ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಮುಂಗಾರು ಚುರುಕು; ಭತ್ತದ ಕೃಷಿ ಬಿರುಸು

ಗದ್ದೆ ಉಳುಮೆ, ಬಿತ್ತನೆ, ಸಸಿಮಡಿ ತಯಾರಿ, ನಾಟಿ ಕಾರ್ಯದಲ್ಲಿ ತೊಡಗಿರುವ ರೈತರು
Last Updated 13 ಜುಲೈ 2022, 2:51 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನಾದ್ಯಂತ ಮುಂಗಾರು ಮಳೆ ಚುರುಕು ಪಡೆದಿರುವುದರಿಂದ ಭತ್ತದ ನಾಟಿ ಕಾರ್ಯ ಬಿರುಸುಗೊಂಡಿದೆ.

ಮುಂಗಾರು ಮಳೆ ಕಳೆದ ಕೆಲವು ವರ್ಷಗಳಿಂದ ಸರಿಯಾದ ಸಮಯಕ್ಕೆ ಆರಂಭಗೊಳ್ಳುತ್ತಿರಲಿಲ್ಲ. ಆದ್ದರಿಂದ ಜುಲೈ ಮಧ್ಯದಿಂದ ಕೃಷಿ ಚಟುವಟಿಕೆಗಳು ಪ್ರಾರಂಭ ಗೊಳ್ಳುತ್ತಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆ ಬೀಳುತ್ತಿದ್ದು, ಈಗಾಗಲೇ ಗದ್ದೆ ಉಳುಮೆ, ಬಿತ್ತನೆ, ಸಸಿಮಡಿ ತಯಾರಿ, ನಾಟಿ ಕಾರ್ಯದಲ್ಲಿ ರೈತರು ತೊಡಗಿದ್ದಾರೆ.

ಶಾಂತಳ್ಳಿ ಹೋಬಳಿಯಾದ್ಯಂತ ಕೃಷಿ ಚಟುವಟಿಕೆ ಹೆಚ್ಚು ಬಿರುಸುಗೊಂಡಿದೆ. ರೈತರು ಎತ್ತು ಮತ್ತು ನೇಗಿಲಿ ನೊಂದಿಗೆ ಗದ್ದೆಗೆ ಇಳಿದಿದ್ದು, ಉಳುಮೆ ಕಾರ್ಯ ಭರದಿಂದ ಸಾಗಿದೆ. ಕೆಲವೆಡೆ ಸಸಿಮಡಿ ಮಾಡಲಾಗುತ್ತಿದೆ. ಕೊಡ್ಲಿಪೇಟೆ ಹೋಬಳಿ, ಶನಿವಾರಸಂತೆ ಸೇರಿದಂತೆ ಹಲವೆಡೆ ರೈತರು ಗದ್ದೆಯಲ್ಲಿ ಕಾರ್ಯ ನಿರತರಾಗಿರುವುದನ್ನು ಕಾಣಬಹುದು.

ಗದ್ದೆ ಉಳುಮೆ ಮಾಡಲು ಕೆಲವು ರೈತರು ಟಿಲ್ಲರ್, ಟ್ರಾಕ್ಟರ್ ಸೇರಿದಂತೆ ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಕೃಷಿ ಭೂಮಿಗೆ ರಸ್ತೆ ಇಲ್ಲದ ಕಡೆಗಳಲ್ಲಿ ಎತ್ತುಗಳನ್ನು ಬಳಸಿ ಉಳುಮೆ ಮಾಡುತ್ತಿದ್ದಾರೆ.

‘ಜಿಲ್ಲೆಯ ರೈತರು ಭತ್ತದ ಕೃಷಿಯನ್ನು ಲಾಭಕ್ಕಾಗಿ ಮಾಡುತ್ತಿಲ್ಲ. ಮನೆಗೆ ಅಕ್ಕಿ, ದನಗಳಿಗೆ ಮೇವು ಪಡೆಯಲು ಭತ್ತ ಬೆಳೆಯುತ್ತಿದ್ದಾರೆ. ರಾಸಾಯನಿಕ ಗೊಬ್ಬರ, ಕಾರ್ಮಿಕರ ವೇತನ ಹೆಚ್ಚಳ ರೈತರನ್ನು ಕಂಗೆಡಿಸಿದೆ. ಜಿಲ್ಲೆಯಲ್ಲಿ ಭತ್ತದ ಕೃಷಿಯನ್ನು ಉತ್ತೇಜಿಸಲು ಸರ್ಕಾರ ಸಹಾಯಧನ ನೀಡಬೇಕು’ ಎಂದು ಕಿತ್ತೂರು ಲಕ್ಷ್ಮಿಶೆಟ್ಟಿ ಮನವಿ ಮಾಡಿದರು.

‘ಭತ್ತದ ಸಸಿ ಮಡಿಗೆ ಬೆಂಕಿ ರೋಗಬಾಧೆ ಕಾಣಿಸಿಕೊಂಡರೆ, ರೈತ ಸಂಪರ್ಕ ಕೇಂದ್ರದಿಂದ ಸೂಕ್ತ ಮಾಹಿತಿ ಪಡೆದು ಕ್ರಿಮಿನಾಶಕ ಸಿಂಪಡಿಸಬೇಕು. ರೈತರು ತಮ್ಮ ಗದ್ದೆಗಳಲ್ಲಿ ನಾಟಿ ಮಾಡುವಾಗ 25-30 ದಿನಗಳ ಸಸಿಯನ್ನು ನಾಟಿ ಮಾಡಬೇಕು. ಒಂದು ಚದರ ಮೀಟರ್‌ಗೆ 50 ಗುಣಿ ಬರುವಂತೆ ಪ್ರತಿ ಗುಣಿಗೆ 2ರಿಂದ 3 ಸಸಿಯನ್ನು ಸೇರಿಸಿ 2 ಇಂಚು ಆಳದಲ್ಲಿ ನಾಟಿ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ತಿಳಿಸಿದರು.

‘3,150 ಹೆಕ್ಟೇರ್‌ನಲ್ಲಿ ಭತ್ತ ನಾಟಿ’

‘ತಾಲ್ಲೂಕಿನಲ್ಲಿ 11,850 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಈಗಾಗಲೇ 3,150 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಪ್ರಾರಂಭಗೊಂಡಿದೆ. 2,480 ಹೆಕ್ಟೇರ್ ಪ್ರದೇಶದಲ್ಲಿ ಜೋಳದ ಕೃಷಿಯ ಗುರಿ ಇದ್ದು, 2,290 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. 150 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಇದ್ದು, 82 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ರೈತರಿಗೆ ಸಹಾಯಧನದಲ್ಲಿ 1,850 ಕೆ.ಜಿ ಭತ್ತದ ಬಿತ್ತನೆ ಬೀಜ ಹಾಗೂ 1,250 ಕೆ.ಜಿ ಜೋಳದ ಬಿತ್ತನೆ ಬೀಜ ವಿತರಿಸಲಾಗಿದೆ’ ಎಂದು ಯಾದವ್ ಬಾಬು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT