ಹೊಲಗದ್ದೆ, ತೊರೆ, ತೋಡು ಜಲಾವೃತ; ಬೆಳೆ ಹಾನಿ

6
ಆಶ್ಲೇಷ ಮಳೆಗೆ ಉಕ್ಕಿ ಹರಿಯುತ್ತಿರುವ ಕಾವೇರಿ

ಹೊಲಗದ್ದೆ, ತೊರೆ, ತೋಡು ಜಲಾವೃತ; ಬೆಳೆ ಹಾನಿ

Published:
Updated:

ಕುಶಾಲನಗರ: ಜಿಲ್ಲೆಯಲ್ಲಿ ಮತ್ತೆ ಮಳೆ ಬಿರುಸುಗೊಂಡಿದ್ದು, ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನದಿ, ತೊರೆ, ತೋಡುಗಳು ಉಕ್ಕಿ ಹರಿಯುತ್ತಿವೆ. ಕಾವೇರಿ ನದಿ ಶುಕ್ರವಾರ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಮೈದುಂಬಿ ಹರಿಯುತ್ತಿದೆ.

ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಮೂರು ದಿನಗಳಿಂದ ಆಶ್ಲೇಷಾ ಮಳೆ ಬಿಡುವಿಲ್ಲದೆ ಸುರಿಯುತ್ತಿದೆ. ಇದರಿಂದ ಹಳ್ಳ– ಕೊಳ್ಳಗಳಲ್ಲಿ ನೀರಿನ ಹರಿವು ಏರತೊಡಗಿದೆ. ಕುಶಾಲನಗರ ಹೋಬಳಿ ವ್ಯಾಪ್ತಿಯ ಹಾರಂಗಿ, ಚಿಕ್ಲಿಹೊಳೆ ಜಲಾಶಯಗಳು ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

ಕೂಡಿಗೆ ಬಳಿಯ ವಾಟರ್ ಗೇಜ್ ಬಳಿ ಕಾವೇರಿ ನದಿಯ ಹೆಚ್ಚುವರಿ ನೀರು ಗದ್ದೆಗಳಿಗೆ ನುಗ್ಗಿದ ಪರಿಣಾಮ ರೈತ ದಿವಾಕರ್ ಅವರಿಗೆ ಸೇರಿದ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತ್ತಗೊಂಡಿವೆ. ಇದರಿಂದ ಅಪಾರ ನಷ್ಟ ಉಂಟಾಗಿದೆ.

ಅದೇ ರೀತಿ ಹೆಬ್ಬಾಲೆ ಬಳಿ ಕೊಲ್ಲಿಯಲ್ಲಿಯೂ ಕೂಡ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ಅಕ್ಕಪಕ್ಕದ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಕುಶಾಲನಗರ, ಸುಂಟಿಕೊಪ್ಪ, ನಂಜರಾಯಪಟ್ಟಣ, ವಾಲ್ನೂರು, ಶಿರಂಗಾಲ, ಹೆಬ್ಬಾಲೆ, ಸಿದ್ದಲಿಂಗಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಸುರಿಯುತ್ತಿದೆ. ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ನಾಗಮ್ಮನ ಮಂಟಿ, ಗೊಂದಿಬಸವನಹಳ್ಳಿ, ಗುಮ್ಮನಕೊಲ್ಲಿ ಗ್ರಾಮಗಳಲ್ಲಿ ಮನೆಗಳ ಗೋಡೆಗಳು ಕುಸಿದಿವೆ‌. 

ಕೂಡುಮಂಗಳೂರು ವ್ಯಾಪ್ತಿಯ ಕೂಡ್ಲೂರು ಮಂಟಿ, ಬಸವೇಶ್ವರ ಬಡಾವಣೆ, ಸುಂದರನಗರ, ಚಿಕ್ಕತ್ತೂರು ಹಾಗೂ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹುದುಗೂರು, ಮಾದಲಾಪುರ, ಸೀಗೆಹೊಸೂರು, ಕೊಪ್ಪಲು ಹಾಗೂ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಅನೇಕ ಮನೆಗಳು ಮಳೆ, ಗಾಳಿಗೆ ಸಿಲುಕಿ ಕುಸಿದಿವೆ. ನಾಡ ಕಚೇರಿಯ ಕಂದಾಯ ಅಧಿಕಾರಿ ಮಧುಸೂದನ್ ಹಾಗೂ ಸಿಬ್ಬಂದಿ ಮತ್ತು ಅಲ್ಲಿನ ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೃಷಿಗೆ ಅಪಾರ ಹಾನಿ : ನಿರಂತರ ಮಳೆಯಿಂದಾಗಿ ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು, ರೈತರು ಕಂಗಾಲಾಗಿದ್ದಾರೆ. ಹೋಬಳಿಯ ಹುದುಗೂರು, ಹೆಬ್ಬಾಲೆ, ಭುವನಗಿರಿ, ಸೀಗೆ ಹೊಸೂರು, ಅಳುವಾರ, ತೊರೆನೂರು, ಶಿರಂಗಾಲ, ಸಿದ್ದಲಿಂಗಪುರ ಗ್ರಾಮಗಳಲ್ಲಿ ರೈತರು ನೂರಾರು ಎಕರೆ ಪ್ರದೇಶದಲ್ಲಿ ಕೈಗೊಂಡಿದ್ದ ಶುಂಠಿ ಕೃಷಿ ಹಾಗೂ ಮೆಕ್ಕೆಜೋಳ, ಸುವರ್ಣಗೆಡ್ಡೆ, ತಂಬಾಕು ಬೆಳೆ ನೀರು ಪಾಲಾಗಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯಲ್ಲ ಹೊಲಗದ್ದೆಗಳಲ್ಲಿಯೇ ಮಣ್ಣಾಗುತ್ತಿವೆ.

ಶುಂಠಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಂಬಲ ಬೆಲೆ ದೊರೆಯುವ ಹಿನ್ನೆಲೆಯಲ್ಲಿ ರೈತರು ಭತ್ತ ಕೃಷಿಯನ್ನು ಬಿಟ್ಟು ಸಾಲ ಮಾಡಿ ನೂರಾರು ಎಕರೆ ಪ್ರದೇಶದಲ್ಲಿ ಶುಂಠಿ ಹಾಕಿದ್ದಾರೆ. ಆದರೆ, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇದೀಗ ಶುಂಠಿಗೆ ಕೊಳೆರೋಗ ಕಾಣಿಸಿಕೊಂಡಿದೆ. ಮುಂದಿನ ತಿಂಗಳಲ್ಲಿ ರೈತರ ಕೈಸೇರಬೇಕಿದ್ದ ಬೆಳೆ ಕೊಳೆತು ಮಣ್ಣಾಗುತ್ತಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !