ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ ತಾಲ್ಲೂಕು; ಗಿಡದಲ್ಲೇ ಉಳಿದ ಹೂವು, ತರಕಾರಿ

ಹೂವು ಹಾಗೂ ತರಕಾರಿ ಬೆಳೆದ ರೈತರು ಕಂಗಾಲು
Last Updated 24 ಮೇ 2021, 3:36 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಚೆಂಡು ಹೂವು ಹಾಗೂ ಹಸಿರು ಮೆಣಸಿನಕಾಯಿ ಬೆಳೆದ ರೈತರು ಬೇಡಿಕೆ ಇಲ್ಲದೆ ನಷ್ಟಕ್ಕೊಳಗಾಗಿದ್ದಾರೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಚೆಂಡು ಹೂ ಕೊಯ್ಲಿಗೆ ಬಂದಿತ್ತು. ಅದೇ ತಿಂಗಳು ಕೊರೊನಾ ಲಾಕ್‌ಡೌನ್ ಘೋಷಿಸಲಾಗಿತ್ತು. ಫಸಲನ್ನು ಕೊಯ್ಲು ಮಾಡಲಾಗದೆ, ಕೃಷಿ ಭೂಮಿಯಲ್ಲೇ ಬಿಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿಯೂ ಅದೇ ಸ್ಥಿತಿ ಮುಂದುವರೆದಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೊಳ್ಳುವವರು ಇಲ್ಲದೆ ಹೂವು ಗಿಡದಲ್ಲೇ ಒಣಗುತ್ತಿವೆ.

ಮದುವೆ, ಜಾತ್ರೆ ಸೇರಿದಂತೆ ಯಾವುದೇ ಶುಭ ಕಾರ್ಯಗಳು ನಡೆಯದ ಹಿನ್ನೆಲೆಯಲ್ಲಿ ಹೂವು ಬೆಳೆದವರು ನಷ್ಟ ಅನುಭವಿಸಬೇಕಾಗಿದೆ.

‘ಎಕರೆಗೆ ಸುಮಾರು ₹40 ಸಾವಿರ ಖರ್ಚು ಮಾಡಿ ರೈತರು ಕೈಸುಟ್ಟುಕೊಂಡಿದ್ದಾರೆ. ಪ್ರತಿ ಎಕರೆಗೆ ₹50 ಸಾವಿರ ಲಾಭ ಗಳಿಸುವ ಆಕಾಂಕ್ಷೆ ಹೊಂದಿದ್ದು, ಈಗ ನಿರಾಸೆಗೊಂಡಿದ್ದಾರೆ. ಒಂದು ಕೆ.ಜಿ. ಚೆಂಡು ಹೂವಿನ ಬೀಜದ ಬೆಲೆ ಸುಮಾರು ₹40 ಸಾವಿರವಿದೆ. ಎಕರೆಗೆ 250 ಗ್ರಾಂನಷ್ಟು ಬಿತ್ತನೆ ಬೀಜ ಬೇಕಾಗಬಹುದು. 2018ರಲ್ಲಿ ಚೆಂಡು ಹೂ ಬೆಳೆಗೆ ಉತ್ತಮ ಬೇಡಿಕೆಯಿತ್ತು. 1 ಕೆ.ಜಿ. ಹೂವಿಗೆ ₹ 30 ರೂ ಬೆಲೆ ಸಿಕ್ಕಿತ್ತು. ಈಗ ಬೆಲೆಯೂ ಇಲ್ಲ, ಕೊಳ್ಳುವವರೂ ಇಲ್ಲದಂತಾಗಿದೆ’ ಎಂದು ಕೃಷಿಕ ಪ್ರಸನ್ನ ಅಳಲು ತೋಡಿಕೊಂಡರು.

ಯಡೂರು ಗ್ರಾಮ ಸೇರಿದಂತೆ ಶನಿವಾರಸಂತೆ, ಸೋಮವಾರಪೇಟೆ ಕಸಬ, ಕೊಡ್ಲಿಪೇಟೆ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಚೆಂಡು ಹೂ ಬೆಳೆದಿದ್ದಾರೆ.

ಇದೇ ವೇಳೆ ಹಸಿರು ಮೆಣಸಿನ ಕಾಯಿ ಬೆಳೆಗಾರರು ಕೂಡ ನಷ್ಟಕ್ಕೊಳ ಗಾಗಿದ್ದಾರೆ. ಮೂರು ತಿಂಗಳ ಪರಿಶ್ರಮದಿಂದ ಹಣ ಮಾಡುತ್ತಿದ್ದ ಬೆಳೆಗಾರರು ಒಂದೆಡೆ ಲಾಕ್‌ಡೌನ್ ಮತ್ತೊಂದೆಡೆ ಚಂಡಮಾರುತದ ಪ್ರಭಾವದಿಂದ ತಾಲ್ಲೂಕಿನಲ್ಲಿ ಬಿದ್ದ ಮಳೆಯಿಂದ ಹೆಚ್ಚಿನ ನಷ್ಟ ಅನುಭವಿಸಿದ್ದಾರೆ.

ಅಕಾಲಿಕ ಮಳೆಗೆ ಹಸಿಮೆಣಸು ಬೆಳೆದ ಜಾಗದಲ್ಲಿ ನೀರು ಸಂಗ್ರಹವಾಗಿ ಫಸಲಿನ ಗಿಡಗಳು ಶೀತದಿಂದ ನಾಶವಾಗುತ್ತಿವೆ. ಲಾಕ್‌ಡೌನ್ ನಿಂದಾಗಿ ಹಸಿಮೆಣಸಿನ ಕಾಯಿ ಕೊಳ್ಳುವರಿಲ್ಲದೆ, ಗಿಡದಲ್ಲೇ ಬಿಡಲಾಗಿತ್ತು. ಗಾಳಿ, ಮಳೆಯಿಂದ ಕೆಲವು ಕಡೆ ಗಿಡಗಳು ಮುರಿದು ಬಿದ್ದಿವೆ. ಗಿಡ ಮತ್ತು ಫಸಲು ಕೊಳೆಯುತ್ತಿವೆ. ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುವ ಸ್ಥಿತಿಗೆ ಬಂದಿದ್ದೇವೆ. ಕೊಯ್ಲು ಮಾಡಲು ಕಾರ್ಮಿಕರು ಬರದ ಕಾರಣ, ಗಿಡದಲ್ಲೇ ಮೆಣಸಿನ ಕಾಯಿ ಹಣ್ಣಾಗುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಶೀತದಿಂದ ಅಲಸಂದೆ, ಬೀನ್ಸ್, ಟೊಮೆಟೊ ಗಿಡಗಳು ಹಾಗೂ ಅಲಸಂದೆ ಬಳ್ಳಿಗಳು ಕೊಳೆಯುತ್ತಿವೆ.

‘ಎರಡು ವರ್ಷಗಳಿಂದ ಚೆಂಡು ಹೂ ಬೆಳೆದು ನಷ್ಟ ಅನುಭವಿಸಿದ್ದೇನೆ. ಕಳೆದ ವರ್ಷದ ಬೆಳೆಹಾನಿ ಪರಿಹಾರಕ್ಕೆ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಪರಿಹಾರ ಸಿಗುತ್ತದೆ ಎಂದು ಹೇಳಿದ್ದರು. ಆದರೆ, ಇದುವರೆಗೂ ಪರಿಹಾರ ಸಿಕ್ಕಿಲ್ಲ. ಈ ವರ್ಷವೂ ಬೆಳೆ ನಾಶವಾಯಿತು. ಪರಿಹಾರಕ್ಕೆ ಅರ್ಜಿ ಮಾತ್ರ ಕೊಡು ವುದಿಲ್ಲ. ರೈತರಿಗೆ ಸರ್ಕಾರ ಪ್ರೋತ್ಸಾಹ ನೀಡದಿದ್ದರೆ, ಕೃಷಿ ಅಸಾಧ್ಯ’ ಎಂದು ಹಾನಗಲ್ಲು ಶೆಟ್ಟಳ್ಳಿಯ ಚೆಂಡು ಹೂ ಕೃಷಿಕ ಲೋಕೇಶ್ ಹೇಳಿದರು.

ವ್ಯಾಪಾರಸ್ಥರಿಗೆ ಖರೀದಿಸಲು ಅವಕಾಶ

‘ಕಳೆದ ವರ್ಷದ ಕೊರೊನಾ ಲಾಕ್‌ಡೌನ್ ಸಂದರ್ಭ ಹೂವು ಹಾಗೂ ಹಸಿರುಮೆಣಸಿನ ಕಾಯಿ ಬೆಳೆಯ ನಷ್ಟದ ವರದಿಯನ್ನು ತಹಶೀಲ್ದಾರರಿಗೆ ಸಲ್ಲಿಸಲಾಗಿದೆ. ಕರ್ಫ್ಯೂ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ. ಮಾರಾಟಕ್ಕೆ ಫಸಲು ಸಾಗಿಸಲು ಗ್ರೀನ್ ಪಾಸ್ ಬೇಕಾದವರು ಪಡೆದುಕೊಳ್ಳಬಹುದು. ಪ್ರಸಕ್ತ ವರ್ಷವೂ ವ್ಯಾಪಾರಸ್ಥರನ್ನು ಸಂಪರ್ಕಿಸಿ, ರೈತರಿಂದ ಹೂ ಮತ್ತು ಹಸಿರುಮೆಣಸಿನ ಕಾಯಿ ಖರೀದಿಸಲು ಅವಕಾಶ ಮಾಡಿಕೊಡಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸಿಂಧು ‘ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT