ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಬಿಸಿಲಿನ ಝಳಕ್ಕೆ ಒಣಗುತ್ತಿರುವ ಕಾಳು ಮೆಣಸಿನ ಬಳ್ಳಿ

ಅಕಾಲಿಕ ಮಳೆಯಿಂದಾಗಿ ಕಾಳು ಮೆಣಸಿನ ಫಸಲನ್ನು ಕಳೆದುಕೊಂಡಿದ್ದ ರೈತರಿಗೆ, ಮಳೆಯಿಂದಾಗಿ ಫಸಲನ್ನು ಕಳೆದುಕೊಂಡಿದ್ದ ರೈತರು ಈಗ ಬಿಸಿಲಿನ ತಾಪಕ್ಕೆ ಬಳ್ಳಿಗಳೇ ಒಣಗಿಹೋತ್ತಿದ್ದು, ರೈತರ ನಿದ್ದೆಗೆಡಿಸಿದೆ.
Last Updated 19 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಅಕಾಲಿಕ ಮಳೆಯಿಂದಾಗಿ ಕಾಳು ಮೆಣಸಿನ ಫಸಲನ್ನು ಕಳೆದುಕೊಂಡಿದ್ದ ರೈತರಿಗೆ, ಮಳೆಯಿಂದಾಗಿ ಫಸಲನ್ನು ಕಳೆದುಕೊಂಡಿದ್ದ ರೈತರು ಈಗ ಬಿಸಿಲಿನ ತಾಪಕ್ಕೆ ಬಳ್ಳಿಗಳೇ ಒಣಗಿಹೋತ್ತಿದ್ದು, ರೈತರ ನಿದ್ದೆಗೆಡಿಸಿದೆ.

ಉತ್ತಮ ಫಸಲು ಬರುತ್ತಿದ್ದ ತಾಲ್ಲೂಕಿನಲ್ಲಿ ರೈತರು ತಮ್ಮ ಜೀವನಕ್ಕೆ ಕಾಫಿಯೊಂದಿಗೆ ಕಾಳು ಮೆಣಸನ್ನು ಅವಲಂಬಿಸಿದ್ದರು. ಆದರೆ, ಬಳ್ಳಿಗಳಲ್ಲಿ ಮೆಣಸಿನ ಫಸಲು ಇಲ್ಲದಿರುವುದರಿಂದ ಕೊಯ್ಲಿನ ವೆಚ್ಚ ಹೆಚ್ಚಾಗುತ್ತಿದ್ದು, ಕಾರ್ಮಿಕರ ಸಮಸ್ಯೆಯೂ ಎದುರಾಗಿದೆ. ಒಂದೆಡೆ ಫಸಲು ಇಲ್ಲದೆ, ಬೆಲೆಯೂ ಇಲ್ಲದೆ, ಹೆಚ್ಚಿನ ಕಾರ್ಮಿಕರ ವೇತನ ನೀಡಿ ಕೊಯ್ಲು ಮಾಡುತ್ತಿದ್ದಾರೆ. ಆದರೆ, ಬಿಸಿಲಿನ ಝಳಕ್ಕೆ ಬಳ್ಳಿಗಳು ಒಣಗುತ್ತಿದೆ.

ತಾಲ್ಲೂಕು ಕಾಳುಮೆಣಸಿಗೆ ಸೂಕ್ತ ಪ್ರದೇಶವಾಗಿದ್ದು, ಪ್ರಸಕ್ತ ವರ್ಷ ಗೌಡಳ್ಳಿ, ನೇರುಗಳಲೆ, ದೊಡ್ಡಮಳ್ತೆ, ಗೋಪಾಲಪುರ, ಗಣಗೂರು, ನೀಡ್ತ, ದುಂಡಳ್ಳಿ, ಮಾದಾಪುರ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಾಧಾರಣ ಫಸಲು ಇತ್ತು. ಬೇಸಿಗೆ ಮಳೆ ಬಾರದ ಹಿನ್ನೆಲೆಯಲ್ಲಿ ಮೆಣಸಿನ ಕಾಳು ದಪ್ಪವಾಗಿಲ್ಲ. ಬಳ್ಳಿಗಳಲ್ಲೆ ಒಣಗುತ್ತಿದೆ. ಇಂತಹ ಸಮಸ್ಯೆಗಳ ನಡುವೆ ತರಾತುರಿಯಲ್ಲಿ ಕಾಳುಮೆಣಸು ಕುಯ್ಲಿಗೆ ಮುಂದಾಗಿರುವ ಕೃಷಿಕರಿಗೆ ಕಾರ್ಮಿಕರ ಕೊರತೆಯೂ ಕಾಡುತ್ತಿದೆ.

ಒಂದು ಕೆ.ಜಿ. ಒಣಗಿದ ಕಾಳುಮೆಣಸಿನ ಬೆಲೆ ಸ್ಥಳೀಯವಾಗಿ ₹260 ರಿಂದ ₹280ರ ಆಸುಪಾಸಿನಲ್ಲಿದೆ. ಕಾಫಿ ತೋಟದಲ್ಲಿ ನೆರಳಿಗಾಗಿ ಬೆಳೆಸಿದ ಸಿಲ್ವರ್ ಮರಗಳಿಗೆ ಹಾಗೂ ಇತರೆ ಜಾತಿಯ ಮರಗಳಿಗೆ ಕಾಳು ಮೆಣಸಿನ ಬಳ್ಳಿಗಳನ್ನು ಹಬ್ಬಿಸಿ, ಬಳ್ಳಿಗಳನ್ನು ಪೋಷಿಸಿ, 4 ವರ್ಷಗಳ ನಂತರ ಬರುವ ಫಸಲಿನಿಂದ ಅದಾಯ ಪಡೆಯುವುದು ಇಲ್ಲಿನ ಕಾಫಿ ಬೆಳೆಗಾರರಿಗೆ ರೂಢಿಯಾಗಿದೆ.

ಮೊದಲು ಕಾಫಿಯನ್ನು ನಂಬಿ ಕೃಷಿ ಕೈಗೊಳ್ಳುತ್ತಿದ್ದ ರೈತರಿಗೆ ಕಾಫಿಗೆ ಬೆಲೆ ಇಲ್ಲದ ಸಂದರ್ಭ ಮೆಣಸಿನ ಫಸಲು ಕೈ ಹಿಡಿಯಿತು. ಬೆಲೆ ₹600ರಿಂದ ₹750ರ ವರೆಗೆ ಬೆಲೆ ತಲುಪಿತ್ತು. ಕಾಫಿ ದರದಲ್ಲಿ ಏರುಪೇರಾದರೂ ಕಾಳು ಮೆಣಸಿನಿಂದ ಬರುವ ಆದಾಯದಿಂದಾಗಿ ಆರ್ಥಿಕ ಸಂಕಷ್ಟದಿಂದ ಪಾರಾಗುತ್ತ ಬಂದಿದ್ದರು.

ತಾಲ್ಲೂಕಿನಲ್ಲಿ ಒಟ್ಟು 4,500 ಹೆಕ್ಟೇರ್ ಜಾಗದಲ್ಲಿ ಕಾಳುಮೆಣಸನ್ನು ಬೆಳೆಯಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾಳುಮೆಣಸು ಉತ್ಪಾದನೆಯಾಗದ ಕಾರಣ ದರದಲ್ಲಿ ಏರಿಕೆಯಾಗಿದ್ದು ಭಾರತದ ಮೆಣಸಿಗೆ ಬೇಡಿಕೆ ಈಗ ಅಧಿಕವಾಗಿತ್ತು. ಆದರೆ, ಕೆಲವರು ವಿದೇಶಗಳಿಂದ ಕಳಪೆ ಗುಣಮಟ್ಟದ ಕಾಳು ಮೆಣಸನ್ನು ಆಮದು ಮಾಡಿಕೊಂಡು, ದೇಶೀಯ ಮೆಣಸಿಗೆ ಸೇರಿಸಿ ಮಾರಲು ಪ್ರಾರಂಭವಾಗುತ್ತಿದ್ದಂತೆ ಕಾಳು ಮೆಣಸಿನ ಬೆಲೆ ಪಾತಾಳ ಸೇರಿತು.

ದೇಶದಲ್ಲಿ ವಾರ್ಷಿಕವಾಗಿ ಒಟ್ಟು 2.20 ಲಕ್ಷ ಟನ್ ಕಾಳು ಮೆಣಸು ಉತ್ಪಾದನೆಯಾಗುತ್ತಿದ್ದು ಇದರಲ್ಲಿ ಆಂತರಿಕ ಬಳಕೆಯ ಪ್ರಮಾಣ ಸುಮಾರು 40 ಸಾವಿರ ಟನ್ ಎಂದು ಅಂದಾಜು ಮಾಡಲಾಗಿದ್ದು ಉಳಿದ 1.80 ಲಕ್ಷ ಟನ್ ಹೊರದೇಶಗಳಿಗೆ ರಫ್ತಾಗುತ್ತದೆ.
ಕಾಳುಮೆಣಸನ್ನು ಸರಿಯಾಗಿ ಸಂಸ್ಕರಿಸಿ ಜಾಗತಿಕ ಮಾರುಕಟ್ಟೆಗೆ ಇಲ್ಲಿಂದ ನೇರವಾಗಿ ಮಾರಾಟ ಮಾಡುವಂತಾದರೆ ಬೆಳೆಗಾರರಿಗೆ ಹೆಚ್ಚಿನ ದರ ಸಿಗುತ್ತದೆ. ಸದ್ಯ ಕೊಡಗಿನಲ್ಲಿ ಮೆಣಸನ್ನು ಸಂಸ್ಕರಿಸಿ ಮಾರಾಟ ಮಾಡುವ ವ್ಯವಸ್ಥೆ ಇಲ್ಲದ ಕಾರಣ ಪರ ರಾಜ್ಯದ ವ್ಯಾಪಾರಿಗಳನ್ನೇ ನೆಚ್ಚಿಕೊಳ್ಳುವುದು ಅನಿವಾರ್ಯವಾಗಿದೆ. ಸಂಸ್ಕರಣಾ ಘಟಕವನ್ನು ಕೊಡಗಿನಲ್ಲಿಯೇ ಸ್ಥಾಪನೆಯಾಗಬೇಕು ಎಂದು ಹೆಗ್ಗುಳ ಗ್ರಾಮದ ಕಾಳು ಮೆಣಸಿನ ಬೆಳೆಗಾರ ಸತೀಶ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT