ಸಿದ್ದಾಪುರ: ‘ಗೌರಿ– ಗಣೇಶ ವಿಸರ್ಜನೆಯ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಇಲಾಖೆಯೊಂದಿಗೆ ಸಹಕಾರ ನೀಡಬೇಕು’ ಎಂದು ಮಡಿಕೇರಿ ವೃತ್ತ ನಿರೀಕ್ಷಕ ರಾಜು ಮನವಿ ಮಾಡಿದರು.
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಗಣೇಶ ವಿಸರ್ಜನೆಯ ಸಂದರ್ಭ ಡಿ.ಜೆಗೆ ಅವಕಾಶವಿಲ್ಲ. ಗಣಪತಿ ಪ್ರತಿಷ್ಠಾಪನೆಗೆ ಪೊಲೀಸ್, ಅಗ್ನಿಶಾಮಕ, ಗ್ರಾ.ಪಂ, ವಿದ್ಯುತ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮಣ್ಣಿನ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು’ ಎಂದರು.
‘ರಾತ್ರಿ 10 ಗಂಟೆಯೊಳಗಾಗಿ ವಿಗ್ರಹಗಳ ವಿಸರ್ಜನೆ ಮಾಡಬೇಕು. ಕೆರೆ ಅಥವಾ ನದಿಯಲ್ಲಿ ರಾತ್ರಿ ವೇಳೆ ವಿಸರ್ಜನೆ ಮಾಡುವ ಸಂದರ್ಭ ಬೆಳಕಿನ ವ್ಯವಸ್ಥೆ ಮಾಡಬೇಕು. ಈಜು ಬಲ್ಲವರು ಮಾತ್ರ ನೀರಿಗೆ ಇಳಿಯಬೇಕು. ಗೌರಿ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ’ ಬಗ್ಗೆ ಮಾಹಿತಿ ನೀಡಿದರು.
ಸಿದ್ದಾಪುರ ಪಿಎಸ್‌ಐ ರಾಘವೇಂದ್ರ ಮಾತನಾಡಿ, ‘ಠಾಣಾ ವ್ಯಾಪ್ತಿಯಲ್ಲಿ ಒಟ್ಟು 33 ಗಣೇಶ ವಿಸರ್ಜನೆ ನಡೆಯಲಿದ್ದು, ಗೌರಿ ಗಣೇಶೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಲಾಖೆಯೊಂದಿಗೆ ಸಹಕಾರ ನೀಡಬೇಕು. ಹೊರಭಾಗದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಇಬ್ಬರು ಪ್ರತಿಷ್ಠಾಪಿಸಿದ ಸ್ಥಳದಲ್ಲೇ ಇರಬೇಕು. ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಿದ್ದಾಪುರ, ನೆಲ್ಯಹುದಿಕೇರಿ, ಪಾಲಿಬೆಟ್ಟ, ಚೆನ್ನಯ್ಯನಕೋಟೆ, ಗುಹ್ಯ, ಕಣ್ಣಂಗಾಲ, ಇಂಜಲಗರೆ ಸೇರಿದಂತೆ ಠಾಣಾ ವ್ಯಾಪ್ತಿಯ ಗೌರಿ ಗಣೇಶ ಸಮಿತಿಯ ಪ್ರಮುಖರು ಹಾಜರಿದ್ದರು.