ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಅನುಭವಿಸಿದರು.
ಕಳೆದ ಐದಾರು ದಿನಗಳಿಂದ ಉರಿಬಿಸಿಲಿನ ವಾತಾವರಣದಿಂದ ಕೂಡಿದ್ದ ಪಟ್ಟಣದಲ್ಲಿ ಮಂಗಳವಾರ ಸಂಜೆ 7 ಗಂಟೆಯಿಂದ 45 ನಿಮಿಷಗಳ ಕಾಲ ಎಡೆಬಿಡದೇ ಧಾರಾಕಾರ ಮಳೆ ಸುರಿಯಿತು. ಸಿಡಿಲಿನ ಆರ್ಭಟಕ್ಕೆ ಭಯಭೀತರಾದ ಜನ ಸಿಕ್ಕ ಸಿಕ್ಕ ಅಂಗಡಿಗಳಲ್ಲಿ ಆಶ್ರಯ ಪಡೆಯುತ್ತಿದ್ದ ದೃಶ್ಯ ಕಂಡುಬಂತು.
ದಾಖಲೆಯ ಮೂರು ಇಂಚುಗಳಷ್ಟು ಮಳೆ ಸುರಿದಿದ್ದು, ವಾಹನ ಸಂಚಾರ, ಜನ ಜೀವನಕ್ಕೆ ಅಡ್ಡಿಯಾಗಿತ್ತು. ಇದರೊಂದಿಗೆ ಸುಂಟಿಕೊಪ್ಪ ಮತ್ತು ಹೋಬಳಿ ವ್ಯಾಪ್ತಿಯ ಹಲವು ಮನೆಗಳಿಗೆ ನೀರು ನುಗ್ಗಿ ಹಲವು ವಸ್ತುಗಳು ಹಾನಿಯಾಗಿವೆ.
ಗದ್ದೆ ಹಳ್ಳದ ಗಿರಿಯಪ್ಪ ಮನೆ ಗ್ರಾಮದಲ್ಲಿ ಮಳೆಯ ಆರ್ಭಟವೂ ಒಮ್ಮೆಲೇ ಆತಂಕ ಸೃಷ್ಟಿ ಮಾಡಿತು. ಮನೆಯೊಳಗೆ ನೀರು ನುಗ್ಗಿ ದಿನಬಳಕೆ ವಸ್ತುಗಳು, ಹಾಸಿಗೆಗಳು, ಮರದ ವಸ್ತುಗಳು ಹಾನಿಯಾಗಿವೆ. ತಕ್ಷಣದಲ್ಲಿ ಸುತ್ತಮುತ್ತಲಿನ ಜನ ಬಂದು ಮನೆಯೊಳಗೆ ತುಂಬಿದ ನೀರನ್ನು ಹೊರ ಹಾಕುವಲ್ಲಿ ಕೈಜೋಡಿಸಿದರು.
ಗುಡ್ಡಪ್ಪ ರೈ ಬಡಾವಣೆಯಲ್ಲೂ ಮಳೆಯ ಆರ್ಭಟ ಜೋರಾಗಿತ್ತು. ಜನತಾ ಕಾಲೋನಿ ಮುಖ್ಯ ರಸ್ತೆಯ ನೀರು ಚರಂಡಿ ಮೇಲ್ಭಾಗದಲ್ಲಿ ಹರಿದ ಪರಿಣಾಮ ಒಮ್ಮೆಲೇ ಕೆರೆಯಂತೆ ಮನೆಯ ಸುತ್ತ ನೀರು ಆವರಿಸಿ ನಿವಾಸಿಗಳು ಬೆಚ್ಚಿಬಿದ್ದರು. 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ ಸೇರಿದ ತೊಂಡೂರು ಗ್ರಾಮದ ರವೀಂದ್ರ ಪೂಜಾರಿ ಎಂಬುವರ ಮನೆಗೆ ನುಗ್ಗಿದ ನೀರು ಮರದ ವಸ್ತುಗಳಿಗೆ ಹಾಗೂ ಬಟ್ಟೆಗಳು ಹಾನಿ ಮಾಡಿದೆ.
ಸಿಡಿಲಿನ ಹೊಡೆತಕ್ಕೆ ಕೆಲವು ಮನೆಗಳ ಫ್ರಿಡ್ಜ್, ವಾಷಿಂಗ್ ಮಷೀನ್, ಟಿವಿಗಳು ಸೇರಿದಂತೆ ಎಲೆಕ್ಟ್ರಿಕಲ್ ವಸ್ತುಗಳು ಹಾನಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.