ಮಡಿಕೇರಿ: ‘ನಿಜವಾದ ಕರ್ನಾಟಕದ ಮಾದರಿ ಅರಸು ಅವರಲ್ಲಿದೆ’ ಎಂದು ಯುವ ಚಿಂತಕ ಕೆ.ಎಚ್.ಮುಸ್ತಫ ಹೇಳಿದರು.
ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜು ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮವದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಚದುರಿದ ಸಮುದಾಯಗಳನ್ನು ಒಗ್ಗೂಡಿಸಿ, ಬಸವಣ್ಣ ಅವರ ದಾರಿಯನ್ನು ಆಯ್ದುಕೊಂಡು ಚಳವಳಿಗಳನ್ನು ರೂಪಿಸಿದವರು ದೇವರಾಜ ಅರಸು. ತಮ್ಮ ಆಸ್ತಿಯನ್ನೆ ಮನೆಯ ಕೆಲಸದಾತನಿಗೆ ನೀಡುವ ಮೂಲಕ ಮಾದರಿ ವ್ಯಕ್ತಿಯಾದವರು. ರಾಜ್ಯದ ಅಸಂಖ್ಯಾತ ಧ್ವನಿ ಇಲ್ಲದ ಜನಾಂಗಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತಂದರು ಎಂದು ಶ್ಲಾಘಿಸಿದರು. ಮಾತ್ರವಲ್ಲ, ದೇವರಾಜ ಅರಸು ನಡೆದು ಬಂದ ಆದರ್ಶದ ಹಾದಿಯನ್ನು ಕುರಿತು ಮಾತನಾಡಿದರು.
ಜೊತೆಗೆ, ಇಂತಹ ಮಹಾನ್ ನಾಯಕ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ನಡೆದು ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದೂ ಅವರು ಹೇಳಿದರು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಅವರು, ‘ಎಲ್ಲಾ ಜಾತಿ, ಜನಾಂಗದವರನ್ನು ಒಗ್ಗೂಡಿಸುವ ಪ್ರಮುಖ ಕಾರ್ಯ ಮಾಡಿದವರು ದೇವರಾಜ ಅರಸು. ಅವಕಾಶ ವಂಚಿತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪ್ರೋತ್ಸಾಹಧನ, ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ’ ಎಂದು ಹೇಳಿದರು.
ಉರಿಲಿಂಗಪೆದ್ದಿಯ ವಚನಗಳು, ಮಂಕುತಿಮ್ಮನ ಕಗ್ಗದ ಸಾಲುಗಳ ಮೂಲಕ ಮುನೀರ್ ಅಹಮ್ಮದ್ ಮಾಡಿದ ನಿರೂಪಣೆ ಗಮನ ಸೆಳೆಯುವಂತಿತ್ತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ರಕ್ತದಾನಿ ಬಿ.ಎಂ.ರಾಮಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಯೋಜನಾ ಪ್ರಧಿಕಾರದ ಅಧ್ಯಕ್ಷ ಕೆ.ಎ.ಆದಂ, ಸಮಾಜ ಸೇವಕ ಕೆ.ವಿ.ಸುನಿಲ್, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಳಿಯಂಡ ಕಮಲ ಉತ್ತಯ್ಯ ಮತ್ತು ಎಸ್.ಎಸ್.ಎಲ್‍ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳಾದ ಐಗೂರು ಸರ್ಕಾರಿ ಪ್ರೌಢಶಾಲೆಯ ಸಿ.ಬಿ.ಬೆಸಿಲ್ ಅವರ ಪರವಾಗಿ ಅವರ ಸೋದರಿ, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆ.ಆರ್.ಬಬಿತಾ ಅವರು ಸನ್ಮಾನ ಸ್ವೀಕರಿಸಿದರು.
ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಸುಭಾಷ್ ನಾಣಯ್ಯ, ವಕೀಲರಾದ ಕುಞಬ್ದುಲ್ಲಾ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಎಚ್.ಎಲ್.ದಿವಾಕರ್, ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ, ವಕೀಲರಾದ ಬಿ.ಇ.ಜಯೇಂದ್ರ, ಕೊಡಗು ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷರಾದ ಕೆ.ಎ.ಯಾಕೂಬ್, ಎಂ.ಎಚ್.ಅಬ್ದುಲ್ ರೆಹಮನ್, ರೇವತಿ ರಮೇಶ್ ಭಾಗವಹಿಸಿದ್ದರು.
- ಎಲ್ಲ ಭಾಷಿಕ ಸಮುದಾಯಗಳಿಗೆ ಬೇಕು ಸಮುದಾಯ ಭವನ; ಟಿ.ಪಿ.ರಮೇಶ್
ಅಹಿಂದ ಒಕ್ಕೂಟದ ಸ್ಥಾಪಕ ಟಿ.ಪಿ.ರಮೇಶ್ ಕಾರ್ಯಕ್ರಮದಲ್ಲಿ ಹಲವು ಒತ್ತಾಯಗಳನ್ನು ಮಾಡುವ ಮೂಲಕ ಗಮನ ಸೆಳೆದರು. ‘ಎಲ್ಲ ಭಾಷಿಕ ಸಮುದಾಯಗಳಿಗೆ ಸಮುದಾಯ ಭವನ ಬೇಕು. ಹಲವು ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ‘ಸಿ’ ಮತ್ತು ‘ಡಿ’ ಭೂಮಿ ನೀಡಬೇಕು ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಅದೇ ಊರಿನಲ್ಲಿ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡಬೇಕು ಅಹಿಂದ ಒಕ್ಕೂಟದಲ್ಲಿ 2ನೇ ಹಂತದ ನಾಯಕತ್ವ ಬೆಳೆಯಬೇಕು’ ಎಂದು ಅವರು ತಮ್ಮ ಅಭಿಪ್ರಾಯಗಳನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.