5
ಸಂಕಷ್ಟದಲ್ಲಿ 60 ಕುಟುಂಬಗಳು, ವಿದ್ಯಾರ್ಥಿಗಳು

ಕೊಚ್ಚಿ ಹೋಗುವ ಸ್ಥಿತಿಯಲ್ಲಿ ತೂಗು ಸೇತುವೆ!

Published:
Updated:
ಮರದ ತೂಗು ಸೇತುವೆ ದಾಟುತ್ತಿದ್ದ ವಿದ್ಯಾರ್ಥಿಗಳು

ಮಡಿಕೇರಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಡಗು ಜಿಲ್ಲೆಯ ಗಡಿಗ್ರಾಮ, ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕರಿಕೆ ಸಮೀಪ ಗ್ರಾಮಸ್ಥರೇ ನಿರ್ಮಿಸಿಕೊಂಡಿದ್ದ ತೂಗು ಸೇತುವೆಯೊಂದು ಕೊಚ್ಚಿ ಹೋಗುವ ಹಂತ ತಲುಪಿದೆ. ಮಳೆಯು ಬಿರುಸುಗೊಂಡಿದ್ದು ಚಂದ್ರಗಿರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.

ನದಿಯ ಹಿಂಭಾಗದಲ್ಲಿ ಆಲತ್ತಿಕಾಡವು, ದೊಡ್ಡಚೇರಿ ಎಂಬ ಕುಗ್ರಾಮಗಳಿವೆ. ಇಲ್ಲಿ 60ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ದಿನನಿತ್ಯ 1ರಿಂದ 7ನೇ ತರಗತಿವರೆಗಿನ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ತೂಗು ಸೇತುವೆ ಮೇಲೆ ನಡೆದು ಶಾಲೆಗೆ ತೆರಳಬೇಕಾದ ಸ್ಥಿತಿಯಿತ್ತು. ಇದ್ದ ಒಂದು ಮಾರ್ಗವೂ ಈಗ ಕೊಚ್ಚಿ ಹೋಗುವ ಸ್ಥಿತಿಗೆ ಬಂದಿದೆ.

ವಿದ್ಯಾರ್ಥಿಗಳು ಮಾತ್ರವಲ್ಲ; ಅಕ್ಕಪಕ್ಕದ ನಿವಾಸಿಗಳೂ ಈ ಸೇತುವೆ ದಾಟಿಯೇ ಮುಖ್ಯರಸ್ತೆಗೆ ಬರಬೇಕು. ಇಲ್ಲದಿದ್ದರೆ 6 ಕಿ.ಮೀ. ಸುತ್ತು ದಾರಿ ಬಳಸಬೇಕು. ಮಳೆಗೆ ನದಿಯಲ್ಲಿ ರಭಸವಾಗಿ ನೀರು ಹರಿಯುತ್ತಿದೆ. ಇನ್ನೆರಡು ದಿನ ಇದೇ ರೀತಿ ಮಳೆ ಮುಂದುವರೆದರೆ ಮರದ ಸೇತುವೆ (ಸ್ಥಳೀಯ ಭಾಷೆಯಲ್ಲಿ ಪಾಲ ಎನ್ನುತ್ತಾರೆ) ಕೊಚ್ಚಿ ಹೋಗಲಿದೆ.

ನೋಡಿದ್ರೆ ಆತಂಕ: ‘ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸೇತುವೆ ದಾಟುತ್ತೇವೆ. ಗ್ರಾಮಸ್ಥರೂ ತುಂಬಿ ಹರಿಯುತ್ತಿರೋ ನದಿಯನ್ನು ಲೆಕ್ಕಿಸದೇ ನಡೆದುಕೊಂಡು ಹೋಗುತ್ತಾರೆ. ನಮ್ಮ ಕಷ್ಟವನ್ನು ಕೇಳೋರಿಲ್ಲ’ ಎನ್ನುತ್ತಾರೆ ವಿದ್ಯಾರ್ಥಿಗಳು.

‘ಬಿದಿರಿನಿಂದ ತೂಗು ಸೇತುವೆ ನಿರ್ಮಿಸಲಾಗಿದೆ. ಕಳೆದ ಮೂರು ದಶಕಗಳಿಂದ ದುರಸ್ತಿಪಡಿಸುತ್ತಾರೆಯೇ ಹೊರತು ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಪ್ರತಿವರ್ಷ ಪಂಚಾಯಿತಿ ವತಿಯಿಂದ ನೆಪಮಾತ್ರಕ್ಕೆ ದುರಸ್ತಿ ಮಾಡಲಾಗುತ್ತಿತ್ತು. ದುರಸ್ತಿ ಮಾಡಿದ ಗುತ್ತಿಗೆದಾರರಿಗೆ ತಡವಾಗಿ ಹಣಪಾವತಿ ಮಾಡುತ್ತಾರೆ ಎನ್ನುವ ಕಾರಣಕ್ಕೆ ಈ ಬಾರಿ ದುರಸ್ತಿಯನ್ನೂ ಮಾಡಿಸಿಲ್ಲ’ ಎಂದು ವಿದ್ಯಾರ್ಥಿಗಳಾದ ನಿಮಿಷಾ, ಸುಚಿತ್ರಾ ದೂರಿದರು.

‘ಭಾಗಮಂಡಲದಿಂದ ಸುಮಾರು 25 ಕಿ.ಮೀ ದೂರವಿದೆ ಈ ಗ್ರಾಮ. ಮಡಿಕೇರಿ ತಾಲ್ಲೂಕಿಗೆ ಸೇರಿದರೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ಮಾಡಬೇಕು; ಅಭಿವೃದ್ಧಿಯೂ ಮರೀಚಿಕೆಯಾಗಿದೆ. ನಮ್ಮ ಸಂಕಷ್ಟದ ಬದುಕು ಜನಪ್ರತಿನಿಧಿಗಳ, ಅಧಿಕಾರಿಗಳ ಕಣ್ಣಿಗೆ ಇನ್ನೂ ಬಿದ್ದಿಲ್ಲ’ ಎಂದು ಮುಖಂಡ ಚಂದ್ರ ಅಲವತ್ತುಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !