ಮನೆ ಉಳಿದಿರುವ ಖಾತರಿಯೇ ಇಲ್ಲ!

7
ಗಂಜಿ ಕೇಂದ್ರಗಳಲ್ಲಿ ಕುಳಿತಿರುವ ಸಂತ್ರಸ್ತರ ಮುಖದಲ್ಲಿ ಆತಂಕದ ಛಾಯೆ

ಮನೆ ಉಳಿದಿರುವ ಖಾತರಿಯೇ ಇಲ್ಲ!

Published:
Updated:
Deccan Herald

ಜೋಡುಪಾಲ (ಕೊಡಗು): ‘ಶುಕ್ರವಾರ ಬೆಳಿಗ್ಗೆ 8.30ರ ಸುಮಾರಿಗೆ ಜೋರಾಗಿ ಶಬ್ಧ ಆಯಿತು. ಏನಾಯಿತು ಎಂದು ನೋಡುವಷ್ಟರಲ್ಲಿ ಬಂಡೆ, ಮರಗಳೊಂದಿಗೆ ನೀರು ಬಂದು ನುಗ್ಗಿತು. ಜೀವ ಉಳಿಸಿಕೊಳ್ಳುವುದಕ್ಕಾಗಿ ಓಡಿ ಬಂದೆವು. ಪಕ್ಕದ ಮನೆಗಳು ಕೊಚ್ಚಿಕೊಂಡು ಹೋಗಿರುವುದು ಗೊತ್ತಾಗಿದೆ. ನಮ್ಮ ಮನೆ ಇದೆಯೇ ಎಂಬುದು ಗೊತ್ತಿಲ್ಲ’

– ಇದು ಸಂಪಾಜೆ ಗಂಜಿ ಕೇಂದ್ರದಲ್ಲಿ ಶನಿವಾರ ಮಧ್ಯಾಹ್ನ ಚಿಂತಾಕ್ರಾಂತರಾಗಿ ಕುಳಿತಿದ್ದ ಜೋಡುಪಾಲದ ಯಶೋದಾ ಅವರ ಮಾತುಗಳು. ಅವರೊಬ್ಬರೇ ಅಲ್ಲ. ಜೋಡುಪಾಲದ ಹತ್ತಾರು ಕುಟುಂಬಗಳ ಸ್ಥಿತಿ ಇದೇ ಆಗಿದೆ. ಭೋರ್ಗರೆದು ಹರಿದ ಪ್ರವಾಹದಲ್ಲಿ ಮನೆ ಉಳಿದಿದೆಯೇ? ಇಲ್ಲವೋ ಎಂಬ ಮಾಹಿತಿಯೂ ಅವರಿಗೆ ಇಲ್ಲ.

‘ಸ್ವಲ್ಪ ಅಡಿಕೆ ತೋಟವಿದೆ. ಮನೆಯಲ್ಲಿ ನಾಲ್ವರು ಇದ್ದೇವೆ. ಮೂವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದೆವು. ನೆರೆಯಲ್ಲಿ ಕೊಚ್ಚಿಕೊಂಡು ಹೋಗಬಹುದು ಎಂಬ ಭಯದಿಂದ ಜೀವ ಉಳಿಸಿಕೊಳ್ಳಲು ಎಲ್ಲವನ್ನೂ ಬಿಟ್ಟು ಬಂದೆವು’ ಎಂದು ಯಶೋದಾ ಹೇಳಿದರು.

ಔಷಧಿ ಮರೆತು ಬಂದರು:  ‘ಜೋರಾದ ಶಬ್ಧ ಕೇಳುತ್ತಿದ್ದಂತೆ ನಾನು, ಹೆಂಡತಿ ಮತ್ತು ಒಂಬತ್ತನೇ ತರಗತಿ ಓದುತ್ತಿರುವ ಮಗಳು ಓಡಿಬಂದೆವು. ನಾಯಿ ಮನೆಯಲ್ಲೇ ಉಳಿಯಿತು. ಚಿನ್ನಾಭರಣ, ನಗದು, ಮನೆಯ ಇತರೆ ವಸ್ತುಗಳನ್ನೂ ತರಲಾಗಲಿಲ್ಲ. ಮನೆಯಲ್ಲಿದ್ದ ಎಲ್ಲವೂ ಉಳಿದಿದೆಯೋ? ಇಲ್ಲವೋ? ನನಗೆ ಗೊತ್ತಿಲ್ಲ’ ಎಂದು ಜೋಡುಪಾಲದ ಆನಂದ್‌ ಘಟನೆಯ ತೀವ್ರತೆಯನ್ನು ವಿವರಿಸಿದರು.

ಅಪ್ಪ, ಅಮ್ಮ ತಮ್ಮನ ಜೊತೆ ವಾಸಿಸುತ್ತಾರೆ. ಅವರು ಕೂಡ ರಕ್ಷಣೆಗಾಗಿ ಎಲ್ಲರ ಜೊತೆ ಬಂದರು. ಹಾಗೆ ಬರುವಾಗ ಔಷಧಿಯನ್ನೇ ಮರೆತುಬಂದರು ಎಂದರು.

ವಾರದ ಹಿಂದೆ ಮನೆ ನೆಲಸಮ:  ‘ಒಂದನೇ ಮಣ್ಣಂಗೇರಿಯಲ್ಲಿದ್ದ ನಮ್ಮ ಮನೆ ವಾರದ ಹಿಂದೆ ಬಿದ್ದುಹೋಯಿತು. ಮಾವನ ಮನೆಯಲ್ಲಿ ಉಳಿದಕೊಂಡಿದ್ದೆವು. ಹೊರಜಗತ್ತಿನ ಸಂಪರ್ಕವೇ ಇರಲಿಲ್ಲ. ಮಾವನ ಮಗನ ಮೂಲಕ ರಕ್ಷಣಾ ತಂಡದ ನೆರವು ಲಭಿಸಿತು. ಇಲ್ಲವಾದರೆ ನಾವು ಅಲ್ಲಿಂದ ಹೊರಬರಲು ಸಾಧ್ಯವೇ ಆಗುತ್ತಿರಲಿಲ್ಲ’ ಎಂದು ಮಡಿಕೇರಿಯಲ್ಲಿ ಆರೋಗ್ಯ ಇಲಾಖೆಯ ಉದ್ಯೋಗಿಯಾಗಿರುವ ದಿಲ್‌ಶಾದ್‌ ಭೂಕುಸಿತದ ನಡುವೆ ಸಿಲುಕೊಂಡು ಸಂಕಷ್ಟ ಅನುಭವಿಸಿದ್ದನ್ನು ಬಿಡಿಸಿಟ್ಟರು.

‘ನಾವು ಮಣ್ಣಂಗೇರಿಯ ಮನೆಯನ್ನು ಶುಕ್ರವಾರ ಮಧ್ಯಾಹ್ನವೇ ಬಿಟ್ಟು ಬಂದಿದ್ದೇವೆ. ಅಲ್ಲಿ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ಯಾರಿಗೂ ಮಾಹಿತಿಯೇ ಇಲ್ಲ’ ಎಂದು ಸಂಪಾಜೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಗಂಜಿ ಕೇಂದ್ರದಲ್ಲಿ ಆಸರೆ ಪಡೆದಿರುವ ದಿನೇಶ್ ಹೇಳಿದರು.

ಮಣ್ಣಂಗೇರಿಯಿಂದ ರಕ್ಷಿಸಿ ಕರೆತರುತ್ತಿದ್ದವರ ಗುಂಪಿನಲ್ಲಿದ್ದ ಲೀನಾ ಡಿಸೋಜ, ‘ನಾಲ್ಕು ದಿನಗಳಿಂದ ನಮಗೆ ಏನು ಆಗುತ್ತಿದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಶನಿವಾರ ಬೆಳಿಗ್ಗೆ ಎನ್‌ಡಿಆರ್‌ಎಫ್‌ ತಂಡ ಬಂದು ನಮ್ಮನ್ನು ಹೊರಗೆ ಕರೆತಂದಿತು. ಆದರೆ, ನಾಯಿ, ಕೋಳಿ, ಜಾನುವಾರು ಅಲ್ಲೇ ಉಳಿದವು. ಅವುಗಳ ಗತಿ ಏನೋ’ ಎಂದು ನೋವಿನಿಂದ ಪ್ರತಿಕ್ರಿಯಿಸಿದರು.

ವಿರಾಜಪೇಟೆಯ ಚೆಂಬೆಳ್ಳೂರಿನ ಸುಬ್ರಮಣಿ ಚಿಕಿತ್ಸೆಗೆಂದು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಮುಗಿಸಿ ವಾಪಸು ಹೋಗಲು ಸಂಪಾಜೆವರೆಗೂ ಬಂದಿದ್ದರು. ಅವರಿಗೂ ಗಂಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

ಕೆವಿಜಿ ವೈದ್ಯರ ತಂಡ:  ಸುಳ್ಯದ ಕುರುಂಜಿ ವೆಂಕಟರಮಣಗೌಡ (ಕೆವಿಜಿ) ವೈದ್ಯಕೀಯ ಕಾಲೇಜಿನ 14 ವೈದ್ಯರ ತಂಡ ಸಂಪಾಜೆ ಹಿರಿಯ ಪ್ರಾಥಮಿಕ ಶಾಲೆ, ಕಲ್ಲುಗುಂಡಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ತೆಕ್ಕಿಲ್‌ ಸಮುದಾಯ ಭವನದ ಗಂಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಚಿಕಿತ್ಸೆ ನೀಡುತ್ತಿದೆ.

‘ಮಧುಮೇಹ, ರಕ್ತದೊತ್ತಡ, ಪಾದದಲ್ಲಿ ಸೋಂಕು ಇರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಲವರು ಔಷಧಿ ಮರೆತು ಬಂದಿದ್ದಾರೆ. ಅವರಿಗೆ ಚಿಕಿತ್ಸೆ ನೀಡಿ, ಔಷಧಿಯನ್ನೂ ಪೂರೈಸಲಾಗುತ್ತಿದೆ’ ಎಂದು ಕೆವಿಜಿ ವೈದ್ಯಕೀಯ ಕಾಲೇಜಿನ ಜನರಲ್‌ ಮೆಡಿಸಿನ್ ವಿಭಾಗದ ಡಾ.ಪ್ರಜ್ವಲ್ ಹೇಳಿದರು.

ಯಾವುದಕ್ಕೂ ಕೊರತೆ ಇಲ್ಲ: ‘ಸಂತ್ರಸ್ತರಿಗೆ ಬೇಕಾದ ಆಹಾರ ಒದಗಿಸಲು ಎಲ್ಲವನ್ನೂ ದಾನಿಗಳು ನೀಡುತ್ತಿದ್ದಾರೆ. ಸಣ್ಣ ಮಕ್ಕಳಿಗೆ ಬಿಸಿನೀರು ಒದಗಿಸಲಾಗುತ್ತಿದೆ. ಚಪ್ಪಲಿ ಕೂಡ ವಿತರಿಸಲಾಗಿದೆ. ಯಾವ ಕೊರತೆಯೂ ಇಲ್ಲ. ಆಹಾರ ತಯಾರಿ ಗಂಜಿ ಕೇಂದ್ರದಲ್ಲೇ ನಡೆಯುತ್ತಿದೆ’ ಸಂಪಾಜೆ ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ನೋಂದಣಿ ಮಾಡಿಕೊಳ್ಳುತ್ತಿದ್ದ ಸಂಪಾಜೆ ಗ್ರಾಮಲೆಕ್ಕಿಗ ರಮೇಶ್ ಮತ್ತು ಸುಳ್ಯ ಗ್ರಾಮಲೆಕ್ಕಿಗ ಶಿವರಾಜ್‌ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !