ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರೇಜ್‌ನಲ್ಲಿ ವಾಸ; ಪ್ಲಾಸ್ಟಿಕ್‌ ಹೊದಿಕೆಯೇ ಆಸರೆ

ನೆರೆ ಪರಿಹಾರ ವಿಳಂಬ: ಸಂಕಷ್ಟದಲ್ಲಿ ಸಂತ್ರಸ್ತ ಕುಟುಂಬ
Last Updated 29 ಜುಲೈ 2020, 17:00 IST
ಅಕ್ಷರ ಗಾತ್ರ

ಪೊನ್ನಂಪೇಟೆ (ಕೊಡಗು ಜಿಲ್ಲೆ): ನೆರೆ ಪರಿಹಾರ ಸಿಗದೇ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಹರು ಕಾಲೊನಿಯ ಎಚ್.ಟಿ.ಪ್ರದೀಪ್ ಕುಟುಂಬವು ಪ್ಲಾಸ್ಟಿಕ್ ಹೊದಿಕೆಯ ಕೆಳಗೆ ವಾಸಿಸುವ ಸ್ಥಿತಿ ಎದುರಾಗಿದೆ.

ನೆರೆ ಬಂದು ವರ್ಷವಾದರೂ ಇದುವರೆಗೆ ಸಮರ್ಪಕ ಪರಿಹಾರ ಸಿಗದೇ ಕಂಗಾಲಾಗಿರುವ ಈ ಕುಟುಂಬವು, ಈ ಮುಂಗಾರಿನಲ್ಲೂ ಪ್ರತಿನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.

2019ರ ಆಗಸ್ಟ್‌ ಮೊದಲ ವಾರ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ, ಪ್ರದೀಪ್‌ ಅವರ ಸೂರು ಸಂಪೂರ್ಣ ಕುಸಿದಿತ್ತು. ‌

ರಾಜೀವ್ ಗಾಂಧಿ ವಸತಿ ನಿಗಮದಿಂದ, ಮನೆ ದುರಸ್ತಿಗೆ ಮಂಜೂರಾದ ₹ 5 ಲಕ್ಷದಲ್ಲಿ ₹ 1 ಲಕ್ಷ ಮಾತ್ರ ಪ್ರದೀಪ್ ಅವರ ಬ್ಯಾಂಕ್‌ ಖಾತೆಗೆ ಜಮೆಯಾಗಿದೆ. ಅದರಲ್ಲಿ ಮನೆ ದುರಸ್ತಿ ಕಾಮಗಾರಿ ಪ್ರಾರಂಭಿಸಿದ್ದರು. 2ನೇ ಹಂತಗಳಲ್ಲಿ ಬಿಡುಗಡೆಯಾಗಬೇಕಿದ್ದ ₹ 4 ಲಕ್ಷ ಸಿಗದೇ ಇರುವುದು ಅವರನ್ನು ಸಂಕಷ್ಟಕ್ಕೆ ದೂಡಿದೆ.

ಬಿಡುಗಡೆಯಾಗಿರುವ ಹಣದಲ್ಲಿ ಮನೆಯ ಒಂದು ಭಾಗದ ಗೋಡೆ ದುರಸ್ತಿ ಮಾಡಲು ಮಾತ್ರ ಸಾಧ್ಯವಾಗಿದೆ. ಮತ್ತೆ ಮಳೆ ಜೋರಾಗಿ ಸುರಿದರೆ ದುರಸ್ತಿ ಆಗಿರುವ ಗೋಡೆಯೂ ಕುಸಿಯಬಹುದು ಎಂಬ ಆತಂಕ ಅವರದು. ಬಿದ್ದು ಹೋಗಿರುವ ಮನೆಗೆ ಹೊಂದಿಕೊಂಡಂತೆ ಪ್ಲಾಸ್ಟಿಕ್ ಹೊದಿಕೆ ಕೆಳಗೆಯೇ ಕುಟುಂಬದ ಸದಸ್ಯರೆಲ್ಲ ಆಶ್ರಯ ಪಡೆದಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಾರೆ.

‘ಮನೆಯ ಹತ್ತಿರವಿರುವ ಗ್ಯಾರೇಜ್‍ನಲ್ಲಿ ನಿಲ್ಲಿಸಲಾಗಿರುವ ಕಾರಿನಲ್ಲಿ ಕುಟುಂಬದ ಎಲ್ಲಾ ಸದಸ್ಯರು ರಾತ್ರಿ ಕಳೆದಿರುವ ಉದಾಹರಣೆಗಳಿವೆ. ಸರಿಯಾದ ಸೂರಿಲ್ಲದೇ ರಾತ್ರಿ ವೇಳೆ ಮಕ್ಕಳು ಭಯ ಪಡುತ್ತಾರೆ. ಕೊಡಗಿನಲ್ಲಿ ವನ್ಯಜೀವಿಗಳ ಕಾಟವೂ ಇದೆ. ಹೊರಗೆ ಮಲಗುವಾಗ ಹೆದರಿಕೆ ಆಗುತ್ತದೆ’ ಎಂದು ಪ್ರದೀಪ್‌ ಕಣ್ಣೀರಾದರು.

ಕೊರೊನಾ ಹಿನ್ನೆಲೆ ಹಣ ಬಿಡುಗಡೆ ವಿಳಂಬವಾಗಿರಬಹುದು. ಶೀಘ್ರದಲ್ಲಿ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಕಂದಾಯ ನಿರೀಕ್ಷಕರಾಧಾಕೃಷ್ಣ ಪ್ರತಿಕ್ರಿಯಿಸಿದರು.

ಕುಟುಂಬದ ಸಮಸ್ಯೆ ತಿಳಿದಿದೆ. ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗ್ಗೆ ವರದಿ ನೀಡಲು ಪಿಡಿಒಗೆ ಸೂಚನೆ ನೀಡಿದ್ದೇನೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಷಣ್ಮುಗಂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT