ಮಂಗಳವಾರ, ಆಗಸ್ಟ್ 20, 2019
23 °C

ಭಾಗಮಂಡಲದಲ್ಲಿ ಧಾರಾಕಾರ ಮಳೆ: ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಳ

Published:
Updated:
Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರವೂ ನಿರಂತರ ಮಳೆಯಾಗಿದೆ. ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಚೇರಂಬಾಣೆ, ಪಾಲೂರು, ಮೂರ್ನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನದಿ, ಹಳ್ಳ– ಕೊಳ್ಳಗಳು ಮೈದುಂಬಿಕೊಳ್ಳುತ್ತಿವೆ.

ಭಾಗಮಂಡಲದ ತ್ರಿವೇಣಿ ಸಂಗಮವು ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಇದೇ ರೀತಿ ವರುಣನ ಅಬ್ಬರ ಮುಂದುವರಿದರೆ ನೀರಿನಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಕೊಡಗಿನ ವಿರಾಜಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಹುದಿಕೇರಿ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಲಕ್ಷ್ಮಣತೀರ್ಥ ನದಿಯಲ್ಲೂ ನೀರಿನ ಹರಿವು ಕೊಂಚ ಹೆಚ್ಚಳವಾಗಿದೆ.

ಕುಸಿದ ಮಣ್ಣು ಆತಂಕ: ಮಡಿಕೇರಿಯಲ್ಲೂ ನಿರಂತರ ಮಳೆಯಾಗುತ್ತಿದ್ದು ಹಳೇ ಖಾಸಗಿ ಬಸ್‌ ನಿಲ್ದಾಣದ ಬಳಿ ಗುಡ್ಡದಿಂದ ಮಣ್ಣು ಕುಸಿಯುತ್ತಿದೆ. ಕಳೆದ ವರ್ಷ ಭೂಕುಸಿತವಾಗಿದ್ದ ಸ್ಥಳದಲ್ಲಿ ತಡೆಗೋಡೆ ನಿರ್ಮಿಸುತ್ತಿದ್ದು ಅಲ್ಲಿ ಹಂತಹಂತವಾಗಿ ಮಣ್ಣು ಕುಸಿಯುತ್ತಿರುವುದು ಸ್ಥಳೀಯರಲ್ಲಿ ಆತಂಕ ತಂದಿದೆ.

ಜೋಡುಪಾಲದ ಬಳಿ ಗುಡ್ಡ ಕುಸಿದು ನಿರ್ಮಾಣ ಹಂತದ ಮನೆಗೆ ಹಾನಿಯಾಗಿದೆ. ಕಳೆದ ವರ್ಷ ಮಹಾಮಳೆಗೆ ಜೋಡುಪಾಲ, 2ನೇ ಮೊಣ್ಣಂಗೇರಿ, ಮದೆನಾಡು, ಮದೆ ಭಾಗದಲ್ಲಿ ಅಪಾರ ಹಾನಿಯಾಗಿತ್ತು. ಈ ಬಾರಿ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ.

ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಯಾದಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಮಡಿಕೇರಿಯಲ್ಲಿ 58 ಮಿ.ಮೀ, ಭಾಗಮಂಡಲದಲ್ಲಿ 75, ಸಂಪಾಜೆ 44, ನಾಪೋಕ್ಲು 35 ಮಿ.ಮೀ ಮಳೆ ಸುರಿದಿದೆ. 

Post Comments (+)