ಶುಕ್ರವಾರ, ಮಾರ್ಚ್ 31, 2023
22 °C
ಹೇರೂರು ಭಾಗದಿಂದ ಬೇಕಿದೆ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆ

ಮಡಿಕೇರಿ: ಕಾಡಂಚಿನ ಮಕ್ಕಳು ಶಾಲೆಯಿಂದ ದೂರ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕುಶಾಲನಗರ ತಾಲ್ಲೂಕಿನ ಕಾಡಂಚಿನ ಮಕ್ಕಳು ಸಂಚಾರ ಸಮಸ್ಯೆಯಿಂದಾಗಿಯೇ ಶಾಲೆಗಳಿಂದ ದೂರ ಉಳಿದಿದ್ದಾರೆ. ವಾಹನ ವ್ಯವಸ್ಥೆ ಕಲ್ಪಿಸಿದರೆ ಮಕ್ಕಳು ಶಾಲೆಗೆ ಬರಲಿದ್ದಾರೆ ಎಂದು ಶಿಕ್ಷಕರು ಹೇಳುತ್ತಾರೆ. ಮಕ್ಕಳು ಉಚಿತ ಶಿಕ್ಷಣ ನೀಡುವ ಶಾಲೆ ತಲುಪುವುದು ಹೆಚ್ಚಿನ ವೆಚ್ಚ ಮಾಡಬೇಕಿರುವುದರಿಂದ ದುಬಾರಿಯಾಗಿ ಪರಿಣಮಿ ಸಿದೆ.

ಇಲ್ಲಿನ ಹೇರೂರಿನಲ್ಲಿ ಪ್ರಾಥಮಿಕ ಶಾಲೆಯಷ್ಟೇ ಇದೆ. ಇಲ್ಲಿಂದ ಪ್ರೌಢಶಾಲೆಗೆ ಬರಬೇಕೆಂದರೆ 5 ಕಿ.ಮೀ ದೂರದ ಬಸವನಹಳ್ಳಿ ಇಲ್ಲವೇ 7 ಕಿ.ಮೀ ದೂರದ 7ನೇ ಹೊಸಕೋಟೆಗೆ ಬರಬೇಕು. ಇಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕೋವಿಡ್‌ ನಂತರ ನಿಂತಿದೆ. ಹಣವುಳ್ಳ ಕೆಲವರು ಆಟೊರಿಕ್ಷಾದಲ್ಲಿ ಮಕ್ಕಳನ್ನು ಕಳುಹಿಸುತ್ತಾರೆ. ಮತ್ತೆ ಕೆಲವರು ಒಂದೇ ಬೈಕ್‌ನಲ್ಲಿ 4 ಮಕ್ಕಳನ್ನು ಕೂರಿಸಿಕೊಂಡು ಶಾಲೆಗೆ ಬಿಡುತ್ತಾರೆ. ಈ ಸೌಲಭ್ಯವಿಲ್ಲದ ಬಡ 14 ಮಕ್ಕಳು ಶಾಲೆಯನ್ನು ಬಿಟ್ಟಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ 7ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಸೋಮಯ್ಯ ಸಂಪರ್ಕಿಸಿದಾಗ ಅವರು ಅಸಹಾಯಕತೆ ವ್ಯಕ್ತ ಪಡಿಸಿದರು.

‘ಹೇರೂರಿಗೆ ತೆರಳಿ ಮನವೊಲಿಸಲು ಯತ್ನಿಸಿದೆವು. ಆದರೆ, ಪೋಷಕರು ತಮ್ಮ ಮಕ್ಕಳನ್ನು 7 ಕಿ.ಮೀ.ವರೆಗೆ ನಡಿಗೆಯಲ್ಲಿ ಕಳುಹಿಸಲು ಸಿದ್ಧವಿಲ್ಲ ಎಂದು ಹೇಳುತ್ತಾರೆ. ಮಕ್ಕಳೂ ತಮ್ಮ ಕೈಯಲ್ಲಿ ನಡೆಯಲಾಗದು ಎಂದು ತೋಟಗಳಿಗೆ ತೆರಳುತ್ತಾರೆ’ ಎಂದು ಹೇಳಿದರು.

ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಐಜೂ ಪ್ರತಿಕ್ರಿಯಿಸಿ, ‘ನಮ್ಮ ಶಾಲೆಗೆ ಹೇರೂರು ಗ್ರಾಮದಿಂದ ಬರುತ್ತಿದ್ದ 12 ಮಕ್ಕಳು ಗೈರು ಹಾಜರಾಗುತ್ತಿದ್ದಾರೆ. ನಮ್ಮ ಮನವೊಲಿಕೆ ಪ್ರಯತ್ನಗಳು ವಿಫಲವಾಗಿವೆ. ಇನ್ನುಳಿದ ಮಕ್ಕಳ ಪೋಷಕರು ದುಬಾರಿಯಾದರೂ ಸರಿಯೇ ಆಟೊರಿಕ್ಷಾದಲ್ಲಿ ಕಳುಹಿಸು ತ್ತಿದ್ದಾರೆ’ ಎಂದು ತಿಳಿಸಿದರು.

ಹೇರೂರು ಸುತ್ತಮುತ್ತಲಿನ ಬೆಟ್ಟದಕಾಡು, ಕಲ್ಲೂರು, ಕಲ್ಕೋರೆ, ತೊಂಡೂರು, ಅಂದಗೋವೆ, ಪೈಸಾರಿ ಸೇರಿದಂತೆ 2ರಿಂದ 8 ಕಿ.ಮೀ. ವ್ಯಾಪ್ತಿಯ ಗ್ರಾಮಗಳ ಮಕ್ಕಳಿಗೆ ಶಾಲೆಗೆ ಬರುವುದೇ ದೊಡ್ಡ ಸವಾಲಾಗಿದೆ. ಕಿ.ಮೀ.ಗಟ್ಟಲೆ ಕಾಡುಪ್ರಾಣಿಗಳ ಉಪಟಳದ ನಡುವೆಯೇ ಆತಂಕದಲ್ಲೇ ನಡೆದುಕೊಂಡೇ ಬರಬೇಕಿದೆ.

ಮೈಸೂರು ಜಿಲ್ಲೆಗೆ ಸೇರಿದ ತೆಪ್ಪದಕಂಡಿ ಗ್ರಾಮದ ಮಕ್ಕಳು ಕಾವೇರಿ ನದಿಯನ್ನು ತೂಗುಸೇತುವೆ ಮೂಲಕ ದಾಟಿ ಬರುತ್ತಾರೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವಾಗ ಕನಿಷ್ಠ ಎರಡು ತಿಂಗಳವರೆಗೆ ಇವರಿಗೆ ರಜೆ ನೀಡಲಾಗುತ್ತದೆ.

ದುಬಾರೆ ಹಾಡಿಗೆ ದೋಣಿ ವ್ಯವಸ್ಥೆ

ದುಬಾರೆ ಹಾಡಿಯಲ್ಲಿರುವ 8 ಮಕ್ಕಳಿಗೆ ಅರಣ್ಯ ಇಲಾಖೆ ಕಾವೇರಿ ನದಿಗೆ ದೋಣಿ ವ್ಯವಸ್ಥೆ ಮಾಡಿಕೊಟ್ಟಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ‘ದುಬಾರೆ ಹಾಡಿಯಿಂದ ನಂಜರಾಯಪಟ್ಟಣಕ್ಕೆ ತೆರಳಲು ಕಾವೇರಿ ನದಿಗೆ ದೋಣಿ ವ್ಯವಸ್ಥೆ ಕಲ್ಪಿಸಿದ್ದೇವೆ. ಇದರಿಂದ 8 ಮಕ್ಕಳು ಶಾಲೆಗೆ ಬರುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು