ಮಡಿಕೇರಿ– ಮಂಗಳೂರು ನಡುವೆ ಹೆದ್ದಾರಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರು

7
ಮದೆನಾಡು ಬಳಿ ಕುಸಿದ ಗುಡ್ಡ, ತಪ್ಪಿದ ದೊಡ್ಡ ಅನಾಹುತ, ಮುಂದುವರಿದ ಮಣ್ಣು ತೆರವು ಕಾರ್ಯಾಚರಣೆ

ಮಡಿಕೇರಿ– ಮಂಗಳೂರು ನಡುವೆ ಹೆದ್ದಾರಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರು

Published:
Updated:
Deccan Herald

ಮಡಿಕೇರಿ: ಮಡಿಕೇರಿ– ಮಂಗಳೂರು ನಡುವೆಯ ರಾಷ್ಟ್ರೀಯ ಹೆದ್ದಾರಿ– 275ರ ಮದೆನಾಡು ಬಳಿ ಸೋಮವಾರ ಬೆಳಿಗ್ಗೆ ಗುಡ್ಡ ಕುಸಿದು, ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು.

ಸಂಪಾಜೆ ವ್ಯಾಪ್ತಿಯಲ್ಲಿ ಭಾನುವಾರ ಸುರಿದ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿದ ಘಟನೆಗಳು ನಡೆದಿವೆ. ಆದರೆ, ಮದೆನಾಡು ಬಳಿ ಬೃಹತ್‌ ಗುಡ್ಡ ಹೆದ್ದಾರಿ ಮೇಲೆಯೇ ಬಿದ್ದು ಇಡೀ ದಿವಸ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಬೆಂಗಳೂರು ಹಾಗೂ ಮಂಗಳೂರಿಗೆ ತೆರಳಬೇಕಿದ್ದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿಕೊಂಡರು. ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದ ಕಾರಣ, ತೆರವು ಕಾರ್ಯಾಚರಣೆ ವಿಳಂಬಗೊಂಡಿತು.

ಆರಂಭದಲ್ಲಿ ಎರಡು ಜೆಸಿಬಿ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದರೆ, ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನಗಳು ಅದರಡಿ ಸಿಲುಕಿಕೊಂಡಿರುವ ಸಂಶಯ ವ್ಯಕ್ತವಾದ ಕಾರಣ ಮತ್ತೆ ಮೂರು ಜೆಸಿಬಿಗಳನ್ನು ಕರೆಸಿ ತೆರವು ಕಾರ್ಯಾಚರಣೆ ಚುರುಕುಗೊಳಿಸಲಾಯಿತು. ಯಾವುದೇ ಅನಾಹುತ ಸಂಭವಿಸಿರಲಿಲ್ಲ.

ಪರ್ಯಾಯ ಮಾರ್ಗ: ಮಂಗಳೂರಿನಿಂದ ಮಡಿಕೇರಿಗೆ ಬರುತ್ತಿದ್ದವರು, ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ನೂರಾರು ಪ್ರಯಾಣಿಕರು ರಸ್ತೆ ಮಧ್ಯದಲ್ಲಿ ಸಿಲುಕಿಕೊಂಡಿದ್ದರು. ಮೊದಲೇ ಕಿರಿದಾದ ರಸ್ತೆಯಿದ್ದ ಕಾರಣ, ವಾಹನಗಳು ವಾಪಸ್‌ ತೆರಳಲೂ ಸಾಧ್ಯವಾಗದೇ ನಿಂತಲ್ಲೇ ನಿಂತಿದ್ದವು. ಬಳಿಕ ಒಂದೊಂದೇ ವಾಹನಗಳನ್ನು ಸಂ‍ಪಾಜೆಗೆ ತೆರಳಿ ಅಲ್ಲಿಂದ ಶಿರಾಡಿ ಘಾಟ್‌ ಮಾರ್ಗವಾಗಿ ತೆರಳುವಂತೆ ಸೂಚಿಸಲಾಯಿತು.

ಇನ್ನು ಮಡಿಕೇರಿ ಕಡೆಯಿಂದ ಹೋಗಿದ್ದ ವಾಹನಗಳೂ ವಾಪಸ್‌ ಬಂದು, ಶನಿವಾರಸಂತೆ ಹಾಗೂ ಹಾಸನ ಮಾರ್ಗವಾಗಿ ಮಂಗಳೂರಿಗೆ ತೆರಳಿದವು. ಸಂಜೆ ವೇಳೆಗೆ ಮಣ್ಣು ತೆರವು ಕಾರ್ಯವನ್ನು ಪೂರ್ಣಗೊಳಿಸಲಾಯಿತು.

ಮನೆ ಕುಸಿತ: ಕಾಟಕೇರಿ ಲೋಕೇಶ್‌ ಎಂಬುವವರ ಮನೆಯು ಮಳೆಗೆ ಕುಸಿದಿದೆ. ನಗರದಲ್ಲೂ ಹಲವು ಮನೆಗಳು ಕುಸಿಯುವ ಹಂತ ತಲುಪಿದ್ದು, ಬೆಟ್ಟದ ನಿವಾಸಿಗಳು ಆತಂಕಗೊಂಡಿದ್ದಾರೆ. ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರೆದಿದೆ.

ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 87.06 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 2,970.50 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,368.14 ಮಿ.ಮೀ. ಮಳೆಯಾಗಿತ್ತು.

ಹೋಬಳಿವಾರು ಮಳೆ: ಮಡಿಕೇರಿ ಕಸಬಾ 137.40, ನಾಪೋಕ್ಲು 73.40, ಸಂಪಾಜೆ 156, ಭಾಗಮಂಡಲ 95, ವಿರಾಜಪೇಟೆ ಕಸಬಾ 58.20, ಹುದಿಕೇರಿ 83.50, ಶ್ರೀಮಂಗಲ 79, ಪೊನ್ನಂಪೇಟೆ 35, ಅಮ್ಮತ್ತಿ 25, ಬಾಳೆಲೆ 24, ಸೋಮವಾರಪೇಟೆ ಕಸಬಾ 112, ಶನಿವಾರಸಂತೆ 92, ಶಾಂತಳ್ಳಿ 191, ಕೊಡ್ಲಿಪೇಟೆ 50, ಕುಶಾಲನಗರ 54, ಸುಂಟಿಕೊಪ್ಪ 67 ಮಿ.ಮೀ. ಮಳೆಯಾಗಿದೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !