ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಬೆಳೆಗಾರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌

10 ಎಚ್‌.ಪಿ ಪಂಪ್‌ಸೆಟ್‌ ತನಕ ಅನ್ವಯ: ಮರು ಸಂಪರ್ಕಕ್ಕೂ ಸಚಿವ ವಿ.ಸೋಮಣ್ಣ ಆದೇಶ
Last Updated 23 ಸೆಪ್ಟೆಂಬರ್ 2019, 12:37 IST
ಅಕ್ಷರ ಗಾತ್ರ

ಮಡಿಕೇರಿ: ‘ಕಾಫಿ ಬೆಳೆಗಾರರ 10 ಎಚ್‌.ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಪೂರೈಸಲಾಗುತ್ತಿದೆ. ವಿದ್ಯುತ್‌ ಶುಲ್ಕ ಪಾವತಿಸಿಲ್ಲವೆಂಬ ನೆಪವೊಡ್ಡಿ ಸಂಪರ್ಕ ಕಡಿತ ಮಾಡುವಂತಿಲ್ಲ. ಸಂಪರ್ಕ ಕಡಿತ ಮಾಡಿದ್ದರೆ ಮರು ಸಂಪರ್ಕ ಕಲ್ಪಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಲ್ಲಿ ಆದೇಶಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಗೂ ಮೊದಲು ಬೆಳೆಗಾರರಿಂದ ಮನವಿ ಸ್ವೀಕರಿಸಿದ ನಂತರ ಮಾತನಾಡಿ, ಕೊಡಗಿನ ಕಾಫಿ ಬೆಳೆಗಾರರು ಎರಡು ವರ್ಷದಿಂದ ಭಾರಿ ಮಳೆಯಿಂದ ಸಮಸ್ಯೆಗೆ ಸಿಲುಕಿದ್ದಾರೆ. ಮತ್ತೆ ಅಧಿಕಾರಿಗಳು ರೈತರಿಗೆ ತೊಂದರೆ ನೀಡಬಾರದು. ಉಚಿತ ವಿದ್ಯುತ್‌ ಪೂರೈಕೆಗೆ ಕ್ರಮ ಕೈಗೊಳ್ಳಲು, ಮುಖ್ಯಮಂತ್ರಿಯಿಂದಲೇ ಆದೇಶ ಹೊರಡಿಸಲಾಗುವುದು ಎಂದು ಸೆಸ್ಕ್‌ ಎಂಜಿನಿಯರ್‌ಗಳಿಗೆ ಸೋಮಣ್ಣ ಸೂಚಿಸಿದರು.

ಇಷ್ಟು ದಿನ ಯಾವ ರೀತಿ ಕೆಲಸ ನಿರ್ವಹಣೆ ಮಾಡಿದ್ದೀರೋ ತಿಳಿದಿಲ್ಲ. ಇನ್ಮುಂದೆ ಬದಲಾವಣೆ ಆಗಬೇಕು. ಸ್ಥಳೀಯರ ಸಮಸ್ಯೆ‍ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಭೂಪರಿವರ್ತನೆಗೆ ಅವಕಾಶವಿಲ್ಲವೆಂಬ ನೆಪವೊಡ್ಡಿ, ವಾಸದ ಮನೆ ನಿರ್ಮಾಣಕ್ಕೆ ತೊಂದರೆ ಕೊಡಬಾರದು. ಕಾರ್ಮಿಕರು ಹಾಗೂ ಬಡವರ ಮನೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಸೂಚಿಸಿದರು.

ಮಾಜಿ ಸೈನಿಕರೊಬ್ಬರಿಗೆ ಅರ್ಜಿ ವಿಲೇವಾರಿ ಮಾಡದಿರುವುದಕ್ಕೆ ಇದೇ ವೇಳೆ ಎಡಿಎಲ್‌ಆರ್‌ ಷಂಶುದ್ದೀನ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಬಹಳ ವರ್ಷದಿಂದ ಇಲ್ಲೇ ಠಿಕಾಣಿ ಹೂಡಿದ್ದೀಯಾ? ಬಳ್ಳಾರಿಗೆ ವರ್ಗಾವಣೆ ಮಾಡಬೇಕಾ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಪ್ರತಿಕ್ರಿಯಿಸಿ, 2018ರ ನೆರೆ ಸಂತ್ರಸ್ತರಿಗೆ ವಿತರಿಸಲು 35 ಮನೆಗಳು ಸಿದ್ಧಗೊಂಡಿವೆ. 180 ಮನೆಗಳು ಶೇ 90ರಷ್ಟು ಕಾಮಗಾರಿ ಪೂರ್ಣವಾಗಿದೆ. 318 ಮನೆಗಳ ಕಾಮಗಾರಿ ಆರಂಭವಾಗಿದೆ. ಇನ್ನು ಎರಡು ಸ್ಥಳಗಳಲ್ಲಿ ರಸ್ತೆ ಸಮಸ್ಯೆಯಿಂದ ಕಾಮಗಾರಿ ಆರಂಭಗೊಂಡಿಲ್ಲ ಎಂದು ಮಾಹಿತಿ ನೀಡಿದರು. ಆಗ ಬೋಪಯ್ಯ, ಗಾಳಿಬೀಡು, ಬಿಳಿಗಿರಿ ಹಾಗೂ ಸಂಪಾಜೆಗಳಲ್ಲಿ ಪುನರ್ವಸತಿಯ ಕಥೆ ಏನಾಯಿತು? ಅದನ್ನೇಕೆ ಈ ಕಡತದಲ್ಲಿ ನಮೂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂವಿಜ್ಞಾನಿಗಳ ವಿರುದ್ಧವೂ ಕಿಡಿ:

‘ಭಾರತೀಯ ಭೂಸರ್ವೇಕ್ಷಣಾ ಇಲಾಖೆಯ ಭೂವಿಜ್ಞಾನಿಗಳು ಬಾಯಿಗೆ ಬಂದಂತೆ ವರದಿ ನೀಡಿದ್ದಾರೆ. ಯಾರ ಒತ್ತಡದಿಂದ ಈ ರೀತಿಯಲ್ಲಿ ವರದಿ ಸಲ್ಲಿಸಿದ್ದಾರೆ ಎಂಬುದೂ ತಿಳಿದಿದೆ. ಅವರು ವರದಿಯಲ್ಲಿ ನೀಡಿದ್ದ ಅಂಶಗಳೆಲ್ಲವೂ ಉಲ್ಟಾ ಆಗಿವೇ’ ಎಂದು ಬೋಪಯ್ಯ ಪ್ರಶ್ನಿಸಿದರು.

ಬ್ರೋಕರ್‌ಗಳಿಗೆ ಅವಕಾಶ ಇಲ್ಲ:‘ತಹಶೀಲ್ದಾರ್ ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ಜನರಿಗೆ ಮುಕ್ತ ಅವಕಾಶ ಕಲ್ಪಿಸಬೇಕು. ತಹಶೀಲ್ದಾರ್‌ಗೆ ಯಾವುದಾದರು ಒತ್ತಡವಿದ್ದರೆ ತಿಳಿಸಲಿ’ ಎಂದು ಸಚಿವರು ತಿಳಿಸಿದರು.

ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ:ಮುಖ್ಯಮಂತ್ರಿ ಸೂಚನೆ ನೀಡಿದ ಬಳಿಕ ಅರಣ್ಯಾಧಿಕಾರಿಗಳು ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡುತ್ತಿದ್ದಾರೆ. ಆದರೆ, ರಸ್ತೆ, ನಿರ್ಮಿಸಲು ಅಧಿಕಾರಿಗಳ ಅಡ್ಡಿ ಪಡಿಸುತ್ತಿದ್ದಾರೆ ಎಂದು ಬೋಪಯ್ಯ ದೂರಿದರು. ಅದಲ್ಲದೇ ದೇವಮಾಚಿ ಅರಣ್ಯ ಪ್ರದೇಶವನ್ನು ನಾಗರಹೊಳೆ ಅಭಯಾರಣ್ಯಕ್ಕೆ ಸೇರ್ಪಡೆ ಮಾಡುವ ಮೂಲಕ ಆದಿವಾಸಿಗಳಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆಪಾದಿಸಿದರು. ಅದಕ್ಕೆ ಸಚಿವರು ಪ್ರತಿಕ್ರಿಯಿಸಿ, ಮಾನವೀಯ ಆಧಾರದಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಅವರಿಗೂ ಮೂಲಸೌಲಭ್ಯ ಕಲ್ಪಿಸಬೇಕು. ಅಕ್ಟೋಬರ್‌ 20ರ ನಂತರ ಬೆಂಗಳೂರಿನಲ್ಲಿ ಅರಣ್ಯಾಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಲಾಗುವುದು ಎಂದು ಹೇಳಿದರು.

ಜಿಯೋ ಸಂಪರ್ಕಕ್ಕೆ ತೊಂದರೆ ಬೇಡ: ಬಿಎಸ್ಎನ್‌ಎಲ್‌ ಸುಧಾರಣೆ ಆಗುವುದಿಲ್ಲ. ಆದ್ದರಿಂದ ಜಿಯೋನ ಒಎಫ್‌ಸಿ ಕೇಬಲ್‌ ಎಳೆಯಲಾಗುತ್ತಿದೆ. ಗುಂಡಿ ತೆಗೆಯಲು ಅರಣ್ಯಾಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂಬ ದೂರು ಬಂದಿದೆ. ಅಡ್ಡಿ ಪಡಿಸಬಾರದು ಎಂದು ಸಂಸದ ಪ್ರತಾಪ ಸಿಂಹ, ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. ಬಳಿಕ ದಸರಾ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ಶಾಸಕ ಎ.ಪಿ.ಅಪ್ಪಚ್ಚುರಂಜನ್‌ ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ, ವೀಣ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ಜಿಲ್ಲಾ ಪಂಚಾಯಿತಿ ಸಿಒಇ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌, ಎಡಿಸಿ ಡಾ.ಸ್ನೇಹಾ, ಎಸಿ ಜವರೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT