ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಬುರ್ಖಾ, ಹಿಜಾಬ್‌ ಧರಿಸಿ ನೃತ್ಯ, ಮುಸ್ಲಿಂ ಸಂಘಟನೆಗಳ ಖಂಡನೆ

‘ಮುಸ್ಲಿಮರ ಭಾವನೆಗೆ ಧಕ್ಕೆ ತರುವ ಉದ್ದೇಶ ಇಲ್ಲ’: ರಮೇಶ್ ಮುದ್ದಯ್ಯ ಸ್ಪಷ್ಟನೆ
Last Updated 30 ಮೇ 2022, 13:38 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು): ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ವಜ್ರಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬುರ್ಖಾ, ಹಿಜಾಬ್ ಧರಿಸಿ ನೃತ್ಯ ಮಾಡಲಾಗಿದ್ದು, ಅದನ್ನು ಮುಸ್ಲಿಂ ಸಂಘಟನೆಗಳು ಖಂಡಿಸಿವೆ. ಈ ಬೆಳವಣಿಗೆ ಬೆನ್ನಲ್ಲೇ ವಜ್ರಮಹೋತ್ಸವ ಸಮಿತಿ ಪದಾಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರ ಭಾವನೆಗೆ ಧಕ್ಕೆ ತರುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಮಕ್ಕಳ ಕಾರ್ಯಕ್ರಮದಿಂದ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗಿದ್ದರೆ, ವಿಷಾದ ವ್ಯಕ್ತಪಡಿಸುವುದಾಗಿ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಕುಂಡ್ಲೋಳಂಡ ರಮೇಶ್ ಮುದ್ದಯ್ಯ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮನರಂಜನೆ ದೃಷ್ಟಿಯಿಂದ ಮಕ್ಕಳು ಬುರ್ಖಾ ಮತ್ತು ಹಿಜಾಬ್ ಧರಿಸಿ ನೃತ್ಯ ಮಾಡಿದ್ದರು. ವಜ್ರಮಹೋತ್ಸವ ಮೇ 28, 29ರಂದು ನಡೆದಿತ್ತು. ಮೊದಲ ದಿನದಂದು ಬೆಳಿಗ್ಗೆ ನಡೆದಿದ್ದ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಜರಿದ್ದು, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ತೆರಳಿದ್ದರು. ಮಧ್ಯಾಹ್ನ 3 ಗಂಟೆಯ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೀಣಾ ಹಾಜರಿರಲಿಲ್ಲ. ಆಗ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ. ಮಕ್ಕಳು ಛದ್ಮವೇಷದ ಸಲುವಾಗಿ ಮುಖ ಕಾಣಬಾರದೆನ್ನುವ ಉದ್ದೇಶದಿಂದ ಬುರ್ಖಾ ಮತ್ತು ಹಿಜಾಬ್ ಧರಿಸಿ ಕೊಡವ ವಾಲಗಕ್ಕೆ ಹೆಜ್ಜೆ ಹಾಕಿದ್ದಾರೆ’ ಎಂದು ತಿಳಿಸಿದರು.

‘ಹಿಜಾಬ್, ಬುರ್ಖಾ ಧರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ವೀಣಾ ಅಚ್ಚಯ್ಯ ಹಾಜರಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಬಿಂಬಿಸುತ್ತಿದ್ದಾರೆ. ಆರೋಪ ನಿಜವಲ್ಲ’ ಎಂದು ಹೇಳಿದರು.

ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಕುಂಡ್ಯೋಳಂಡ ವಿಶು ಪೂವಯ್ಯ, ಕನ್ನಂಬಿರ ಸುಧಿ ತಿಮ್ಮಯ್ಯ, ಕಾಂಡಂಡ ಸೂರಜ್ ಬೋಪಣ್ಣ, ಕಾಂಡಂಡ ಅಪ್ಪಚ್ಚು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT