ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರವೂ ಮಳೆ ಮುಂದುವರಿದಿದ್ದು, ಅಲ್ಲಲ್ಲಿ ರಸ್ತೆಗಳಿಗೆ ಮಣ್ಣು ಕುಸಿದಿದ್ದು, ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.
ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಸದ್ಯ ನದಿಗೆ 13 ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಹೀಗಾಗಿ, ಕುಶಾಲನಗರದ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ತಗ್ಗಿದ್ದರೂ ಆತಂಕ ದೂರವಾಗಿಲ್ಲ.
ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಭಾಗದಲ್ಲಿ ಗದ್ದೆಗಳು, ಬಾಳೆತೋಟಗಳು ನೀರಿನಲ್ಲಿ ಮುಳುಗಿವೆ. ಹಲವು ರಸ್ತೆಗಳು ಜಲಾವೃತಗೊಂಡಿವೆ. ಮಳೆ ಜೊತೆಗೆ ಬಿರುಗಾಳಿಯೂ ಬೀಸುತ್ತಿದ್ದು, ಮರಗಳು ಬುಡಮೇಲಾಗುತ್ತಿವೆ. ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ಜನ ಆತಂಕದಲ್ಲೇ ಇದ್ದಾರೆ.
ಹಾಲೇರಿ– ಹಟ್ಟಿಹೊಳೆ ರಸ್ತೆ, ಮಡಿಕೇರಿ– ಕಡಮಕಲ್ ಸುಬ್ರಹ್ಮಣ್ಯ ರಸ್ತೆಯಲ್ಲಿ ಮಣ್ಣು ಕುಸಿದು ಆತಂಕ ಸೃಷ್ಟಿಸಿದೆ. ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಸಮೀಪ ಬೃಹತ್ ಗಾತ್ರದ ಮರವೊಂದು ಉರುಳಿ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿ ತುಂಡಾಗಿ, ವಿದ್ಯುತ್ ವ್ಯತ್ಯಯ ಉಂಟಾಗಿದೆ.
ನಾಪೋಕ್ಲು– ಮೂರ್ನಾಡು ರಸ್ತೆಯಲ್ಲಿ ನೀರು ಹರಿಯುತ್ತಿದೆ. ಬೊಳಿಬಾಣೆ ಎಂಬಲ್ಲಿ ಗದ್ದೆಗಳು, ಕಾಫಿತೋಟಗಳು ನೀರಿನಲ್ಲಿ ಮುಳುಗಿವೆ. ಜಿಲ್ಲೆಯ ವಿವಿಧೆಡೆ ಥರಗುಟ್ಟುವಷ್ಟು ಚಳಿ ಇದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾ ಕೇಂದ್ರದಲ್ಲಿ ದಟ್ಟ ಮಂಜು ಆವರಿಸಿತ್ತು.
ನಿಗದಿಯಂತೆ ನಡೆಯದ ಉಸ್ತುವಾರಿ ಸಚಿವರ ಪ್ರವಾಸ
ಮಡಿಕೇರಿ: ಮಳೆ ಹಾನಿ ಪ್ರದೇಶದ ವೀಕ್ಷಣೆಗೆಂದು ಮಂಗಳವಾರದಿಂದ ಮಡಿಕೇರಿಯಲ್ಲೇ ವಾಸ್ತವ್ಯ ಹೂಡಿರುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರ ಭೇಟಿ ನಿಗದಿಯಂತೆ ನಡೆಯದೇ ಸಾರ್ವಜನಿಕರನ್ನು ಮಾತ್ರವಲ್ಲ ಅಧಿಕಾರಿಗಳನ್ನೂ ಪೇಚಿಗೆ ಸಿಲುಕಿಸಿದೆ.
ಪೂರ್ವನಿಗದಿಯ ವೇಳಾಪಟ್ಟಿ ಪ್ರಕಾರ ಮಂಗಳವಾರ ಮತ್ತು ಬುಧವಾರ ಎರಡೂ ದಿನವೂ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ನಡೆಯಲಿಲ್ಲ. ಪೊಲೀಸರೂ ಭದ್ರತಾ ವ್ಯವಸ್ಥೆ ಕಲ್ಪಿಸುವುದಕ್ಕೆ ಹೆಣಗಾಡಬೇಕಾಯಿತು. ಸಚಿವರು ಬರುತ್ತಾರೆ ಎಂದು ಕಾದುಕೊಂಡಿದ್ದ ಸಂತ್ರಸ್ತರು ಕೆಲವೆಡೆ ನಿರಾಶರಾದರು. ಮತ್ತೆ ಕೆಲವೆಡೆ ಕೈತೋರಿಸಿ ಹಾಳಾದ ಬಾಳೆ ತೋಟ ನೋಡಿ ಎಂದು ಮಹಿಳೆಯೊಬ್ಬರು ಮನವಿ ಮಾಡಿದರೂ ಸಚಿವರು ತಮ್ಮ ವಾಹನ ನಿಲ್ಲಿಸಲಿಲ್ಲ.
‘ಸ್ಥಳೀಯ ಕಾರ್ಯಕರ್ತರು ಸಚಿವರನ್ನು ಹೈಜಾಕ್ ಮಾಡಿದ್ದಾರೆ. ನಮಗೂ ಸಚಿವರು ಎಲ್ಲಿಗೆ ಹೋಗುತ್ತಾರೆ ಎಂಬುದು ತಿಳಿಯುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.