ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: 157 ಎಚ್‌ಐವಿ ಸೋಂಕಿತರು ಪತ್ತೆ

ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆ: ದುಶ್ಚಟಗಳಿಗೆ ಬಲಿಯಾಗದಂತೆ ಸಲಹೆ
Last Updated 2 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಮಡಿಕೇರಿ: ಎಚ್‌ಐವಿ/ಏಡ್ಸ್ ಬಾಧಿತರನ್ನು ಯಾವುದೇ ಕಾರಣಕ್ಕೂ ತಾರತಮ್ಯದಿಂದ ನೋಡಬಾರದು ಎಂದು ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸಲಹೆ ನೀಡಿದರು.

ಜಿಲ್ಲಾಡಳಿತದಿಂದ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರಲ್ಲಿಯೂ ಎಚ್‌ಐವಿ, ಏಡ್ಸ್ ಬಗ್ಗೆ ಜಾಗೃತಿ ಇರಬೇಕು. ಯುವಜನರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯಯುತ ಬದುಕು ನಡೆಸುವಂತಾಗಬೇಕು’ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಮಾತನಾಡಿ, ‘ಪ್ರತಿಯೊಬ್ಬರೂ ಶಿಸ್ತುಬದ್ಧ ಜೀವನ ನಡೆಸಬೇಕು. ಸುಂದರ ಬದುಕು ಕಾಪಾಡಿಕೊಳ್ಳಬೇಕು. ದುಶ್ಚಟಗಳಿಗೆ ದಾಸರಾಗಬಾರದು. ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು’ ಎಂದು ಕಿವಿಮಾತು ಹೇಳಿದರು.

ರೆಡ್‌ಕ್ರಾಸ್ ಸಂಸ್ಥೆಯ ರವೀಂದ್ರ ರೈ ಮಾತನಾಡಿ, ‘ವರ್ಷದಿಂದ ವರ್ಷಕ್ಕೆ ಎಚ್‌ಐವಿ ಹಾಗೂ ಏಡ್ಸ್ ಬಾಧಿತರು ಕಡಿಮೆಯಾಗುತ್ತಿದ್ದು, ಸಂಪೂರ್ಣ ನಿರ್ಮೂಲನೆಗೆ ಪಣ ತೊಡಬೇಕು’ ಎಂದು ಹೇಳಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎನ್.ಆನಂದ್ ಮಾತನಾಡಿ ‘ಎಚ್‌ಐವಿ ಮಾನವನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ವೈರಾಣು. ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆ ಮಾಡದ ಸೋಂಕಿತ ರಕ್ತ ಮತ್ತು ರಕ್ತ ಉತ್ಪನ್ನಗಳ ವರ್ಗಾವಣೆ, ಸಂಸ್ಕರಿಸದ ಚೂಪು ಸಾಧನಗಳು, ಸಿರಿಂಜುಗಳನ್ನು ಬಳಸುವುದರಿಂದ ಎಚ್‌ಐವಿ ಹರಡುವ ಸಾಧ್ಯತೆ ಇದೆ’ ಎಂದು ಎಚ್ಚರಿಸಿದರು.

ಎಚ್‌ಐವಿ ಲಕ್ಷಣಗಳು: ತೂಕ ಕಡಿಮೆಯಾಗುವುದು, ಒಂದು ತಿಂಗಳವರೆಗೆ ನಿರಂತರ ಭೇದಿಯಾಗುವುದು, ಜ್ವರ ಬರುವುದು, ಕ್ಷಯ ಸೋಂಕಿತ, ಬಾಯಿ, ಗಂಟಲು ಮತ್ತು ಅನ್ನನಾಳಗಳಲ್ಲಿ ಬಿಳಿ ಪೊರೆ ಹುನ್ನುಗಳಾಗುವುದು, ನ್ಯೂಮೋನಿಯ ಸೋಂಕು ಬರುವುದು, ಮಿದುಳಿಗೆ ಸೋಂಕಾಗುವುದು, ದೃಷ್ಟಿ ಕಡಿಮೆಯಾಗುವುದು, ಚರ್ಮಕ್ಕೆ ಇತರೆ ಸೋಂಕು ತಗಲುವುದು ಮತ್ತಿತರ ಲಕ್ಷಣವಾಗಿದೆ ಎಂದರು.

ಶೇ 39 ಇಳಿಕೆ: ವಿಶ್ವ ಆರೋಗ್ಯ ಸಂಸ್ಥೆ ಅಂಕಿಅಂಶದ ಪ್ರಕಾರ ಪ್ರಪಂಚದಲ್ಲಿ ಸುಮಾರು 37.9 ದಶಲಕ್ಷ ಎಚ್‌ಐವಿ ಸೋಂಕಿತರು ಇದ್ದಾರೆ. 1.8 ದಶಲಕ್ಷ ಹೊಸದಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. 2002ರಿಂದ 2016ರ ಮಧ್ಯದಲ್ಲಿ ಎಚ್‌ಐವಿ ಸೋಂಕಿತರಲ್ಲಿ ಶೇ 39 ಇಳಿಕೆ ಕಂಡು ಬಂದಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ಒಟ್ಟು 44 ಐಸಿಟಿಸಿ ಕೇಂದ್ರಗಳಿದ್ದು, 2018–19ನೇ ಸಾಲಿನಲ್ಲಿ 22,689 ಜನರನ್ನು ಪರೀಕ್ಷಿಸಲಾಗಿದ್ದು, ಒಟ್ಟು 157 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ ಎಂದೂ ಮಾಹಿತಿ ನೀಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ರಾಮಚಂದ್ರ ಕಾಮತ್ ಮಾತನಾಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ‍‍‍ ರತನ್ ತಮ್ಮಯ್ಯ ಪ್ರತಿಜ್ಞಾ ವಿಧಿ ಬೋಧಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್, ಲಯನ್ ಸಂಸ್ಥೆಯ ಅಧ್ಯಕ್ಷ ಎಲ್.ಮೋಹನ್ ಕುಮಾರ್ ಇದ್ದರು.

ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಸುನೀತಾ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅನಿತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT