ಗುರುವಾರ , ಅಕ್ಟೋಬರ್ 22, 2020
22 °C
ನಿರ್ಲಕ್ಷ್ಯಕ್ಕೊಳಗಾಗಿರುವ ಜಿಯಂಪಿ ಶಾಲಾ ಮೈದಾನ

ಸುಂಟಿಕೊಪ್ಪ: ಫುಟ್‌ಬಾಲ್ ಮೈದಾನಕ್ಕಿಲ್ಲ ಅಭಿವೃದ್ಧಿ ಭಾಗ್ಯ..!

ಸುನಿಲ್ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ: ’ಕರ್ನಾಟಕದ ಕೊಲ್ಕೋತ್ತಾ‘ ಎಂದು ಖ್ಯಾತಿ ಪಡೆದಿರುವ ಸುಂಟಿಕೊಪ್ಪದ ಜಿಯಂಪಿ ಶಾಲಾ ಮೈದಾನವು ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಕ್ರೀಡಾಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಅತ್ಯುತ್ತಮ ’ಫುಟ್‌ಬಾಲ್’ ಮೈದಾನ ಆಗಬೇಕಿದ್ದ ಈ ತಾಣವು ನಿರ್ವಹಣೆ ಸಮಸ್ಯೆಯಿಂದ ಪುಂಡರ ಅಡ್ಡೆಯಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೌಢಶಾಲೆಯ ಮಕ್ಕಳು, ಸಾರ್ವಜನಿಕರು ಸಹ ಕ್ರೀಡಾ ಚಟುವಟಿಕೆಗಳಿಗಾಗಿ ಇದೇ ಮೈದಾನವನ್ನು ಅವಲಂಭಿಸಿದ್ದಾರೆ.

ಕೊಡಗಿನಲ್ಲಿ ಫುಟ್‌ಬಾಲ್‌ಗೆ ಅಡಿಪಾಯ ಹಾಕಿಕೊಟ್ಟಿದ್ದೇ ಈ ಮೈದಾನ. ಇಲ್ಲಿ ಬೆವರು ಸುರಿಸಿದ ಫುಟ್‌ಬಾಲ್ ಆಟಗಾರರು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಿದ್ದಾರೆ. ಇಬ್ರಾಹಿಂ, ವಿನೋದ್,ಸೇರಿದಂತೆ ಅನುಭವಿ ಆಟಗಾರರು ಈ ಮೈದಾನದಲ್ಲಿ ಕಾಲ್ಚೆಂಡಿನ ಕೌಶಲವನ್ನು ಆಸಕ್ತರಿಗೆ ಕಲಿಸುತ್ತಾ ಬಂದಿದ್ದಾರೆ.

ಆದರೆ, ಈ ಮೈದಾನದ ಅಭಿವೃದ್ಧಿ ಬಗ್ಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜನಪ್ರತಿನಿಧಿಗಳು ಆಸಕ್ತಿ ತೋರದ ಕಾರಣ, ೀಗ ಮೈದಾನವು ಕಲ್ಲು, ಮುಳ್ಳುಗಳಿಂದ ಆವೃತವಾಗಿದೆ. ಅಲ್ಲಲ್ಲಿ ಗುಂಡಿಗಳು ಬಿದ್ದಿವೆ.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ ಅವರ ಪರಿಶ್ರಮದಿಂದ ಒಂದು ಬದಿಯಲ್ಲಿ ಬಾಲ್ಕನಿಗೆ ಚಾವಣಿ ಹಾಕಲಾಗಿದೆ. ಆದರೆ, ಗ್ಯಾಲರಿಯನ್ನು ಪುಂಡರು ಗಾಂಜಾ ಸೇವನೆ, ಮದ್ಯಪಾನದ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎ.ಲೋಕೇಶ್ ಕುಮಾರ್, ಭಾರತೀಶ್ ಇನ್ನಿತರರು ಸೇರಿ ಮೈದಾನದಲ್ಲಿ  ಕುಳಿತುಕೊಳ್ಳಲು ಬಾಲ್ಕನಿ ಕಾಮಗಾರಿ ಮಾಡಿಸಿದ್ದರು. ಆದರೆ, ಮೈದಾನದ ಒಂದು ಬದಿಯಲ್ಲಿ ಮಾತ್ರ ಈ ಸೌಲಭ್ಯ ಇದೆ.

’ರಾತ್ರಿ ಶಾಲೆಯ ಆವರಣದಲ್ಲಿ ಕುಳಿತು ಮದ್ಯ ಸೇವಿಸಿ, ಬಾಟಲಿ ಎಸೆದು ಹೋಗುತ್ತಾರೆ. ಶಾಲೆಯ ಬಾಗಿಲುಗಳನ್ನು ಮುರಿದು ಹಾಕುವುದು, ಕೊಠಡಿಯೊಳಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸುವುದು ಹಲವು ಬಾರಿ ನಡೆದಿವೆ. ಶಾಲೆಗೆ ರಕ್ಷಣೆ ಒದಗಿಸಬೇಕು‘ ಎನ್ನುತ್ತಾರೆ ಜಿಯಂಪಿ ಶಾಲಾ ಮುಖ್ಯ ಶಿಕ್ಷಕಿ ಗೀತಾ.

’ಮಕ್ಕಳಿಗೆ ಫುಟ್‌ಬಾಲ್ ತರಬೇತಿ ನೀಡಲು ವಿಶಾಲವಾದ ಮೈದಾನವಿದೆ. ಆದರೆ, ಅಲ್ಲಲ್ಲಿ ಗುಂಡಿ ಬಿದ್ದಿರುವುದರಿಂದ ಮತ್ತು ಹುಲ್ಲು ಬೆಳೆದಿರುವುದರಿಂದ ಆಟವಾಡಲು ಸಮಸ್ಯೆಯಾಗಿದೆ’ ಎಂದು ಜಿ.ಯಂ.ಪಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಾಸೂರ ನಂದ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು