ನಾಪೋಕ್ಲು: ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವ ಮತ್ತೆ ತನ್ನ ಗತವೈಭವ ಪಡೆಯುವುದಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 17ರಿಂದ ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೌಟುಂಬಿಕ ಹಾಕಿ ಕಲರವ ಆರಂಭಗೊಳ್ಳಲಿದೆ. ಉತ್ಸವದ ಸಾರಥ್ಯವನ್ನು ಬಲ್ಲಮಾವಟಿಯ ಅಪ್ಪಚೆಟ್ಟೋಳಂಡ ಕುಟುಂಬ ವಹಿಸಿದೆ. ನಾಲ್ಕುನಾಡು ವ್ಯಾಪ್ತಿಯಲ್ಲಿ ಹಾಕಿ ಸಂಭ್ರಮ ಗರಿಗೆದರುತ್ತಿದೆ.
ಬಲ್ಲಮಾವಟಿ ಗ್ರಾಮದಲ್ಲಿ ನೆಲೆಸಿರುವ ಅಪ್ಪಚೆಟ್ಟೋಳಂಡ ಕುಟುಂಬದ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಹಾದಿಯಲ್ಲಿದ್ದಾರೆ. ಇದೀಗ ಹಾಕಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ವಿಶೇಷ ಪ್ರಯತ್ನ ನಡೆಸಿದ್ದಾರೆ. ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕುಟುಂಬದ ಹಿರಿಯರು ಈಗಿನ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ.
ಮೂಲಗಳ ಪ್ರಕಾರ ಕುಟುಂಬದ ಮೂಲ ವ್ಯಕ್ತಿಗಳಾದ ಪೊನ್ನಚ್ಚ ಮತ್ತು ಚೆನ್ನಚ್ಚ ಸಣ್ಣ ಪುಲಿಕೋಟು ಗ್ರಾಮದಿಂದ ಬಂದು ಮಾವಟಿಯಲ್ಲಿರುವ ಮಂದ್ ಸಮೀಪದಲ್ಲಿ ನೆಲೆ ನಿಂತರು ಎನ್ನಲಾಗಿದೆ. ಈ ಸ್ಥಳದ ಊರುಗುಪ್ಪೆ ಎಂಬಲ್ಲಿ ಮೂಲ ಮನೆ ಇದ್ದ ಬಗ್ಗೆ ಕೆಲವು ಕುರುಹುಗಳಿವೆ. 1899 ವೀರರಾಜನ ಒಪ್ಪಿಗೆ ಪಡೆದುಕೊಂಡ ಕುಟುಂಬದ ಹಿರಿಯರು ಬಲ್ಲಮಾವಟಿಯಲ್ಲಿ 11 ಕೋಣೆಗಳ ಮುಂದ್ ಮನೆಯನ್ನು ನಿರ್ಮಿಸಿದರು. 1956 ರಲ್ಲಿ ಹಂಚಿನ ಮನೆ ನಿರ್ಮಿಸಲಾಯಿತು. 1992 ರಲ್ಲಿ ಕುಟುಂಬದ ಮುಂದ್ ಮನೆಯ ಅಭಿವೃದ್ಧಿಗಾಗಿ ಕುಟುಂಬ ಅಭಿವೃದ್ಧಿ ಸಂಘವನ್ನು ಸ್ಥಾಪನೆ ಮಾಡಲಾಯಿತು. ಸಂಘದ ಸದಸ್ಯರು ಪ್ರತಿ ವರ್ಷ ನವೆಂಬರ್‌ನಲ್ಲಿ ಒಟ್ಟುಗೂಡಿ ಸಂಘದ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ. ಅಪ್ಪಚೆಟ್ಟೋಳಂಡ ಈರಪ್ಪ ಕುಟುಂಬದ ಈಗಿನ ಪಟ್ಟೆದಾರರಾಗಿದ್ದಾರೆ. ಕುಟುಂಬದಲ್ಲಿ ಒಟ್ಟು 186 ಸದಸ್ಯರಿದ್ದಾರೆ. ಅಪ್ಪಚೆಟ್ಟೋಳಂಡ ಕುಟುಂಬಕ್ಕೆ ಸಂಬಂಧಿಸಿದ ಮೂಲ ದಾಖಲೆಗಳು ಬಲ್ಲಮಾವಟಿ, ಎಮ್ಮೆಮಾಡು ಮತ್ತು ಅಯ್ಯಂಗೇರಿ ಗ್ರಾಮಗಳಲ್ಲಿ 1789 ನಂತರ ಸಾಬೀತಾಗಿರುತ್ತದೆ. ಕುಟುಂಬಸ್ಥರು ವಿದೇಶವು ಸೇರಿದಂತೆ ವಿವಿಧೆಡೆ ನಡೆಸಿದ್ದಾರೆ.
ಕಳೆದ 2 ತಲೆಮಾರುಗಳಿಂದ ಈ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದವರಾಗಿದ್ದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾಪಟುಗಳಾದ ಎ.ಬಿ.ಸುಬ್ಬಯ್ಯ, ಎ.ಎಸ್.ಭೀಮಯ್ಯ, ಜೂಬಣಿ ಗಂಗಮ್ಮ, ತುಳಸಿ ತಂಗಮ್ಮ ಈ ಕುಟುಂಬದವರು.
ಅಂತರರಾಷ್ಟ್ರೀಯ ಚೆಸ್ ಆಟಗಾರ ಅದೀಶ್ ಸೋಮಯ್ಯ ಜರ್ಮನಿ, ಹಾಲೆಂಡ್, ರಷ್ಯಾ, ಫ್ರಾನ್ಸ್ ಮುಂತಾದ 5 ರಾಷ್ಟ್ರಗಳಲ್ಲಿ ತನ್ನ ಹಿರಿಮೆಯನ್ನು ಸಾಧಿಸಿದವರಾಗಿದ್ದಾರೆ. 1930ರಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ಎ.ಬಿ.ಸುಬ್ಬಯ್ಯ ಆಫ್ರಿಕಾ ದೇಶದ ಇಥಿಯೋಪಿಯಾ ಮತ್ತು ಈಜಿಪ್ಟ್ ದೇಶದಲ್ಲಿ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಪ್ರಾದೇಶಿಕ ಆಯುಕ್ತರಾಗಿ ಮೈಸೂರು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಕುಂಞಪ್ಪ, ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ ಕುಂಙಮ್ಮ, ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ರಾಜಕೀಯ ಕ್ಷೇತ್ರದಲ್ಲಿ ಚಾಪು ಮನು ಮುತ್ತಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ವನು ವಸಂತ ಸೇರಿದಂತೆ ಹತ್ತು ಹಲವು ಮಂದಿ ಅಪ್ಪಚೆಟ್ಟೋಳಂಡ ಕುಟುಂಬದವರು.
ಕಾಶಿ ಅಪ್ಪಯ್ಯ, ಯಶು ಈರಪ್ಪ, ಬಾಬಾ ಉತ್ತಪ್ಪ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕ್ರೀಡೆ, ರಾಜಕೀಯ, ಸರ್ಕಾರಿ ಸೇವೆ, ಖಾಸಗಿ ರಂಗ ಮಾತ್ರವಲ್ಲದೆ ಕೃಷಿ ಕ್ಷೇತ್ರದಲ್ಲೂ ಅಪ್ಪಚೆಟ್ಟೋಳಂಡಕುಟುಂಬದ ಮಂದಿ ಸಾಧಕರಾಗಿರುವುದು ವಿಶೇಷ.
ಸಾಧನೆಯ ಶಿಖರವೇರಿದವರು
ಎ.ಬಿ.ಸುಬ್ಬಯ್ಯ
ಬಿದ್ದಯ್ಯ ಮತ್ತು ಚೀಯವ್ವ ದಂಪತಿಯ ಪುತ್ರರಾಗಿ 1915 ರಲ್ಲಿ ಎ.ಬಿ.ಸುಬ್ಬಯ್ಯ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ನಾಪೋಕ್ಲು ಶಾಲೆಯಲ್ಲಿ ನಡೆಯಿತು. ತಮ್ಮ ಶಾಲಾ ದಿನಗಳಲ್ಲಿ ಉದ್ದ ಜಿಗಿತ 100 ಮೀ. ಓಟ, ಪೋಲ್ ವಾಲ್ಟ್ ಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು.
1929ರಲ್ಲಿ ಮಡಿಕೇರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ ಪಡೆಯುವಾಗಲೂ 100 ಮೀ.ಓಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪ್ರಶಸ್ತಿ ಗಳಿಸಿದ್ದರು. 1941ರಲ್ಲಿ ಸಿಗ್ನಲ್ ಕಾರ್ಪ್ಸ್‌ಗೆ ಆಯ್ಕೆಗೊಂಡು ಸೇನೆ ಸೇರಿದರು. ಇವರು 2ನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಇಥಿಯೋಪಿಯಾ ಮತ್ತು ಈಜಿಪ್ಟ್ ದೇಶಗಳಲ್ಲಿ ಇದ್ದರು. ಅಲ್ಲಿಂದ ಹಿಂತಿರುಗಿದ ನಂತರ ಬರ್ಮಾದಲ್ಲಿ ಸೇವೆ ಸಲ್ಲಿಸಿದರು. ಸೇನೆಯಿಂದ ನಿವೃತ್ತರಾಗಿ ಕೊಡಗು ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.
ಎ.ಎಸ್.ಭೀಮಯ್ಯ
ಸೋಮಪ್ಪ ಮತ್ತು ಬೊಳ್ಳವ್ವ ದಂಪತಿಯ ಪುತ್ರರಾಗಿ ಅಕ್ಟೋಬರ್ 1919 ರಲ್ಲಿ ಜನಿಸಿದ ಎ.ಎಸ್.ಭೀಮಯ್ಯ ಬಿ ಫಾರಂ ಓದಿದ್ದರು. ಇವರು ಅತ್ಯುತ್ತಮ ಕ್ರೀಡಾಪಟುವಾಗಿದ್ದರು. ಕೊಡಗು ರಾಜ್ಯವನ್ನು ಪ್ರತಿನಿಧಿಸಿದ್ದರು. 21ನೇ ವಯಸ್ಸಿನಲ್ಲಿ ಭಾರತೀಯ ಸೇನೆ ಸೇರಿದರು. ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದರು. 1973ರಲ್ಲಿ ಗೌರವ ಲೆಫ್ಟಿನೆಂಟ್ ಆಗಿ ನಿವೃತ್ತರಾದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.