ನಾಪೋಕ್ಲು: ಸಮೀಪದ ಕಾಂತೂರು-ಮೂರ್ನಾಡಿನಲ್ಲಿ ನೂತನವಾಗಿ ರಚಿಸಲಾಗಿರುವ ಜೈಭೀಮ್ ಯುವಕ ಸಂಘದ ಅಧ್ಯಕ್ಷರಾಗಿ ಎಚ್.ಎಸ್. ಹೀರಾಸುಬ್ಬಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಾರ್ಯದರ್ಶಿಯಾಗಿ ಎಚ್.ಬಿ. ಮಂಜು ಆಯ್ಕೆಯಾಗಿದ್ದು, 30 ಮಂದಿ ಯುವಕ ಸಂಘದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮೂರ್ನಾಡಿನಲ್ಲಿ ನೂತನವಾಗಿ ಆರಂಭಿಸಲಾಗಿರುವ ಜೈಭೀಮ್ ಯುವಕ ಸಂಘದ ಕಚೇರಿಯನ್ನು ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ನಂದಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮುದಾಯ ಒಗ್ಗಟ್ಟಿನಿಂದ ಮುಂದುವರಿದಾಗ ಮಾತ್ರ ನಮ್ಮಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ. ಸರ್ಕಾರದ ಹಲವು ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ. ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವಂತಾಗಬೇಕು ಎಂದರು.
ಮಡಿಕೇರಿಯ ದೇವರಾಜ್, ಶಿಕ್ಷಕ ಎಚ್.ಎಲ್.ಭೈರ, ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಪಿಡಿಒ ಚಂದ್ರಮೌಳಿ, ಪ್ರಮುಖರಾದ ಪಾಪುಸಣ್ಣಯ್ಯ, ಎಚ್.ಪಿ. ಸುಬ್ರಮಣಿಸ ಮಾತನಾಡಿದರು. ಎಚ್.ಎಸ್. ಹೀರಾಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಿಗೆ ನೆನಪಿನಕಾಣಿಕೆ ನೀಡಿ ಸನ್ಮಾನಿಸಲಾಯಿತು.