯದರ್ಶಿ ನಂದಕುಮಾರ್, ಮುಖಂಡರಾದ ಕೆ.ವರದ, ಕಿರಣ್ ಕುಮಾರ್, ಅರುಣ್ ಕುಮಾರ್, ಸೋಮಶೇಖರ್ , ಚಂದ್ರು ಮೂಡ್ಲುಗೌಡ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಿ ರವಿ, ಉಪಾಧ್ಯಕ್ಷ ಸಣ್ಣಪ್ಪ , ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಾಲೀಲಾ ಇತರರು ಇದ್ದರು.

ದೇವಸ್ಥಾನ ಮತ್ತು ಗ್ರಾಮವನ್ನು ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಮಳೆಯ ಸಿಂಚನ: ಷಷ್ಠಿ ಅಂಗವಾಗಿ ಪ್ರತಿವರ್ಷ ಮಳೆರಾಯನ ಸಿಂಚನವಾಗುತ್ತದೆ. ಆದರೆ ಈ ಬಾರಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ಸಾಧಾರಣ ಮಳೆ ಸುರಿಯಿತು. ಇದರಿಂದ ಜಾತ್ರೆಯ ಸಂಭ್ರಮಕ್ಕೆ ಸ್ವಲ್ಪ ತೊಂದರೆ ಉಂಟಾಯಿತು. ರಥೋತ್ಸವ ಆರಂಭವಾಗುವ ಸಂದರ್ಭ ಮಳೆ ಇಳಿಮುಖಗೊಂಡಿತು. ಭಕ್ತರು ಎಂದಿನಂತೆ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಪ್ರತಿಕ್ರಿಯಿಸಿ (+)