ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವುದು ಕೇವಲ ಜಲಾಶಯಗಳು ಹಾಗೂ ನದಿಗಳ ಮೇಲೆ ಮಾತ್ರವೇ ಪರಿಣಾಮ ಬೀರಿಲ್ಲ. ಇದರೊಂದಿಗೆ ಇಲ್ಲಿನ ಅಂತರ್ಜಲದ ಮೇಲೂ ಪರಿಣಾಮ ಬೀರಿದೆ.
‘ಹತ್ತು ವರ್ಷಗಳ ಸರಾಸರಿ ಪ್ರಮಾಣಕ್ಕೆ ಹೋಲಿಸಿದರೆ ಅಂತರ್ಜಲದ ಪ್ರಮಾಣ ಪ್ರಸಕ್ತ ಸಾಲಿನಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದೆ’ ಎಂದು ಕೊಡಗು ಜಿಲ್ಲಾ ಅಂತರ್ಜಲ ಕಚೇರಿಯ ಹೆಚ್ಚುವರಿ ಪ್ರಭಾರ ಹಿರಿಯ ಭೂವಿಜ್ಞಾನಿ ಕೆ.ಜಿ.ಸೌಮ್ಯಾ ‘ಪ್ರಜಾವಾಣಿ’ಗೆ ತಿಳಿಸಿದರು.
ಒಂದು ವೇಳೆ ಸದ್ಯದಲ್ಲೇ ಹದವಾದ ಮಳೆ ಸುರಿಯದೇ ಹೋದರೆ ಬೇಸಿಗೆಗೂ ಮುನ್ನವೇ ಕೊಡಗು ಜಿಲ್ಲೆಯ ತೋಡುಬಾವಿಗಳು ಮಾತ್ರವಲ್ಲ ಕೊಳವೆಬಾವಿಗಳೂ ಬತ್ತುವ ಆತಂಕ ಮೂಡಿದೆ.
ವಿಶೇಷವಾಗಿ ಮುಂಗಾರಿನಲ್ಲಿ ಉಂಟಾದ ಮಳೆ ಕೊರತೆ ಅಂತರ್ಜಲ ಕುಸಿಯಲು ಮುಖ್ಯವಾದ ಕಾರಣ ಎನಿಸಿದೆ. ಅದರಲ್ಲೂ ಆಗಸ್ಟ್ ತಿಂಗಳಿನಲ್ಲಿ ಉಂಟಾಗಿರುವ ಮಳೆ ಕೊರತೆ ಇಡೀ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಾಮಾನ್ಯವಾಗಿ ತಿಂಗಳ ಎಲ್ಲ ದಿನಗಳು ಇಲ್ಲದಿದ್ದರೂ ಕನಿಷ್ಠ 22 ದಿನಗಳಾದರೂ ಮಳೆ ದಿನಗಳು ಆಗಸ್ಟ್‌ನಲ್ಲಿ ಇರುತ್ತಿದ್ದವು. ಆದರೆ, ಈ ವರ್ಷ ಆಗಸ್ಟ್‌ನಲ್ಲಿ ಕೊಡಗು ಜಿಲ್ಲೆಯಲ್ಲಿ ದಾಖಲಾದ ಮಳೆಯ ದಿನಗಳು ಕೇವಲ 8 ಮಾತ್ರ. ಹೀಗಾಗಿ, ಭೂಮಿಯಲ್ಲಿ ನೀರು ಹಿಂಗದೇ ಅಂತರ್ಜಲ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಇದು ಕೇವಲ ಒಂದು ತಾಲ್ಲೂಕಿನ ಸ್ಥಿತಿಯಾಗಿಲ್ಲ. ಎಲ್ಲ ತಾಲ್ಲೂಕುಗಳಲ್ಲೂ ಅಂತರ್ಜಲ ಕುಸಿದಿರುವುದು ಮುಂಬರುವ ಬೇಸಿಗೆ ದಿನಗಳು ಕರಾಳವಾಗಿರಲಿದೆ ಎಂಬುದರ ಸೂಚನೆ ನೀಡುತ್ತಿವೆ.
ಕೊಡಗು ಜಿಲ್ಲೆಯ ತೋಡುಬಾವಿಗಳ ಅಂತರ್ಜಲ ಮಟ್ಟ ಅಂತರ್ಜಲ ಸ್ಥಿರ ಜಲಮಟ್ಟದಿಂದ 0.70 ಮೀಟರ್‌ನಷ್ಟು ಕುಸಿದಿದೆ. ಕೊಳವೆಬಾವಿಗಳ ಮಟ್ಟವೂ ಇದೇ ಬಗೆಯಲ್ಲಿ ಕಡಿಮೆಯಾಗಿದೆ. ಮಳೆಯ ದಿನಗಳು ಹೆಚ್ಚಾದರೆ ಹೋದಲ್ಲಿ ಈ ಮಟ್ಟ ಮತ್ತಷ್ಟು ಕಡಿಮೆಯಾಗಿ ಬೇಸಿಗೆಗೆ ಮುನ್ನವೇ ತೋಡುಬಾವಿಗಳು ಹಾಗೂ ಕೊಳವೆಬಾವಿಗಳು ಬರಿದಾಗುವ ಆತಂಕ ಎದುರಾಗಿದೆ.
ಈಗಾಗಲೇ ಬೇಸಿಗೆ ದಿನಗಳಂತೆ ರೈತರು ಹಾಗೂ ಬೆಳೆಗಾರರು ಕೊಳವೆಬಾವಿಗಳಿಂದ ನೀರನ್ನು ಗದ್ದೆಗೆ ಹಾಗೂ ತೋಟಗಳಿಗೆ ಹಾಯಿಸುತ್ತಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಕೊಳವೆಬಾವಿಗಳಿಂದ ನೀರನ್ನು ಹೊರ ತೆಗೆಯುತ್ತಿರಲಿಲ್ಲ. ಮಳೆಯೇ ಗದ್ದೆ, ತೋಟಗಳಿಗೆ ಸಾಕಾಗುವಷ್ಟು ನೀರುಣಿಸುತ್ತಿತ್ತು. ಆದರೆ, ಈಗ ಮಳೆ ಇಲ್ಲದೇ ಇರುವುದರಿಂದ ಕೊಳವೆಬಾವಿಗಳ ನೀರೇ ಆಧಾರವಾಗಿದೆ. ಮಳೆ ಬಾರದೇ ಹೋದರೆ ಬೇಸಿಗೆಯ ದಿನಗಳು ನಿಜಕ್ಕೂ ಘನಘೋರವಾಗಿರಲಿದೆ.
ಈಗಲೇ ಎಚ್ಚೆತ್ತುಕೊಂಡು ಕೊಳವೆಬಾವಿಗಳು ಹಾಗೂ ತೋಡುಬಾವಿಗಳ ಸುತ್ತ ನೀರು ಹಿಂಗಿಸುವ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಲೇಬೇಕಿದೆ. ಸದ್ಯ, ಆಗೊಮ್ಮೆ, ಈಗೊಮ್ಮೆ ಬೀಳುತ್ತಿರುವ ಮಳೆ ನೀರನ್ನು ಹಿಡಿದಿಡುವಂತಹ ಮಳೆನೀರು ಕೋಯ್ಲುವಿನಂತಹ ಕ್ರಮಗಳನ್ನು ಅನುಸರಿಸಬೇಕಿದೆ.
(ಸರಣಿ ಮುಗಿಯಿತು)
ಮಳೆ ಬಾರದೇ ಹೋದರೆ ಆತಂಕ ಎತ್ತರದ ಪ್ರದೇಶಗಳು, ಒಣಭೂಮಿಯ ಕೊಳವೆಬಾವಿ ಬತ್ತುವ ಸಾಧ್ಯತೆ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗುವ ಭೀತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.