ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಹಣ್ಣಿನ ಬೆಳೆಯಿಂದ ಸಿಹಿಯಾದ ಬಾಳು!

ಒಂದು ಕೆ.ಜಿ ತೂಕದ ಸೇಬು, ವಿದೇಶಿ ಹಣ್ಣು ರಾಂಬುಟನ್ ಬೆಳೆದ ಮಕ್ಕಿಮನೆ ಸುಧೀರ್
Last Updated 3 ಫೆಬ್ರುವರಿ 2023, 6:18 IST
ಅಕ್ಷರ ಗಾತ್ರ

ನಾಪೋಕ್ಲು: ಮಿರಾಕಲ್ ಹಣ್ಣು, ವಾಟರ್ ಆಪಲ್, ಆಸ್ಟ್ರೇಲಿಯನ್ ಗೋವಾ, ಬ್ಲಾಕ್ ಬೆರಿ, ಬ್ಲೂ ಬೆರಿ, ಬಿಳಿ ಸಪೋಟ, ಕಪ್ಪು ಸಪೋಟ, ಮ್ಯಾಂಗೋಸ್ಪಿನ್, ಅಂಜೂರ, ಸ್ಟಾರ್ ಹಣ್ಣು, ನೋನಿ, ಡ್ರ್ಯಾಗನ್ ಫ್ರೂಟ್... ಒಂದೇ, ಎರಡೇ ಹತ್ತು ಹಲವು ತಳಿಯ ವಿದೇಶಿ ಹಾಗೂ ದೇಶಿಯ ಹಣ್ಣುಗಳನ್ನು ನೋಡಬೇಕೆಂದರೆ ಚೆಯ್ಯಂಡಾಣೆಯ ಮಕ್ಕಿಮನೆ ಸುಧೀರ್ ಅವರ ತೋಟಕೆ ಬರಬೇಕು. ಇಲ್ಲಿರುವ ನಾನಾ ಬಗೆಯ ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ.

ರಾಂಬುಟನ್ ವಿದೇಶಿ ಹಣ್ಣು. ಇತ್ತೀಚೆಗೆ ಎಲ್ಲೆಡೆ ಭಾರಿ ಬೇಡಿಕೆ ಪಡೆಯುತ್ತಿದೆ. ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷ್ಯಾಗಳಲ್ಲಿ ಅಧಿಕವಾಗಿ ಬೆಳೆಯುವ ಹಣ್ಣು. ಈ ಬೆಳೆಗೆ ಕೊಡಗು, ಕೇರಳ, ದಕ್ಷಿಣ ಕನ್ನಡ ಜಿಲ್ಲೆಯ ಮಳೆ ಹಾಗೂ ಹವಾಮಾನ ಸೂಕ್ತವಾಗಿದೆ. ರಾಂಬುಟನ್ ಕೃಷಿಯಲ್ಲಿ ಯಶಸ್ಸು ಪಡೆದ ಕೃಷಿಕ ಸುಧೀರ್ ನಾನಾ ಹಣ್ಣುಗಳನ್ನು ತಮ್ಮ ನೆಲದಲ್ಲಿ ಬೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದು ಯಶಸ್ಸು ಗಳಿಸಿದ್ದಾರೆ.

2013ರಲ್ಲಿ ಗಿಡಕ್ಕೆ ₹ 350 ರಂತೆ ಮೊಟ್ಟಮೊದಲ ಬಾರಿಗೆ ಕೇರಳದ ಹೋಂ ಗ್ರೋನ್ ನರ್ಸರಿ, ಕೊಟ್ಟಾಯಂನಿಂದ ಎನ್ 18 ರಾಂಬುಟನ್ ತಳಿಯನ್ನು ಇವರು ತಂದು ಬೆಳೆಸಿದರು. ಇದು 3 ವರ್ಷದಲ್ಲೇ ಸಾಧಾರಣ ಫಸಲನ್ನು ನೀಡಿತ್ತು. ನಂತರ ಮಲ್ವಾನ, ಸ್ಕೂಲ್ ಬಾಯ್, ಕಿಂಗ್ ತಳಿಗಳನ್ನು ತಂದು, ನೆಟ್ಟು ರಾಂಬುಟನ್ ಕೃಷಿ ಆರಂಭಿಸಿದರು. ಈ ತಳಿಗಳು 5 ವರ್ಷಗಳಲ್ಲಿ ಫಸಲು ನೀಡಿವೆ. ಲಿಚಿ ಸೇರಿದಂತೆ 70ಕ್ಕೂ ಅಧಿಕ ವಿದೇಶಿ ಹಣ್ಣುಗಳನ್ನು ಸುಧೀರ್ ಬೆಳೆಯುತ್ತಿದ್ದಾರೆ.

ಸುಧೀರ್ ಅರ್ಧ ಎಕರೆಗೂ ಅಧಿಕ ಸ್ಥಳದಲ್ಲಿ 150ಕ್ಕೂ ಹೆಚ್ಚು ಥೈಲ್ಯಾಂಡಿನ ವಿಎನ್ಆರ್ ಸೀಬೆ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಸೀಬೆ ಇಳುವರಿಯು ಉತ್ತಮವಾಗಿದೆ. ಕಳೆದ ವರ್ಷ ಕೆ.ಜಿಗೆ ₹ 80ರಂತೆ ಸೀಬೆ ಮಾರಾಟ ಮಾಡಿದ್ದಾರೆ. ಒಂದು ಸೀಬೆಹಣ್ಣಿನ ತೂಕ ಒಂದು ಕೆ.ಜಿ ಅಧಿಕವಿದೆ. ಈ ಗಿಡವನ್ನು ಛತ್ತೀಸ್‌ಘಡದಿಂದ ತಂದಿದ್ದು ಎನ್ನುತ್ತಾರೆ ಸುಧೀರ್. ಕೇವಲ ಲಾಭದ ದೃಷ್ಟಿಯಿಂದ ಸುಧೀರ್ ಹಣ್ಣಿನ ಗಿಡಗಳನ್ನು ನೆಟ್ಟಿಲ್ಲ. ಹವ್ಯಾಸದಿಂದ ಹಣ್ಣಿನ ಗಿಡಗಳನ್ನು ಬೆಳೆಯುತ್ತಿದ್ದು, ಇತರ ಕೃಷಿಕರಿಗೂ ಇವರು ಮಾದರಿಯಾಗಿದ್ದಾರೆ.

ಸುಧೀರ್ ಕೊಡಗು ಜಿಲ್ಲೆಯಲ್ಲಿ ಮಾತ್ರವಲ್ಲ, ಚಿಕ್ಕಮಗಳೂರು, ತೀರ್ಥಹಳ್ಳಿ, ಕೇರಳ.. ಹೀಗೆ ಹಲವು ಭಾಗಗಳ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಉತ್ತಮ ತಳಿಯ ಹಣ್ಣಿನ ಗಿಡಗಳು ಎಲ್ಲೇ ಲಭ್ಯವಿರಲಿ ಅದರ ಮಾಹಿತಿ ಪಡೆದು ಗಿಡ ತಂದು ಬೆಳೆಸಿ ಸಾರ್ಥಕತೆ ಮೆರೆಯುತ್ತಾರೆ.

ಕೃಷಿ ಕ್ಷೇತ್ರದ ಸಾಧನೆಗಾಗಿ ಹವ್ಯಕ ಸಮುದಾಯ ಸುಧೀರ್ ಅವರಿಗೆ ‘ಕೃಷಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಬ್ರಾಹ್ಮಣ ವಿದ್ಯಾಭಿವೃದ್ದಿ ನಿಧಿ ವತಿಯಿಂದ ಉತ್ತಮ ಕೃಷಿಕ ಪ್ರಶಸ್ತಿ ಲಭಿಸಿದೆ. ಈಚೆಗೆ ಬೆಟ್ಟಗೇರಿಯಲ್ಲಿ ನಡೆದ ಮಡಿಕೇರಿ ತಾಲ್ಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೋಟಗಾರಿಕಾ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಸನ್ಮಾನಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಕ್ಕಿಮನೆ ಸುಧೀರ್, ‘ರಾಂಬುಟನ್ ಹಣ್ಣು ಕೆಜಿಗೆ ₹ 250 ರಿಂದ 300ವರೆಗೆ ಮಾರಾಟವಾಗುತ್ತಿದೆ. 2 ಎಕರೆಯಲ್ಲಿ 3 ಲಕ್ಷಕ್ಕೂ ಅಧಿಕ ಲಾಭ ಗಳಿಸಬಹುದು. ರಾಂಬುಟನ್ ಹಣ್ಣಿನಿಂದ ಜ್ಯೂಸ್, ಪಲ್ಪ್ ಮಾಡಬಹುದು. 18ರಿಂದ 20 ಅಡಿ ಅಂತರದಲ್ಲಿ ಗಿಡ ನೆಡಬೇಕು. ಅಡಿಕೆ ಬೆಳೆಗಿಂತ ಇದು ಉತ್ತಮ ಇಳುವರಿ ನೀಡುತ್ತದೆ. ಅಡಿಕೆ 4 ವರ್ಷದಲ್ಲಿ ಕೊಡುವ ಲಾಭವನ್ನು ರಾಂಬುಟನ್ ಒಂದು ವರ್ಷದಲ್ಲಿ ಕೊಡುತ್ತದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT