ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ತಣಿಸಲಿರುವ ಫಲಪುಷ್ಪಗಳು, ವೈನ್‌ಗಳು!

ಮಡಿಕೇರಿ: ಫೆ.3 ರಿಂದ 6ರವರೆಗೆ ರಾಜಾಸೀಟ್ ಉದ್ಯಾನ, ಗಾಂಧಿ ಮೈದಾನದಲ್ಲಿ ಉತ್ಸವ
Last Updated 28 ಜನವರಿ 2023, 11:38 IST
ಅಕ್ಷರ ಗಾತ್ರ

ಮಡಿಕೇರಿ: ವೈನ್‌ ಸಿಪ್‌ ಮಾಡುತ್ತಾ ಫಲಪುಷ್ಪಗಳ ಸೌಂದರ್ಯವನ್ನು ಹಾಗೂ ರಮ್ಯರಮಣೀಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವ ಅಪರೂಪದ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಿದೆ.

ಫೆ. 3ರಿಂದ 6ರವರೆಗೆ ಇಲ್ಲಿನ ರಾಜಾಸೀಟ್ ಉದ್ಯಾನ ಹಾಗೂ ಗಾಂಧಿ ಮೈದಾನದಲ್ಲಿ ಏರ್ಪಡಿಸಿರುವ ‘ಫಲಪುಷ್ಪ ಪ್ರದರ್ಶನ’ ಹಾಗೂ ‘ವೈನ್‌ ಉತ್ಸವ’ವವು ಇಂತಹದ್ದೊಂದು ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಸಾರ್ವಜನಿಕರ ಕಣ್ಮನವನ್ನು ಫಲಪುಷ್ಪಗಳು ತಣಿಸಿದರೆ, ನಾಲಿಗೆಯನ್ನು ಬಗೆಬಗೆ ಸ್ವಾದಗಳ ವೈನ್‌ಗಳು ತಣಿಸಲಿವೆ.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ರಾಜಸೀಟ್‌ ಉದ್ಯಾನದಲ್ಲಿ ಏರ್ಪಡಿಸಿರುವ ಈ ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರಾಜಾಸೀಟ್ ಉದ್ಯಾನದಲ್ಲಿ ಸುಮಾರು 20 ಜಾತಿಯ 10ರಿಂದ 12 ಸಾವಿರ ಹೂವುಗಳಿವೆ. ಅಲಂಕಾರಿಕ ಗಿಡಗಳಾದ ಬೋನ್ಸಾಯ್, ಇಕೆಬಾನ ಹೂವಿನ ಜೋಡಣೆ, ಅಂಥೋರಿಯಂ ಹೂವಿನ ಪ್ರದರ್ಶನಗಳೂ ಇರಲಿವೆ ಎಂದು ಹೇಳಿದರು.

ಗಾಂಧಿ ಮೈದಾನದಲ್ಲಿ 60 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಕೈಗಾರಿಕಾ ವಾಣಿಜ್ಯ ಇಲಾಖೆ ಸೇರಿದಂತೆ 20 ಇಲಾಖೆಗಳಿಗೆ ಮಳಿಗೆ ಕಾಯ್ದಿರಿಸಲಾಗಿದೆ.

40 ಮಳಿಗೆಯಲ್ಲಿ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆ ತೆರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ರೈತರು ಬೆಳೆದಿರುವ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಾಂಬಾರ ಬೆಳೆಗಳನ್ನು ಪ್ರದರ್ಶಿಸಲಾಗುವುದು.

ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನವೂ ಸಿಗಲಿದೆ.

ಫೆ. 3 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಪ್ರದರ್ಶಿಕೆಗಳನ್ನು ತಂದು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಿ.ಎಂ.ಪ್ರಮೋದ್ ಮಾತನಾಡಿ, ‘ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣ ಹೂ ಜೋಡಣೆ, ಬಿಡಿ ಹೂಗಳ ಜೋಡಣೆ, ಇಕೆಬಾನ, ರಂಗೋಲಿ ಸ್ಪರ್ಧೆಗಳನ್ನು ರಾಜಾಸೀಟಿನ ಒಳಭಾಗದಲ್ಲಿ ಆಯೋಜಿಸಲಾಗುವುದು. ಆಸಕ್ತರು ಫೆ.3 ರಂದು ಬೆಳಿಗ್ಗೆ 10 ಗಂಟೆಗೆ ರಾಜಾಸೀಟು ಉದ್ಯಾನದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಬಾರಿ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಪ್ರತಿ ದಿನ 15 ಸಾವಿರ ಹೆಚ್ಚು ಜನರು ಭೇಟಿ ನೀಡುವ ಸಾಧ್ಯತೆ ಇದೆ. ಜಿಲ್ಲೆಯ ಎಲ್ಲ ಶಾಲಾ ಮಕ್ಕಳನ್ನೂ ಇದರ ವೀಕ್ಷಣೆಗೆ ಕರೆದುಕೊಂಡು ಬರುವಂತೆ ಸೂಚಿಸಲಾಗುವುದು. ಇದೊಂದು ಕಣ್ಣಿಗೆ ಹಬ್ಬ ವಾಗುವಂತಹ ಪ್ರದರ್ಶನವಾಗಲಿದೆ
ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT