ಮಡಿಕೇರಿ: ಅಸ್ಸಾಂ ಮಾತ್ರವಲ್ಲ ಹೊರ ರಾಜ್ಯದಿಂದ ಬಂದ ಯಾರಿಗೇ ಆಗಲಿ ಕೆಲಸ ಕೊಡುವುದಕ್ಕೂ ಮುನ್ನ ಅವರಿಂದ ಅಗತ್ಯ ದಾಖಲಾತಿಗಳನ್ನು ಪಡೆದು ಸಂಪೂರ್ಣ ವಿವರಗಳನ್ನು ದಾಖಲಿಸಿಕೊಂಡಿರಬೇಕು. ಇಲ್ಲದಿದ್ದರೆ, ಆ ಕಾರ್ಮಿಕರಿಂದ ಯಾವುದಾದರೂ ಅಪರಾಧ ಚಟುವಟಿಕೆಗಳು ನಡೆದರೆ ತೋಟದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಸಿದರು.
ಎರಡು ಅಪರಾಧ ಚಟುವಟಿಕೆಗಳನ್ನು ಅತಿ ಶೀಘ್ರವಾಗಿ ಬೇಧಿಸಿರುವ ಸಂಬಂಧ ಇಲ್ಲಿನ ನಗರ ಠಾಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಲ್ಲಿನ ಕೋಟೆ ಮಾರಿಯಮ್ಮ ದೇಗುಲದಲ್ಲಿ ಕಳ್ಳತನ ಮಾಡಿದ ಇಬ್ಬರು ಆರೋಪಿಗಳೂ ಅಸ್ಸಾಂ ರಾಜ್ಯದವರು. ಜೊತೆಗೆ, ಅಸ್ಸಾಂನಿಂದ ಬಂದವರಿಂದ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ, ಇಂತಹ ಕ್ರಮ ಅನಿವಾರ್ಯ ಎಂದರು.
‘ಅಸ್ಸಾಂನವರು ಎಂದು ಹೇಳಿಕೊಂಡು ಬಾಂಗ್ಲಾದೇಶದವರು ಬಂದಿರುವ ಕುರಿತು ಯಾವುದೇ ಮಾಹಿತಿ ಇಲ್ಲ’ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ವ್ಯಕ್ತಿಯ ಸಂಬಂಧ ಬಾಂಗ್ಲಾದೇಶಿಗರು ಎಂಬ ಅನುಮಾನ ಬಂದರೆ ಕೂಡಲೇ ಮಾಹಿತಿ ನೀಡಬೇಕು’ ಎಂದು ಅವರು ಮನವಿ ಮಾಡಿದರು.
‘ಅಸ್ಸಾಂನಿಂದಾಗಲಿ ಅಥವಾ ಭಾರತದ ಯಾವುದೇ ರಾಜ್ಯದಿಂದಾಗಲಿ ಕಾರ್ಮಿಕರನ್ನು ಬರಬೇಡಿ ಎಂದು ಹೇಳುವುದು ಸರಿಯಲ್ಲ. ಸಂವಿಧಾನ ದೇಶದ ಎಲ್ಲಿ ಬೇಕಾದರೂ ವಾಸಿಸುವ, ಕೆಲಸ ಮಾಡುವ ಹಕ್ಕು ನೀಡಿದೆ. ಪೊಲೀಸರು ಯಾರನ್ನೂ ತಡೆಯಲು ಸಾಧ್ಯವಿಲ್ಲ. ಆದರೆ, ಕೆಲಸ ಕೊಡುವವರು ತಾವು ಯಾರಿಗೆ ಕೆಲಸ ಕೊಡುತ್ತಾರೋ ಅವರಿಂದ ದಾಖಲಾತಿಗಳನ್ನು ಪಡೆದುಕೊಳ್ಳಬೇಕು’ ಎಂದು ಹೇಳಿದರು.
‘ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಸಂಪೂರ್ಣ ವಿಳಾಸ, ಅವರ ಸಂಬಂಧಿಕರ ಮೊಬೈಲ್ ಸಂಖ್ಯೆಗಳನ್ನು ಪಡೆದುಕೊಳ್ಳಬೇಕು. ಆ ಸಂಖ್ಯೆಗಳು ಸರಿ ಇದೆಯೇ ಎಂದು ಪರಿಶೀಲಿಸಿಕೊಂಡಿರಬೇಕು. ಎಲ್ಲವೂ ಖಚಿತವಾದ ನಂತರವಷ್ಟೇ ಕೆಲಸ ಕೊಡಬೇಕು’ ಎಂದು ಅವರು ತಿಳಿಸಿದರು.
‘ಒಂದು ವೇಳೆ ತೋಟದಲ್ಲಿರುವ ಹೊರರಾಜ್ಯದ ಕಾರ್ಮಿಕರಿಂದ ಯಾವುದಾದರೂ ಅಪರಾಧ ಕೃತ್ಯಗಳು ನಡೆದರೆ, ಆ ಕಾರ್ಮಿಕರನ್ನು ಪತ್ತೆ ಮಾಡಲು ನಮಗೆ ಮಾಲೀಕರು ಕಾರ್ಮಿಕರ ಅಗತ್ಯ ದಾಖಲಾತಿಗಳನ್ನು ನೀಡದೇ ಹೋದರೆ, ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ಹಾಗಾಗಿ, ಕಡಿಮೆ ಕೂಲಿ ಎಂದು ಮಾರು ಹೋಗಿ ವಿಳಾಸ, ದಾಖಲಾತಿ ಇಲ್ಲದೇ ಯಾವುದೇ ಕಾರಣಕ್ಕೂ ಕೆಲಸ ಕೊಡಬಾರದು’ ಎಂದು ಸ್ಪಷ್ಟವಾಗಿ ಸೂಚಿಸಿದರು.
ಅಸ್ಸಾಂನ ಇಬ್ಬರು ಬಂಧನ ಮಡಿಕೇರಿಯ ಕೋಟೆ ಮಾರಿಯಮ್ಮ ದೇಗುಲದಲ್ಲಿ ಆ. 16ರಂದು ಮಧ್ಯರಾತ್ರಿ ಕಳವು ಮಾಡಿದ್ದ ಅಸ್ಸಾಂನ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಅಲ್ತಾಬ್ ಆಲಿ (27) ಹಾಗೂ ಮೀರ್ ಹುಸೇನ್ (36) ಬಂಧಿತರು. ಇವರ ಪೈಕಿ ಅಲ್ತಾಬ್ ಆಲಿ 10 ವರ್ಷಗಳಿಂದ ಕೊಡಗಿನಲ್ಲೆ ವಾಸವಿದ್ದ. ಸದ್ಯ ತನ್ನ ಸಂಬಂಧಿಕರ ಜೊತೆಯಲ್ಲಿ ಆತ ಕಾಂತೂರು – ಮೂರ್ನಾಡುವಿನಲ್ಲಿ ತೋಟವೊಂದರ ಲೈನ್‌ಮನೆಯಲ್ಲಿದ್ದ. ಈತ ಕಳವಿಗಾಗಿಯೇ ಅಸ್ಸಾಂನಿಂದ ಬಂದಿದ್ದ ಮೀರ್ ಹುಸೇನ್ ಜೊತೆ ಸೇರಿ ಕೃತ್ಯ ಎಸಗಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು. ಕಳವು ಮಾಡಿದ್ದ 3 ಗ್ರಾಂ ತೂಕದ ಚಿನ್ನದ ಮಾಂಗಲ್ಯ 111 ಗ್ರಾಂ ಬೆಳ್ಳಿಯ ಕಿರೀಟ 59 ಗ್ರಾಂ ತೂಕದ ಬೆಳ್ಳಿಯ ದೃಷ್ಟಿಬೊಟ್ಟು ಹಾಗೂ ಹುಂಡಿಯಲ್ಲಿದ್ದ ₹ 95501 ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳು ಕಳವು ನಡೆಸಿ ವಾಪಸ್ ತೆರಳಲು ಬಳಕೆ ಮಾಡಿದ ಆಟೊ ಪ್ರಕರಣದಲ್ಲಿ ಮಹತ್ವದ ಸುಳಿವಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇವರು ಆಟೊ ಏರಿ ಹೋಗುತ್ತಿರುವುದು ಗೊತ್ತಾಗುತ್ತಿದ್ದಂತೆ ಆಟೊವನ್ನು ಪತ್ತೆ ಮಾಡಲಾಯಿತು. ಅದರ ಚಾಲಕ ಆರೋಪಿಗಳನ್ನು ಇಳಿಸಿದ ಮೂರ್ನಾಡು ಗ್ರಾಮದ ಜಾಗ ತೋರಿಸಿದ. ಅಲ್ಲಿಂದ ಮತ್ತೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಯಿತು ಎಂದು ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಆರೋಪಿಗಳು ಕೃತ್ಯ ಎಸಗುವ ಮುನ್ನಾ ದಿನವೂ ನಗರದಲ್ಲಿ ಸುತ್ತಾಡಿರುವ ಕುರಿತು ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ ಎಂದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ಡಿವೈಎಸ್‌ಪಿ ಮಹೇಶ್‌ಕುಮಾರ್ ಇನ್‌ಸ್ಪೆಕ್ಟರ್ ಪಿ.ಕೆ. ರಾಜು ಸಬ್‌ಇನ್‌ಸ್ಪೆಕ್ಟರ್ ಲೋಕೇಶ್ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.
ಚೇರಂಬಾಣೆ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಕೃತ್ಯ ನಡೆದ ಕೇವಲ 6 ಗಂಟೆಯ ಅವಧಿಯಲ್ಲೇ ಭಾಗಮಂಡಲ ಠಾಣೆ ಪೊಲೀಸರು ಬಂಧಿಸುವ ಮೂಲಕ ಕಾರ್ಯಕ್ಷಮತೆ ಮೆರೆದಿದ್ದಾರೆ.
ಚೇರಂಬಾಣೆಯ ನಿವಾಸಿ ಸುದರ್ಶನ (24) ಬಂಧಿತ. ಈತನಿಂದ ಕಳವು ಮಾಡಿದ್ದ 60 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ತನ್ನ ದೂರದ ಸಂಬಂಧಿ ಕೆ.ಕೆ. ಗೋಪಾಲಕೃಷ್ಣ ಅವರ ಮನೆಗೆ ಗುರುವಾರ ಬೆಳಿಗ್ಗೆ 11.30ರ ಸುಮಾರಿನಲ್ಲಿ ನುಗ್ಗಿದ್ದ. ಈ ವೇಳೆ ಒಬ್ಬರೇ ಇದ್ದ ಅವರನ್ನು ಚಾಕು ತೋರಿಸಿ ಬೆದರಿಸಿ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಹೊರಟಿದ್ದ. ವಿಷಯ ತಿಳಿಯುತ್ತಲೇ ಕಾರ್ಯೋನ್ಮುಖರಾದ ಇನ್‌ಸ್ಪೆಕ್ಟರ್ ಅನೂಪ್ ಮಾದಪ್ಪ ಸಬ್ ಇನ್‌ಸ್ಪೆಕ್ಟರ್‌ಗಳಾದ ಶೋಭಾ ಲಮಾಣಿ ಈ.ಮಂಜುನಾಥ ನೇತೃತ್ವದ ಪೊಲೀಸರು ತಂಡವು ಸಂಜೆ ಹೊತ್ತಿಗೆ ಸಣ್ಣಪೂಲಿಕೋಟು ಬಸ್‌ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.
ಆರೋಪಿಯು ಮೊದಲು ಬೆಟ್ಟ ಗುಡ್ಡಗಳನ್ನು ಹತ್ತಿ ಕಾಲ್ನಡಿಗೆಯಲ್ಲಿ ಹೊರಟಿದ್ದ. ಇದರ ಜಾಡು ಹಿಡಿದ ಪೊಲೀಸರೂ ಕಾಲ್ನಡಿಗೆಯಲ್ಲೇ ಬೆಟ್ಟ ಗುಡ್ಡ ಹತ್ತಿ ಇಳಿದು ಬಸವಳಿದು ಬಂಧಿಸಲಾಯಿತು ಎಂದು ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸರೊಬ್ಬರು ಮಾಹಿತಿ ನೀಡಿದರು. ಡಿವೈಎಸ್‌ಪಿ ಮಹೇಶ್‌ಕುಮಾರ್ ಇನ್‌ಸ್ಪೆಕ್ಟರ್ ಅನೂಪ್ ಮಾದಪ್ಪ ಸಬ್‌ಇನ್‌ಸ್ಪೆಕ್ಟರ್‌ಗಳಾದ ಶೋಭಾ ಲಮಾಣಿ ಈ.ಮಂಜುನಾಥ ಹಾಗೂ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.