ಮಡಿಕೇರಿ: ಇಲ್ಲಿನ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳು ಈಚೆಗಷ್ಟೇ ಅಮ್ಮತ್ತಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ 14ರ ವಯೋಮಿತಿಯ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಜಯ ಗಳಿಸಿ ಮಂಗಳೂರಿನ ಬಜಪೆಯಲ್ಲಿ ನಡೆಯುವ ವಿಭಾಗಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಯ ಸಾಲು ಸಾಲು ಸಾಧನೆಗಳನ್ನು ಮುಂದುವರಿಸಿದರು.
ಹೌದು, ನಿಜಕ್ಕೂ ಈ ಶಾಲೆಯ ಸಾಧನೆಗಳನ್ನು ಬರೆಯುತ್ತಾ ಹೋದರೆ ಸಾಲುಗಳು ಮುಗಿಯುವುದಿಲ್ಲ, ಲೇಖನಿ ನಿಲ್ಲುವುದಿಲ್ಲ. ನಿರಂತರವಾಗಿ ಇಲ್ಲಿನ ವಿದ್ಯಾರ್ಥಿಗಳು ಸಾಧನೆಗೈಯುತ್ತಲೇ ಇದ್ದಾರೆ. ಜಿಲ್ಲಾ, ವಿಭಾಗ, ರಾಜ್ಯ, ರಾಷ್ಟ್ರಮಟ್ಟದ ಸಾಧನೆಗಳನ್ನು ಇಲ್ಲಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಅಂದ ಹಾಗೆ, ಈ ಶಾಲೆಯಲ್ಲಿ ಇರುವುದು 200 ಮಕ್ಕಳು ಮಾತ್ರ. ಅವರಲ್ಲಿ 50 ವಿದ್ಯಾರ್ಥಿಗಳು ಬಾಲಮಂದಿರದವರು ಎಂಬುದು ವಿಶೇಷ.
ಬಾಲಮಂದಿರದಲ್ಲಿರುವ ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ ಇಲ್ಲಿನ 7 ಜನ ಶಿಕ್ಷಕರು.
ಎಲ್‌ಕೆಜಿಯಿಂದ 8ನೇ ತರಗತಿಯವರೆಗೆ ಇರುವ ಈ ಶಾಲೆ ಇರುವುದು ನಗರದ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ. ‘ಜಿಎಂಪಿ ಶಾಲೆ’ ಎಂದೇ ಜನಮಾನಸದಲ್ಲಿರುವ ಈ ಶಾಲೆಯ 6 ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಹಾಗೂ 45 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ರಾಷ್ಟ್ರಮಟ್ಟದ 14ರ ವಯೋಮಿತಿಯ ಹಾಕಿ ಪಂದ್ಯಾವಳಿಯಲ್ಲಿ ಶಾಲೆಯ 7ನೇ ತರಗತಿ ಪ್ರೀತಂ ಆಯ್ಕೆಯಾಗಿ ಗ್ವಾಲಿಯರ್‌ನಲ್ಲಿ ಆಡಿರುವುದು, ಈ ವರ್ಷ ಜನವರಿಯಲ್ಲಿ ರಾಷ್ಟ್ರಮಟ್ಟದಲ್ಲಿ 14ರ ವಯೋಮಿತಿಯ ಬಾಲಕಿಯ ಕ್ರೀಡಾಕೂಟದಲ್ಲಿ ಕಾವ್ಯಾ ರಾಂಚಿಯಲ್ಲಿ ಪಾಲ್ಗೊಂಡಿದ್ದರು.
ಫೆಬ್ರುವರಿಯಲ್ಲಿ ನಡೆದ ಅಥ್ಲೆಟಿಕ್ಸ್‌ನಲ್ಲಿ 7ನೇ ತರಗತಿಯ 4 ವಿದ್ಯಾರ್ಥಿಗಳಾದ ಮೇಘನ್, ಗವಿನ್, ಬಾಲಾಜಿ, ಪೂರ್ವಿಕಾ 14ರ ವಯೋಮಿತಿಯಲ್ಲಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ 11 ವಿದ್ಯಾರ್ಥಿಗಳು ಹಾಕಿಯಲ್ಲಿ ರಾಷ್ಟ್ರಮಟ್ಟದಲ್ಲಿ ಆಡಿದ್ದು ವಿಶೇಷ ಎನಿಸಿತ್ತು.
ಈ ವರ್ಷ ಹಾಕಿ 14ರ ವಯೋಮಿತಿಯಲ್ಲಿ ರಾಜ್ಯಮಟ್ಟಕ್ಕೆ ಬಾಲಕ ಮತ್ತು ಬಾಲಕಿಯರ ತಂಡ ಆಯ್ಕೆಯಾಗಿತ್ತು. ಫುಟ್‌ಬಾಲ್‌ನಲ್ಲಿ ಡಿವಿಜನ್‌ವರೆಗೂ ವಿದ್ಯಾರ್ಥಿಗಳು ಹಾಗೂ ಟೇಬಲ್ ಟೆನ್ನಿಸ್‌ನಲ್ಲಿ ಇಬ್ಬರು ಮಕ್ಕಳು 7ನೇ ತರಗತಿ ಶಿಶಿರಾ ಮತ್ತು ಗಗನ್ ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದರು.
ಡೆಲ್ ಕಂಪನಿಯವರು ₹ 2 ಕೋಟಿ ಮೊತ್ತದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಪಿಎಂಶ್ರೀ ಶಾಲೆ (ಪ್ರಧಾನಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಯಡಿ ಜಿಲ್ಲೆಯಲ್ಲಿ ಆಯ್ಕೆಯಾದ ಶಾಲೆಯಗಳ ಪೈಕಿ ಈ ಶಾಲೆಯೂ ಒಂದಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಶಾಲೆಗೆ ಉತ್ತಮ ಹೆಸರಿದೆ. ಸೇವಾದಳದ ತಂಡವೂ ಇಲ್ಲಿದೆ. ಈ ಬಾರಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ್ದ 27 ತಂಡಗಳ ಪೈಕಿ ಈ ಶಾಲೆಯ ತಂಡ ತೃತೀಯ ಸ್ಥಾನ ಪಡೆಯಿತು. ಕಳೆದ ಸಾಲಿನ ಗಣರಾಜ್ಯೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.