ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ನೋಂದಣಿಯಾಗದ ಹೋಮ್ ಸ್ಟೇಗಳ ಬಂದ್‌ಗೆ ಹೆಚ್ಚಿದ ಒತ್ತಡ

Last Updated 28 ಅಕ್ಟೋಬರ್ 2021, 14:26 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಹೋಮ್ ಸ್ಟೇಯೊಂದರದಲ್ಲಿ ಮುಂಬೈ ಮೂಲದ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆಯ ಬಳಿಕ ಅನಧಿಕೃತ ಹೋಮ್ ಸ್ಟೇಗಳ ಮೇಲೆ ಜಿಲ್ಲೆಯ ಹಲವು ಸಂಘಟನೆಗಳು ಕೆಂಗಣ್ಣು ಬೀರುತ್ತಿವೆ.

‘ಅನಧಿಕೃತ ಹೋಮ್‌ ಸ್ಟೇಗಳಿಗೆ ಬೀಗ ಹಾಕಬೇಕು’ ಎಂಬ ಕೂಗು ಜೋರಾಗಿದೆ. ಹಾಗಿದ್ದರೆ, ಹೋಮ್ ಸ್ಟೇಗಳು ಪ್ರವಾಸಿಗರ ವಾಸ್ತವ್ಯಕ್ಕೆ ಸುರಕ್ಷಿತ ಅಲ್ಲವೇ? ಅಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿಲ್ಲವೇ? ಬರೀ ಹಣ ಸಂಪಾದನೆಯೆ ಮುಖ್ಯವೇ? ಅವುಗಳ ಪರಿಕಲ್ಪನೆ ಬದಲಾಯಿತೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

ತನ್ನ ಸ್ನೇಹಿತರೊಂದಿಗೆ ಕೊಡಗು ಪ್ರವಾಸಕ್ಕೆ ಬಂದಿದ್ದ ಯುವತಿಯು ಡೇರಿ ಫಾರಂ ಬಳಿಯ ಹೋಮ್‌ ಸ್ಟೇಯೊಂದರಲ್ಲಿ ವಾಸ್ತವ್ಯ ಮಾಡಿದ್ದರು. ಆಕೆ ಸ್ನಾನದ ಕೊಠಡಿಯಲ್ಲಿ ಮೃತಪಟ್ಟಿದ್ದರು. ಗೀಸರ್‌ನಿಂದ ಅನಿಲ ಸೋರಿಕೆಯಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆಕೆಯ ಪೋಷಕರು ದೂರು ನೀಡಿದ್ದು, ಪ್ರಕರಣವು ತನಿಖೆಯ ಹಂತದಲ್ಲಿದೆ.

ಜಿಲ್ಲೆಯ ಹೋಮ್‌ ಸ್ಟೇಗಳು ಇಡೀ ದೇಶದಲ್ಲಿಯೇ ಮಾದರಿ, ಸುರಕ್ಷಿತ ಹಾಗೂ ಉಪಚಾರಕ್ಕೆ ಹೆಸರು ವಾಸಿ ಎಂಬ ಕಾಲವಿತ್ತು. ಆದರೆ, ಇದೀಗ ಹೋಮ್ ಸ್ಟೇಗಳು ಜಿಲ್ಲೆಗೆ ಕಪ್ಪುಚುಕ್ಕೆಯಾಗಿವೆ ಎಂಬ ನೋವು ಜಿಲ್ಲೆಯ ಜನರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಅಂದಾಜು ನಾಲ್ಕು ಸಾವಿರದಷ್ಟು ಹೋಮ್ ಸ್ಟೇಗಳಿವೆ. ಆದರೆ, ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಆಗಿರುವುದು 850 ಹೋಮ್ ಸ್ಟೇಗಳು ಮಾತ್ರ! ಉಳಿದವು ಅನಧಿಕೃತವಾಗಿಯೇ ನಡೆಯುತ್ತಿವೆ. ಜಿಲ್ಲಾ ಹೋಮ್‌ ಸ್ಟೇ ಅಸೋಸಿಯೇಷನ್, ಅನಧಿಕೃತ ಹೋಮ್ ಸ್ಟೇಗಳನ್ನು ಬಂದ್ ಮಾಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅದಕ್ಕೆ ಜಿಲ್ಲಾಡಳಿತವೂ ಮಣಿದಿಲ್ಲ ಎಂಬ ಆರೋಪವಿದೆ.

ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಎರಡು ಬಾರಿ ಜಿಲ್ಲೆಯಲ್ಲೂ ಲಾಕ್‌ಡೌನ್ ಜಾರಿಗೆ ಬಂದಿತ್ತು. ಆಗ ಯಾವುದೇ ಹೋಮ್ ಸ್ಟೇಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ಅವಕಾಶ ನೀಡದಂತೆ ಜಿಲ್ಲಾಡಳಿತವೇ ಆದೇಶಿಸಿತ್ತು. ಆದರೆ, ನೋಂದಣಿಯಾಗದ ಹೋಮ್ ಸ್ಟೇ ಮಾಲೀಕರು ಪ್ರವಾಸಿಗರ ವಾಸ್ತವ್ಯಕ್ಕೆ ಅವಕಾಶ ನೀಡಿದ್ದರು. ಅವುಗಳ ಮೇಲೆ ಪೊಲೀಸರು ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಬಂದ್ ಮಾಡಿಸಿದ್ದರು. ಮತ್ತೀಗ ಅವು ಕಾರ್ಯಚರಿಸುತ್ತಿವೆ.

ಬಹಳ ವರ್ಷಗಳ ಹಿಂದೆ ಅತಿಥಿಗಳ ಸತ್ಕಾರದ ಹೆಸರಿನಲ್ಲಿ ಜಿಲ್ಲೆಯಲ್ಲೂ ಹೋಮ್ ಸ್ಟೇಗಳು ತಲೆಯೆತ್ತಿದ್ದವು. ಈಗ ಅವುಗಳ ಸಂಖ್ಯೆ ಮಿತಿಮೀರಿದೆ. ಸ್ವಂತ ಮನೆಯಲ್ಲಿ ಪ್ರತ್ಯೇಕವಾದ ರೂಂಗಳನ್ನೇ ಹೋಮ್ ಸ್ಟೇಯಾಗಿ ಬದಲಾಯಿಸಿ, ಅತಿಥಿಗಳನ್ನು ಸತ್ಕರಿಸುವ ಸಂಪ್ರದಾಯವಿತ್ತು. ಜಿಲ್ಲೆಯ ಆಚಾರ– ವಿಚಾರ, ಉಡುಗೆ–ತೊಡುಗೆಗಳನ್ನು ಹೊರ ರಾಜ್ಯ ಹಾಗೂ ಜಿಲ್ಲೆಯ ಪ್ರವಾಸಿಗರಿಗೆ ಪರಿಚಯಿಸಲಾಗುತ್ತಿತ್ತು. ಈಗ ಎಲ್ಲವೂ ಬದಲು –ಬದಲು. ಈಗ ಹೋಮ್ ಸ್ಟೇ ವಾಸ್ತವ್ಯ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯೂ ಮುಂದಿದೆ. ಬಂದವರಿಗೆ ಸುರಕ್ಷಿತ ವಾತಾವರಣ ಇರಬೇಕು, ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂಬೆಲ್ಲಾ ನಿಮಯಗಳಿವೆ. ಬಾಡಿಗೆಗೆ ಮನೆ ಪಡೆದು ನಡೆಸುವ ಹೋಮ್ ಸ್ಟೇಗಳಲ್ಲಿ ಇದ್ಯಾವುದೂ ಇಲ್ಲ! ಮಾಲೀಕರು ವಿದೇಶದಲ್ಲಿ ನೆಲೆಸಿದ್ದರೆ, ಬೇರೆ ಯಾರೋ ಹೋಮ್‌ ಸ್ಟೇ ನಡೆಸುತ್ತಿದ್ದಾರೆ.

‘ಅನಧಿಕೃತ ಹೋಂಸ್ಟೇಗಳು ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿವೆ. ಮುಂದೊಂದು ದಿನ ಪರಿಸ್ಥಿತಿ ಕೈಮೀರಿದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ’ ಎಂದು ಕೊಡಗು ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಪವನ್ ಪೆಮ್ಮಯ್ಯ ಎಚ್ಚರಿಸಿದ್ದಾರೆ.

‘ಅನಧಿಕೃತ ಹೋಂಸ್ಟೇಗಳು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಂಪಾದನೆಯಲ್ಲಿ ತೊಡಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಪ್ರಭಾವಿಗಳ ಲಾಬಿಗೆ ಮಣಿದು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಆನ್‌ಲೈನ್ ಮೂಲಕ ಪ್ರವಾಸಿಗರನ್ನು ಆಹ್ವಾನಿಸಲು ಮತ್ತು ಬುಕಿಂಗ್ ಮಾಡಲು ಅಧಿಕೃತ ಹೋಂಸ್ಟೇಗಳಿಗೆ ಮಾತ್ರ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT