ಸೇವೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಇರಲಿ: ನಿವೃತ್ತ ಡಿವೈಎಸ್‌ಪಿ ಎ.ಕೆ.ಸುರೇಶ್

ಶನಿವಾರ, ಏಪ್ರಿಲ್ 20, 2019
27 °C
ಪೊಲೀಸ್ ಧ್ವಜ ದಿನಾಚರಣೆ

ಸೇವೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಇರಲಿ: ನಿವೃತ್ತ ಡಿವೈಎಸ್‌ಪಿ ಎ.ಕೆ.ಸುರೇಶ್

Published:
Updated:
Prajavani

ಮಡಿಕೇರಿ: ಜಿಲ್ಲಾ ಪೊಲೀಸ್ ವಿಭಾಗದಿಂದ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣಾ ಸಮಾರಂಭವು ಮಂಗಳವಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು.

ನಿವೃತ್ತ ಡಿವೈಎಸ್‌ಪಿ ಎ.ಕೆ.ಸುರೇಶ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು, ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ನಿಷ್ಠೆ, ಬದ್ಧತೆ, ಪ್ರಾಮಾಣಿಕತೆ ಇದ್ದಲ್ಲಿ ಉತ್ತಮ ಸೇವೆ ಸಲ್ಲಿಸಬಹುದು ಎಂದು ಹೇಳಿದರು.

ಪೊಲೀಸರು ನಿತ್ಯವೂ ಉತ್ತಮ ಸಾರ್ವಜನಿಕ ಸಂಪರ್ಕ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಸಾರ್ವಜನಿಕ ಸೇವೆಯೇ ಪ್ರಮುಖ ಎಂಬುದನ್ನು ಅರಿತುಕೊಂಡು ಕಾರ್ಯ ನಿರ್ವಹಿಸಬೇಕು. ಶಿಸ್ತಿನ ಇಲಾಖೆಯಲ್ಲಿ ಆದಷ್ಟು ಮುಂಜಾಗೃತೆ ವಹಿಸಿ ತಪ್ಪು ಆಗದಂತೆ ನೋಡಿಕೊಳ್ಳುವುದು ಅಗತ್ಯ ಎಂದು ಸಲಹೆ ಮಾಡಿದರು.

ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರು, ಸಿದ್ದಾಪುರ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ ಕೆ.ಎ. ಸಿದ್ದಾರ್ಥ ಅವರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಿಸಿದರು.

ನಂತರ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಸೇವೆ ಶ್ಲಾಘನೀಯ. ಆ ನಿಟ್ಟಿನಲ್ಲಿ ಸಮಾಜ ಮುಖಿಯಾಗಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆದ ಪಥಸಂಚಲನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಮಾತನಾಡಿ, ಪೊಲೀಸರ ಸೇವೆ, ಶೌರ್ಯ, ಅರ್ಪಣಾ ಮನೋಭಾವವನ್ನು ಗೌರವಿಸುವ ಹಾಗೂ ಪುರಸ್ಕರಿಸುವ ನಿಟ್ಟಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆರೋಗ್ಯ ಸೇವೆ ಮತ್ತಿತರವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು. ಉತ್ತಮ ಸೇವೆ ಸಲ್ಲಿಸಿದ ಪೊಲೀಸರನ್ನು ಸನ್ಮಾನಿಸಲಾಯಿತು.

ಆರ್‌ಪಿಐ ಎಸ್. ರಾಚಯ್ಯ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ನಿವೃತ್ತ ಪೊಲೀಸ್ ನಿರೀಕ್ಷಕರಾದ ಎನ್.ಟಿ. ಮಹದೇವ, ಡಿವೈಎಸ್‌ಪಿಗಳಾದ ನಾಗಪ್ಪ, ಸುಂದರರಾಜ್ ಇದ್ದರು. ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಪೊಲೀಸ್ ಅಧೀಕ್ಷಕರಾದ ಅಪ್ಪಯ್ಯ ವಂದಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !