ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು ಜಿಲ್ಲೆಯಲ್ಲಿ ಹುಬ್ಬ ಮಳೆಯ ಅಬ್ಬರ

ಕೊಡಗಿನ ಅಲ್ಲಲ್ಲಿ ಭಾರಿ ಮಳೆ, ಮತ್ತೆ ತುಂಬಿ ಹರಿಯುತ್ತಿವೆ ನದಿ, ತೊರೆಗಳು
Published : 3 ಸೆಪ್ಟೆಂಬರ್ 2024, 2:43 IST
Last Updated : 3 ಸೆಪ್ಟೆಂಬರ್ 2024, 2:43 IST
ಫಾಲೋ ಮಾಡಿ
Comments

ಮಡಿಕೇರಿ: ‘ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ’ ಎಂಬ ಗಾದೆ ಮಾತಿನಂತೆ ಮಡಿಕೇರಿ ನಗರ ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಬಿರುಸಿನ ಮಳೆ ಸುರಿದಿದೆ.

ಮಡಿಕೇರಿ ನಗರದಲ್ಲಂತೂ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಭಾನುವಾರ ತಡರಾತ್ರಿ ಆರಂಭವಾದ ಬಿರುಸಿನ ಮಳೆ ಸೋಮವಾರ ಇಡೀ ದಿನ ಒಂದೇ ಸಮನೆ ಸುರಿದಿದೆ.

ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಿರುಸಿನ ಮಳೆಗೆ ಹೈರಣಾದರು. ಮುಂಗಾರಿ ಮಳೆಯಂತೆ ಸೋನೆಯಂತೆ ಸುರಿಯದೇ ಒಮ್ಮೊಂದೊಮ್ಮೆಗೆ ಜೋರಾಗಿ ಸುರಿಯುತ್ತಿದ್ದುದ್ದರಿಂದ ತೋಯ್ದು ಗಡಗಡ ನಡುಗಿದರು. ಸಂಜೆ ಶಾಲೆ ಮುಗಿದಾಗಲೂ ಮಳೆರಾಯನ ಆರ್ಭಟ ನಿಂತಿರಲಿಲ್ಲ. ಕೊಡೆ ಹಿಡಿದರೂ ಬೀಸುತ್ತಿದ್ದ ಗಾಳಿಯಿಂದ ನೆನೆದುಕೊಂಡೆ ಮನೆಗೆ ಸಾಗಿದರು.

ಹಾರಂಗಿ ಜಲಾಶಯವು ಭರ್ತಿಯಾಗಿರುವುದರಿಂದ ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿರುವ ನೀರನ್ನೆಲ್ಲ ನೇರವಾಗಿ ನದಿಗೆ ಬಿಡಲಾಗುತ್ತಿದೆ. ಇನ್ನು ಜಲಾಶಯದಲ್ಲಿ ನೀರನ್ನು ಹಿಡಿದಿಡಲು ಸಾಧ್ಯವಾಗದ ಸ್ಥಿತಿ ಇದ್ದು, ಗರಿಷ್ಠ 2,859 ಅಡಿ ಇದ್ದು, 2858.64 ಅಡಿಯಷ್ಟು ನೀರಿದೆ. ಇದರಿಂದ ಎಷ್ಟೇ ಒಳಹರಿವು ಹೆಚ್ಚಾದರೂ ಅದರನ್ನು ನದಿಗೆ ಬಿಡಬೇಕಿದೆ. ಮಳೆ ನಿರಂತರವಾಗಿ ಮುಂದುವರಿದಿರುವುದರಿಂದ ಅಧಿಕಾರಿಗಳೂ ಕಟ್ಟೆಚ್ಚರ ವಹಿಸಿದ್ದಾರೆ.

ಮಡಿಕೇರಿ ಹೊರತುಪಡಿಸಿದರೆ ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಸೆಂ.ಮೀನಷ್ಟು ಮಳೆ ಸೋಮವಾರ ಸುರಿದಿದೆ. ಬೇಳೂರು 6, ಬಿರುನಾಣೀ, ಕೊಡಗದಾಳು, ಬಿ.ಶೆಟ್ಟಿಗೇರಿಗಳಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.

ಶನಿವಾರಸಂತೆಯ ವ್ಯಾಪ್ತಿಯಲ್ಲಿ ಭಾರಿ ಮಳೆ

ಶನಿವಾರಸಂತೆ: ಇಲ್ಲಿನ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಮುಂಜಾನೆ 4 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಭಾರಿ ಮಳೆ ಸುರಿದಿದೆ. ದಿನವಿಡೀ ಮಳೆ ಸುರಿದ ಕಾರಣ ಕಾರ್ಮಿಕರು ತೋಟದ ಕೆಲಸಗಳಿಗೆ ತೆರಳಲಿಲ್ಲ. ಕಾಜೂರು ಹೊಳೆ ಹಾಗೂ ಬೆಂಬಳೂರು ಹೊಳೆ ತುಂಬಿ ಉಕ್ಕಿ ಹರಿಯುತ್ತಿದ್ದು ಹೊಳೆಯ ಸಮೀಪವಿರುವ ಗದ್ದೆಗಳು ತೋಟಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ರೈತರ ಹೊಲಗದ್ದೆಗಳಲ್ಲಿ ಶೀತ ಉಂಟಾಗಿ ಕಾಫಿ ಮತ್ತು ಭತ್ತದ ಫಸಲಿಗೆ ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕಕ್ಕೆ ಒಳಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT