ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಮಾಂದ್ಯ ಮಕ್ಕಳ ಬದುಕಿಗೆ ಆಸರೆ

ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ಚೆಶೈರ್ ಹೋಂ ಅಧ್ಯಕ್ಷೆ ಗೀತಾ ಚಂಗಪ್ಪ ಸಾಧನೆ
Last Updated 8 ಮಾರ್ಚ್ 2020, 10:39 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡುವ ಜೊತೆಗೆ ವೃತ್ತಿ ತರಬೇತಿ ಕೊಡಿಸುವ ಮೂಲಕ ಅವರ ಬದುಕಿನಲ್ಲಿ ಬೆಳಕಾಗಿದ್ದಾರೆ ಚೆಪ್ಪುಡೀರ ಗೀತಾ ಚಂಗಪ್ಪ.

ಗುಡ್ಡಂಡ ಸೋಮಣ್ಣ, ಸಿ.ಎ.ಮುತ್ತಣ್ಣ, ಡಾ.ಎ.ಸಿ.ಗಣಪತಿ, ಕೂತಂಡ ಪೂವಯ್ಯ ಅವರಿಂದ ಪಾಲಿಬೆಟ್ಟದಲ್ಲಿ ಆರಂಭಗೊಂಡ ಬುದ್ಧಿಮಾಂದ್ಯ ಮಕ್ಕಳ ಪೋಷಣಾ ಸಂಸ್ಥೆಯಲ್ಲಿ (ಚೆಶೈರ್ ಹೋಂ) ಅಧ್ಯಕ್ಷರಾಗಿರುವ ಗೀತಾ ಚಂಗಪ್ಪ ಅವರು ಇಲ್ಲಿನ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಸಂಸ್ಥೆಯಲ್ಲಿ 68 ಮಕ್ಕಳಿದ್ದು, ಗೀತಾ ಚಂಗಪ್ಪ ಅವರು ಮಕ್ಕಳ ಮೆಚ್ಚಿನ ಶಿಕ್ಷಕಿಯಾಗಿದ್ದಾರೆ. ಇವರ ಜತೆಗೆ 17 ಶಿಕ್ಷಕರು ಹಾಗೂ ಸಿಬ್ಬಂದಿ
ವರ್ಗವಿದೆ.

ನ್ಯಾಷನಲ್ ಡೆವಲಪ್‌ಮೆಂಟ್‌ ಕಾರ್ಪೊರೇಷನ್ ವತಿಯಿಂದ ಮಕ್ಕಳಿಗೆ ಪೇಪರ್ ಬ್ಯಾಗ್, ಪ್ಲಾಸ್ಟಿಕ್ ಬ್ಯಾಗ್ ಮೊದಲಾದ ಉಪಯುಕ್ತ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತಿದೆ.

ಮಕ್ಕಳು ಮಾಡಿದ ವಸ್ತುಗಳನ್ನು ಮಾರಾಟ ಮಾಡಿ, ಪೋಷಕರಿಗೆ ನೀಡಲಾಗುತ್ತದೆ. ಇಲ್ಲಿ ಎಲ್ಲಾ ಜಾತಿ, ಧರ್ಮದ ಮಕ್ಕಳಿದ್ದಾರೆ.

ಅಮ್ಮತ್ತಿಯ ಮುಕ್ಕಾಟೀರ ತಿಮ್ಮಯ್ಯ ಹಾಗೂ ಡಾಲಿ ತಿಮ್ಮಯ್ಯ ಅವರ ಪುತ್ರಿಗೀತಾ ಚಂಗಪ್ಪ. ಬಿ.ಎಸ್ಸಿ ಪದವಿ ಪಡೆದ ಗೀತಾ ಅವರು ಗೋಣಿಕೊಪ್ಪಲಿನ ಚೆಪ್ಪುಡೀರ ಅಜಿತ್ ಚಂಗಪ್ಪ ಅವರನ್ನು ವಿವಾಹವಾಗಿದ್ದಾರೆ.

‘ಕೋಲ್ಕತ್ತದ ಗ್ರಾಹಕರ ಯೂನಿಟಿ ಮತ್ತು ಟ್ರಸ್ಟ್‌ನಲ್ಲಿ ಕೆಲಸ ಮಾಡುವ ವೇಳೆ ಮದರ್ ತೆರೆಸಾ ಅವರನ್ನು ಭೇಟಿ ಮಾಡಿ, ಅವರ ಪ್ರಭಾವಕ್ಕೆ ಒಳಗಾದೆ. ಅಜ್ಜಿ ಪಾಲಿ ಕಾಳಪ್ಪ ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಾನು ಸಮಾಜ ಸೇವೆ ಮಾಡಲು ಅದು ಪ್ರೇರಣೆಯಾಯಿತು’ ಎಂದುಗೀತಾ ಚಂಗಪ್ಪ
ಹೇಳುತ್ತಾರೆ.

ಲಂಡನ್, ಶ್ರೀಲಂಕಾ ಮೊದಲಾದ ದೇಶಗಳಿಗೆ ಭೇಟಿ ನೀಡಿರುವ ಚಂಗಪ್ಪ ಅವರು, ಬುದ್ಧಿಮಾಂದ್ಯ ಮಕ್ಕಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಇವರ ಸೇವೆಯನ್ನು ಗುರುತಿಸಿದ ರಾಜ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ 2018ರಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಇದೇ ವರ್ಷ ದೆಹಲಿಯ ಸ್ಕಾಚ್ ಫೌಂಡೇಷನ್ನಿನ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಗೀತಾ ಚಂಗಪ್ಪ ಅವರು ಉತ್ತಮ ಹಾಕಿಪಟು ಆಗಿದ್ದು, ಈಜು, ಕ್ರಿಕೆಟ್, ಗಾಲ್ಫ್, ಟೆನಿಸ್‌, ಬ್ಯಾಡ್ಮಿಂಟನ್‌ ಸಹ ಆಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT