ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಬೇಸಾಯ; ಗೆಳೆಯರ ಯಶಸ್ಸು

ಹೆಗ್ಗಳ ಗ್ರಾಮದ ಬೂದಿಮಾಳದಲ್ಲಿ ತರಕಾರಿ, ಬಾಳೆ ಕೃಷಿ ಮಾಡುತ್ತಿರುವ ಸ್ನೇಹಿತರು
Last Updated 6 ಏಪ್ರಿಲ್ 2018, 9:42 IST
ಅಕ್ಷರ ಗಾತ್ರ

ವಿರಾಜಪೇಟೆ: ಏಕಬೆಳೆ ವ್ಯವಸಾಯಕ್ಕಿಂತಲೂ ಮಿಶ್ರಬೆಳೆ ಹಾಗೂ ಪ್ರತಿ ವರ್ಷ ಬೆಳೆಗಳನ್ನು ಬದಲಾಯಿಸುವುದರಿಂದ ಉತ್ತಮ ಇಳುವರಿ ಹಾಗೂ ಲಾಭ ಗಳಿಸಲು ಸಾಧ್ಯ ಎನ್ನುವುದನ್ನು ಸಮೀಪದ ಹೆಗ್ಗಳ ಗ್ರಾಮದ ಕೃಷಿಕ ಗೆಳೆಯರು ಮತ್ತೊಮ್ಮೆ ದೃಢಪಡಿಸಿದ್ದಾರೆ.

ಸಮೀಪದ ಹೆಗ್ಗಳ ಗ್ರಾಮದ ಬೂದಿಮಾಳದಲ್ಲಿ ಮೂವರು ಗೆಳೆಯರು ತರಕಾರಿ ಹಾಗೂ ಬಾಳೆ ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮ ಇಳುವರಿ ಹಾಗೂ ಆದಾಯ ಗಳಿಸುತ್ತಿದ್ದಾರೆ.  ಗ್ರಾಮದ ಬಿ.ಸಿ.ಸೋಮಪ್ಪ, ಕೆ.ಎಂ.ಅಂತೋಣಿ ಹಾಗೂ ವರ್ಗೀಸ್  ಭೂಮಿತಾಯಿಯನ್ನು ನೆಚ್ಚಿ ಮಿಶ್ರ ಬೇಸಾಯದ ಮೂಲಕ ಉತ್ತಮ ಆದಾಯ ಗಳಿಸುತ್ತಿರುವ ಗೆಳೆಯರು.

ಸುಮಾರು 15 ವರ್ಷದಿಂದ  ವಿವಿಧ ತರಕಾರಿ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದು,  ಪ್ರತಿವರ್ಷ ಒಂದೊಂದು ಬೆಳೆ ಬೆಳೆಯುತ್ತಾರೆ. ಈ ಬಾರಿ ಸುಮಾರು ಅರ್ಧ ಎಕರೆಯಲ್ಲಿ ಅಲಸಂದೆ, ಅರ್ಧ ಎಕರೆಯಲ್ಲಿ ಹಾಗಲಕಾಯಿ ಹಾಗೂ ಸುಮಾರು ಒಂದು ಎಕರೆಯಲ್ಲಿ ನೇಂದ್ರ ಬಾಳೆ ಕೃಷಿ ಮಾಡಿದ್ದಾರೆ. ಈ ಬಾರಿ ನೇಂದ್ರಬಾಳೆ ಹಾಕಿರುವ ಜಾಗದಲ್ಲಿ ಮುಂದಿನ ವರ್ಷ ತರಕಾರಿ ಹಾಗೂ ತರಕಾರಿ ಬೆಳೆದಿರುವ ಜಾಗದಲ್ಲಿ ಬಾಳೆ ಹಾಕುವುದು ಇವರು ಉತ್ತಮ ಇಳುವರಿ ಪಡೆಯುವುದರ ಹಿಂದಿನ ಗುಟ್ಟಾಗಿದೆ.

‘ಬದಲಾವಣೆ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿ ಉತ್ತಮ ಇಳುವರಿ ಪಡೆಯಲು ಸಾಧ್ಯ. ಜತೆಗೆ ಮುಂದಿನ ಬಾರಿ ತರ ರಿಯನ್ನು ಬೆಳೆದರೂ ಈ ಬಾರಿ ಬೆಳೆದ ತರಕಾರಿಯನ್ನು ಬಿಟ್ಟು ಬೇರೆಯವುಗಳನ್ನು ಹಾಕುತ್ತೇವೆ. ಜೊತೆಗೆ ಮಾರುಕಟ್ಟೆಯಲ್ಲಿನ ಬೇಡಿಕೆ ಯನ್ನು ಗಮನಿಸಿ ಕೃಷಿ ಮಾಡುತ್ತೇವೆ’ ಎಂದು ಈ ಸ್ನೇಹಿತರು ಹೇಳುತ್ತಾರೆ.

ಒಂದು ಎಕರೆಯಲ್ಲಿ ಸುಮಾರು 700 ಗೊನೆಗಳಷ್ಟು ನೇಂದ್ರ ಬಾಳೆ ದೊರೆಯಬಹುದೆಂಬ ನಿರೀಕ್ಷೆಯಲ್ಲಿರು ವುದಾಗಿ ಸೋಮಪ್ಪ ಹೇಳುತ್ತಾರೆ.  ಏಳು ದಿನಗಳಿಗೊಮ್ಮೆ ಒಂದು ಟನ್‌ ಹಾಗಲ ಯಿ ಹಾಗೂ ಒಂದು ಕ್ವಿಂಟಾಲ್‌ನಷ್ಟು ಅಲಸಂದೆ ಕೊಯ್ದಯ ಮಾರಾಟ ಮಾಡುತ್ತೇವೆ.

ಇಳುವರಿ ದೊರೆಯುತಿದೆಯಾದರೂ ಕಳೆದ ಸಲಕ್ಕಿಂತಲೂ ಈ ಬಾರಿ ಇಳುವರಿ ಕಡಿಮೆಯಾಗಿದೆ ಎಂದು ಅಂತೋಣಿ ಹಾಗೂ ವರ್ಗೀಸ್ ಹೇಳುತ್ತಾರೆ. ತಾವು ಬೆಳೆದ ತರಕಾರಿಯನ್ನು ಸಮೀಪದ ವಿರಾಜಪೇಟೆ ಪಟ್ಟಣಕ್ಕೆ ಸಾಗಿಸಿ ತರಕಾರಿ ವರ್ತಕರಿಗೆ ಮಾರಾಟ ಮಾಡುವುದಾಗಿ ಅವರು ತಿಳಿಸಿದರು.

ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಿದ್ದು,  ಬಾಳೆ ತೋಟಕ್ಕೂ ಕಾಡಾನೆ ಗಳು ಸಾಕಷ್ಟು ಬಾರಿ ದಾಳಿ ನಡೆಸಿದೆ. ಜತೆಗೆ ಕಾಡು ಹಂದಿ ಹಾಗೂ ಪಕ್ಷಿಗಳು ಉಪಟಳವು ಸಾಕಷ್ಟು ಪ್ರಮಾಣದಲ್ಲಿದೆ. ಬೆಲೆ ಏರಿಳಿತ ಸೇರಿದಂತೆ ಅನೇಕ ಸಮಸ್ಯೆಗಳ ನಡುವೆ ಕೃಷಿಯಲ್ಲಿ ಈ ಗೆಳೆಯರ ಉತ್ಸಾಹ ಮಾತ್ರ ಹೆಚ್ಚಾಗುತ್ತಲೇ ಇದೆ.

ಹೇಮಂತ್ ಎಂ.ಎನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT