ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮ ಗಾಂಧಿ ಹೊಸ ಪ್ರತಿಮೆ ನಿರ್ಮಿಸಲು ಚಿಂತನೆ

ಮಡಿಕೇರಿಯಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ವಿವಿಧ ಸ್ಪರ್ಧೆ
Last Updated 24 ಸೆಪ್ಟೆಂಬರ್ 2019, 13:12 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಗಾಂಧಿ ಮಂಟಪದಲ್ಲಿ ಮಹಾತ್ಮ ಗಾಂಧೀಜಿಯ ಹೊಸ ಪ್ರತಿಮೆಯನ್ನು ನಿರ್ಮಿಸಲು ಚಿಂತಿಸಲಾಗಿದೆ ಎಂದು ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಮಾಹಿತಿ ನೀಡಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸರ್ವೋದಯ ಸಮಿತಿ ವತಿಯಿಂದ ಗಾಂಧೀಜಿ ವಿಚಾರಧಾರೆಯ ಕುರಿತು ಮಂಗಳವಾರ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಹಿಂಸಾ ತತ್ವದ ಮೂಲಕ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳು ಎಲ್ಲೆಡೆ ಪಸರಿಸುವಂತಾಗಲಿ. ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ರೂಪಿಸಿದ ಚಳವಳಿಗಳು, ಹೋರಾಟಗಳು, ಅಹಿಂಸಾತ್ಮಕ ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಂತಾಗಲು ಸರ್ವೋದಯ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅ.2ರಂದು ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆಂಚಪ್ಪ ಮಾತನಾಡಿ, ಗಾಂಧೀಜಿ ಅವರು ಸ್ವಾತಂತ್ರ್ಯಕ್ಕಾಗಿ ಅಹಿಂಸೆ ಮಾರ್ಗ ಅನುಸರಿಸಿ ಇಡೀ ವಿಶ್ವವನ್ನೇ ಗೆದ್ದರು. ಆದ್ದರಿಂದ ಶಾಂತಿ, ಸಹನೆ, ತಾಳ್ಮೆ, ಅಹಿಂಸಾ ಮಾರ್ಗ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂದರು.

ಗಾಂಧೀಜಿಯವರು ಗ್ರಾಮೀಣಾಭಿವೃದ್ಧಿ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದ್ದರು. ಇದರಿಂದ ಗ್ರಾಮೀಣಾಭಿವೃದ್ಧಿ ಕನಸು ಕಂಡಿದ್ದರು ಎಂದರು.

ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಮಾತನಾಡಿ, ಗಾಂಧೀಜಿಯವರ ಬಾಲ್ಯದ ಜೀವನವನ್ನು ಸ್ಮರಿಸಿಕೊಳ್ಳಬೇಕು. ಗಾಂಧೀಜಿ ಅವರ ಪುಸ್ತಕಗಳನ್ನು ಅಧ್ಯಯನ ಮಾಡುವಂತಾಗಬೇಕು. ಗಾಂಧೀಜಿ ವಿಚಾರಧಾರೆಗಳನ್ನು ತಿಳಿದುಕೊಂಡು ಸತ್ಪ್ರಜೆಗಳಾಗಿ ಬದುಕಬೇಕು ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ಗಾಂಧೀಜಿಯವರ ಸರಳತೆ, ಸ್ವಾತಂತ್ರ್ಯಕ್ಕಾಗಿ ದುಡಿದ, ಹೋರಾಟ ಮಾಡಿದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನಾ ಮಾತನಾಡಿ, ‘ಮಹಾತ್ಮ ಗಾಂಧೀಜಿ ಅವರು ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿದ್ದು, ಮಹಾತ್ಮ ಗಾಂಧೀಜಿಯವರ ಸಂದೇಶದಂತೆ ನಡೆದುಕೊಳ್ಳಬೇಕು’ ಎಂದು ಅವರು ನುಡಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ, ‘ನಗರದಲ್ಲಿ ₹ 2 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಸಭಾ ಭವನ, ಗ್ರಂಥಾಲಯ ಮತ್ತಿತರ ಒಳಗೊಂಡಿದೆ’ ಎಂದರು.

ಗಾಂಧೀಜಿಯವರಿಗೆ ಪ್ರಿಯವಾದ ವೈಷ್ಣವ ಜನನಿ ಹಾಡನ್ನು ಲಿಯಾಕತ್ ಆಲಿ ಅವರು ಹಾಡಿದರು. ರೇವತಿ ರಮೇಶ್, ರಂಜಿತ್, ಮಂಜುಳ ನಿರೂಪಿಸಿದರು. ವಿಲ್‌ಫ್ರೆಡ್ ಕ್ರಸ್ತಾ ಸ್ವಾಗತಿಸಿದರು. ಕೋಡಿ ಚಂದ್ರಶೇಖರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT