ಭಾನುವಾರ, ಸೆಪ್ಟೆಂಬರ್ 26, 2021
21 °C
ಕೊನೆಗೂ ಹಸಿ, ಒಣ ಕಸ ಪ್ರತ್ಯೇಕಿಸಿ ಸಂಗ್ರಹಿಸಲು ಮುಂದಾದ ನಗರಸಭೆ

ಮಡಿಕೇರಿ | ತ್ಯಾಜ್ಯದ ವಿರುದ್ಧ ಸಮರ ಆರಂಭ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಮಂಜಿನ ನಗರಿ’ಯೆಂದೇ ಪ್ರಸಿದ್ಧವಾಗಿರುವ ಮಡಿಕೇರಿಯಲ್ಲಿ ತ್ಯಾಜ್ಯ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಹಲವು ವರ್ಷಗಳಿಂದ ಮೈಮರೆತಿದ್ದ ನಗರಸಭೆ, ಕೊನೆಗೂ ಎಚ್ಚೆತ್ತುಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ನಗರಸಭೆಯೊಂದಿಗೆ ಕೊಡಗು ಫಾರ್‌ ಟುಮಾರೋ ಹಾಗೂ ಗ್ರೀನ್‌ ಸಿಟಿ ಫೋರಂ ಸಹಯೋಗ ನೀಡಿದ್ದು ಈಗ ತ್ಯಾಜ್ಯದ ವಿರುದ್ಧ ಸಮರ ಸಾರಲಾಗುತ್ತಿದೆ.

ತ್ಯಾಜ್ಯ ಸಂಗ್ರಹಿಸುವ ಕೆಲಸಗಾರರು ತಮ್ಮ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಸಾರ್ವಜನಿಕರು, ಹಸಿ ಕಸ, ಒಣ ಕಸ ಹಾಗೂ ಬೇಡವಾದ ಕಸವನ್ನು ಪ್ರತ್ಯೇಕಿಸಿ, ನೀಡಬೇಕು ಎಂಬ ಬೋರ್ಡ್‌ಗಳು ಅಲ್ಲಲ್ಲಿ ಎಚ್ಚರಿಕೆಯ ಸಂದೇಶ ನೀಡುತ್ತಿವೆ. ಅದಲ್ಲದೇ ಘನ ತ್ಯಾಜ್ಯ ವಿಲೇವಾರಿ ಅಭಿಯಾನಕ್ಕೆ ನ.16ರಂದು ಬೆಳಿಗ್ಗೆ 10.30ಕ್ಕೆ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಚಾಲನೆ ನೀಡಲಿದ್ದಾರೆ.

ಗ್ರೀನ್‌ ಸಿಟಿ ಫೋರಂ ಹಾಗೂ ಕೊಡಗು ಫಾರ್‌ ಟುಮಾರೋ ಸದಸ್ಯರು, ಸದ್ದಿಲ್ಲದೇ ಪ್ರತಿನಿತ್ಯ ಮನೆ ಮನೆಗೆ ತೆರಳಿ ಹಸಿ ಹಾಗೂ ಒಣ ಕಸ ಬೇರ್ಪಡಿಸಿ ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ, ಪ್ರತ್ಯೇಕಿಸಿ ಕಸ ನೀಡದವರನ್ನು ತಡೆದು ಅಲ್ಲೇ ತಿಳಿದು ಹೇಳುತ್ತಿದ್ದಾರೆ. ರಸ್ತೆ ಬದಿಯಲ್ಲಿ ಕಸ ಹಾಕಿದರೆ ದಂಡವನ್ನೂ ಕಟ್ಟಬೇಕು ಎಂದು ಎಚ್ಚರಿಕೆ ನೀಡಲಾಗುತ್ತಿದೆ. ನಗರಸಭೆ ಚುನಾವಣೆ ನಡೆದು ಸದಸ್ಯರು ಅಧಿಕಾರ ವಹಿಸಿಕೊಂಡ ಮೇಲೆ ಕಸ ಎಸೆಯುವ ಸ್ಥಳಕ್ಕೆ ಸಿಸಿ ಟಿವಿ ಕ್ಯಾಮೆರಾ ಹಾಕಲು ಚಿಂತಿಸಲಾಗಿದೆ.

ಮಡಿಕೇರಿಯ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದ ದೊಡ್ಡ ಸಮಸ್ಯೆಯಾಗಿದೆ. ಸ್ಟೋನ್‌ ಹಿಲ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಸುರಿದಿದ್ದು ಬೆಟ್ಟವೇ ಕುಸಿಯುವ ಆತಂಕ ಎದುರಾಗಿದೆ. ಕಸದ ಸಾಮ್ರಾಜ್ಯವೇ ಸೃಷ್ಟಿಯಾಗಿ ಬೆಟ್ಟದ ಮೇಲೊಂದು ಬೆಟ್ಟ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಕಸವು ಕೊಳೆತು ಅದರಲ್ಲಿ ನೀರು ಸಂಗ್ರಹವಾಗಿ ಕೆಲವು ಬಡಾವಣೆಗಳಿಗೆ ಆಪತ್ತು ತರುವ ಸಾಧ್ಯತೆಯಿದೆ. ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತನೆ ಮಾಡಲಾಗುವುದು ಎಂದು ನಗರಸಭೆ ಹಿಂದಿನ ಸಭೆಗಳಲ್ಲಿ ಚರ್ಚೆಯಾಗಿದ್ದರೂ, ಅದು ಇದುವರೆಗೂ ಜಾರಿಗೆ ಬಂದಿಲ್ಲ.

30 ಟನ್‌ ಕಸ ಸಂಗ್ರಹ: ಮಡಿಕೇರಿಯಲ್ಲಿ ನಿತ್ಯ ಅಂದಾಜು 30 ಟನ್‌ನಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದೆ. ಮಳೆಗಾಲಕ್ಕೂ ಮೊದಲೇ ಈ ಅಭಿಯಾನ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಆದರೆ, ಮಳೆ ತೀವ್ರಗೊಂಡ ಕಾರಣಕ್ಕೆ ಜಾರಿ ಆಗಿರಲಿಲ್ಲ. ಇನ್ಮುಂದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ನಗರಸಭೆ ಪೌರಾಯುಕ್ತ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಯಂತ್ರಗಳೂ ಹಾಳಾಗಿವೆ: ಸ್ಟೋನ್‌ ಹಿಲ್‌ನಲ್ಲಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲು ಅಳವಡಿಸಿದ್ದ ಯಂತ್ರಗಳು ತುಕ್ಕು ಹಿಡಿದಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಯಂತ್ರಗಳನ್ನು ಅಳವಡಿಸಿದ್ದರೂ ಅವು ಉಪಯೋಗಕ್ಕೆ ಬರುತ್ತಿಲ್ಲ. ಈಗ ಅಭಿಯಾನ ಆರಂಭವಾಗಿದ್ದರೂ, ತ್ಯಾಜ್ಯದ ಸಂಸ್ಕರಣೆ ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ನಗರಸಭೆ ಅಧಿಕಾರಿಗಳು ಯಂತ್ರಗಳನ್ನು ದುರಸ್ತಿ ಮಾಡಲಾಗಿದೆ ಎಂದು ಹೇಳಿದ್ದರೂ, ಸಾರ್ವಜನಿಕರು ಮಾತ್ರ ಆ ಯಂತ್ರಗಳು ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಹಲವು ಬಡಾವಣೆಗೆ ತೊಂದರೆ: ನಗರಸಭೆಯು ಸ್ಟೋನ್‌ ಹಿಲ್‌ನಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯುತ್ತಿರುವ ಪರಿಣಾಮ ನಗರದ ನಾಲ್ಕು ಬಡಾವಣೆಗಳ ನಿವಾಸಿಗಳಿಗೆ ರೋಗದ ಭೀತಿಯೂ ಇದೆ. ಚಳಿಗಾಲ ಆರಂಭವಾಗಿದ್ದು ನೊಣಗಳ ಹಾವಳಿಯೂ ಇದೆ ಎಂದು ಬಡಾವಣೆ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ನಗರದ 23 ವಾರ್ಡ್‌ಗಳಿಂದ ಕಸವನ್ನು ಸಂಗ್ರಹಿಸಿ ತಂದು ಸ್ಟೋನ್‌ ಹಿಲ್‌ ಬಳಿಯ ಬೆಟ್ಟದಲ್ಲಿ ಸುರಿಯಲಾಗುತ್ತಿದೆ. ಬೆಟ್ಟದ ತುಂಬೆಲ್ಲ ಕಸ ಹರಡುತ್ತಿರುವುದರಿಂದ ಸುಬ್ರಹ್ಮಣ್ಯ ನಗರ, ರೈಫಲ್ ರೇಂಜ್‌, ವಿದ್ಯಾನಗರ, ಮುಳಿಯ ಬಡಾವಣೆಯ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿತ್ತು.

ತ್ಯಾಜ್ಯ ಸಂಸ್ಕರಿಸಿ ಅದನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ. ನಗರಸಭೆಗೆ ಅವಧಿ ಮುಗಿದಿರುವ ಕಾರಣಕ್ಕೆ ಅದಕ್ಕೆ ಬಜೆಟ್‌ ಹೊಂದಾಣಿಕೆ ಮಾಡಲು ಆಡಳಿತವಿಲ್ಲ. ಅದು ಸಹ ಅಧಿಕಾರಿಗಳಿಗೆ ತಲೆನೋವು ತಂದಿದೆ.

ಕಸ ಬೇರ್ಪಡಿಸುವಿಕೆಯ ಮಾರ್ಗಸೂಚಿ
ಹಸಿ ಕಸ... (ಪ್ಲಾಸ್ಟಿಕ್‌ ಬಳಕೆ ಬೇಡ)
ಅಡುಗೆ ಮನೆ ಕಸ:
ತರಕಾರಿ ಹಾಗೂ ಹಣ್ಣುಗಳ ಸಿಪ್ಪೆ, ಅಳಿದುಳಿದ ಅನ್ನದ ಪದಾರ್ಥ, ಮೊಟ್ಟೆಯ ಚಿಪ್ಪು, ಚಿಕನ್‌ – ಮೀನು– ಮಾಂಸದ ಮೂಳೆ, ಕೊಳೆತ ಹಣ್ಣು ಹಾಗೂ ತರಕಾರಿ, ಖಾದ್ಯ ಪದಾರ್ಥಗಳಿಗೆ ಅಂಟಿದ ಟಿಶ್ಯೂ ಪೇಪರ್‌, ಚಹಾ ಹಾಗೂ ಕಾಫಿ ಪುಡಿ, ಟೀ ಬ್ಯಾಗ್‌, ಬಾಳೆಯೆಲೆ, ದೊನ್ನೆ ಇತ್ಯಾದಿ.
ತೋಟದ ಕಸ: (ಸಣ್ಣ ಪ್ರಮಾಣದಲ್ಲಿ ಮಾತ್ರ) ಬಿದ್ದ ಎಲೆಗಳು, ಕೊಂಬೆಗಳು ಪೂಜಾ ಹೂವು, ಹೂಮಾಲೆ ಹಾಗೂ ಕಳೆ.
ಒಣ ಕಸ (ವಿಲೇವಾರಿಗೆ ಉಪಯೋಗಿಸಬಹುದಾದ ಚೀಲಗಳಲ್ಲಿ ಬಳಸಿ)
ಪ್ಲಾಸ್ಟಿಕ್‌ (ಮಣ್ಣಾಗಿದ್ದರೆ ತೊಳೆಯಬೇಕು):
ಪ್ಲಾಸ್ಟಿಕ್‌ ಕವರ್‌, ಬಾಟಲಿಗಳು, ಡಬ್ಬಿಗಳು, ಹಾಲು– ಮೊಸರು ಪ್ಯಾಕೆಟ್‌.
ಕಾಗದ: ದಿನಪತ್ರಿಕೆಗಳು, ನಿಯತಕಾಲಿಕೆಗಳು, ಲೇಖನ ಸಾಮಗ್ರಿ, ಜಂಕ್‌ ಮೇಲ್‌, ರಟ್ಟಿನ ಡಬ್ಬಿಗಳು, ಪಿಜ್ಜಾ ಡಬ್ಬಿಗಳು, ಟೆಟ್ರಾ ಪ್ಯಾಕ್‌, ಪೇಪರ್‌ ಬಟ್ಟಲು ಹಾಗೂ ಪ್ಲೇಟ್‌ಗಳು.
ಲೋಹ: ಹಳೇ ಪಾತ್ರೆಗಳು, ತಗಡಿನ ಕ್ಯಾನ್‌ಗಳು.
ಗಾಜು (ಎಚ್ಚರಿಕೆ ನಿಭಾಯಿಸಿ): ಒಡೆಯದ ಗಾಜಿನ ಬಾಟಲಿಗಳು.
ಇತರೆ ಒಣಕಸ: ರಬ್ಬರ್‌, ಥರ್ಮೊಕೋಲ್‌, ಹಳೆಯ ಒರೆಸುವ ಬಟ್ಟೆ, ಸ್ಪಂಜು, ಸೌಂದರ್ಯ ಪದಾರ್ಥಗಳು, ಸೆರಾಮಿಕ್ಸ್‌ ಕಟ್ಟಿಗೆ ತುಣುಕುಗಳು, ತೆಂಗಿನ ಚಿಪ್ಪುಗಳು.
ಇ–ತ್ಯಾಜ್ಯ: ಬ್ಯಾಟರಿ, ಸಿ.ಡಿಗಳು, ಟೇಪ್ಸ್‌, ಬಲ್ಬ್‌, ಟ್ಯೂಬ್‌ ಲೈಟ್‌, ಸಿಎಫ್ಎಲ್‌ (ಪ್ರತ್ಯೇಕವಾಗಿ ಒಪ್ಪಿಸಬೇಕು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು