ಮಂಗಳವಾರ, ಆಗಸ್ಟ್ 3, 2021
21 °C
ಕೊರೊನಾ ಮುಕ್ತ ಸುಂಟಿಕೊಪ್ಪಕ್ಕೆ ಪಣತೊಟ್ಟ ಡಾ.ಜೀವನ್

ಹಳ್ಳಿಗಳಿಗೆ ಹೋಗಿ ಸೇವೆ ನೀಡುವ ಸರ್ಕಾರಿ ವೈದ್ಯ

ಸುನಿಲ್ ಎಂ.ಎಸ್. Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ: ಪಟ್ಟಣ ಮತ್ತು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮನೆಮನೆಗೆ ತೆರಳಿ ಗಂಟಲು ದ್ರವ ಪರೀಕ್ಷೆ ಮಾಡಿಸುವ ಮೂಲಕ ಕೊರೊನಾ ಮುಕ್ತ ಸುಂಟಿಕೊಪ್ಪಕ್ಕೆ ಪಣತೊಟ್ಟಿದ್ದಾರೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಜೀವನ್.

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರತಿನಿತ್ಯ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಆಸ್ಪತ್ರೆಯಲ್ಲಿ ಹೊರರೋಗಿಗಳ ಸಾಮಾನ್ಯ ತಪಾಸಣೆ ಜೊತೆಯಲ್ಲಿ ಕೋವಿಡ್‌ ಪರೀಕ್ಷೆಗಾಗಿ  ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಾರೆ. ನಿತ್ಯ 100 ರಿಂದ 120 ಮಂದಿ ಗಂಟಲು ದ್ರವ ಸಂಗ್ರಹಿಸಿ ಕೋವಿಡ್‌ ‍ಪರೀಕ್ಷೆ ಮಾಡಿಸುತ್ತಿದ್ದಾರೆ.

ಮಧ್ಯಾಹ್ನದ ನಂತರ ಹೋಬಳಿ ವ್ಯಾಪ್ತಿಯ ಹಾಲೇರಿ, ಕಂಬಿಬಾಣೆ, ಕೆದಕಲ್, ಹೊರೂರು, ಹೇರೂರು ಸೇರಿದಂತೆ ಇತರೆ ಗ್ರಾಮಗಳಿಗೆ ತೆರಳಿ ಜನರಲ್ಲಿ ಕೋವಿಡ್‌ ಅರಿವು ಮೂಡಿಸಿ ಕೊರೊನಾ ಪರೀಕ್ಷೆ ಮಾಡಿಸುತ್ತಿದ್ದಾರೆ.

ಡಾ.ಜೀವನ್ ಅವರು ವೈದ್ಯರಾದ ಡಾ.ನಿಸರ್ಗ, ದಾದಿಯರು ಮತ್ತು ಆಶಾ ಕಾರ್ಯಕರ್ತೆಯರೊಂದಿಗೆ ಮಸೀದಿ, ಚರ್ಚ್ ಹಾಗೂ ದೇವಾಲಯಗಳಿಗೆ ತೆರಳಿ ಅಲ್ಲಿನ ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಮತ್ತು ಗಂಟಲು ದ್ರವ ಪರೀಕ್ಷೆ ಮಾಡಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

‘ಎರಡೂವರೆ ವರ್ಷಗಳ ವೈದ್ಯ ವೃತ್ತಿ ತೃಪ್ತಿ ತಂದಿದೆ. ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದರೂ ತಲೆಕೆಡಿಸಿಕೊಂಡಿಲ್ಲ. ಹಳ್ಳಿಯ ಜನರು ವೃತ್ತಿಗೆ ಗೌರವ ನೀಡಿದ್ದಾರೆ. ಜನಸೇವೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಸುಂಟಿಕೊಪ್ಪವನ್ನು ಕೊರೊನಾ ಮುಕ್ತವಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ಅದಕ್ಕೆ ಸಿಬ್ಬಂದಿ, ಹಿರಿಯ ಅಧಿಕಾರಿಗಳು, ಜನರು ಪ್ರೋತ್ಸಾಹ ನೀಡಿದ್ದಾರೆ’ ಎಂದು ಡಾ.ಜೀವನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು