ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಲತ್ತಿಗಾಗಿ ಕಾದಿರುವ ಜೇನು ಕುರುಬರು

ಲಾಕ್‌ಡೌನ್‌: ಕೂಲಿ ಇಲ್ಲ: ಹಸಿದ ಹೊಟ್ಟೆಗೆ ತಿನ್ನಲೂ ಇಲ್ಲ...
Last Updated 5 ಏಪ್ರಿಲ್ 2020, 13:20 IST
ಅಕ್ಷರ ಗಾತ್ರ

ಸೋಮವಾರಪೇಟೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಹೊರಗೆ ಕೆಲಸಕ್ಕೆ ಹೋಗಲು ಅವಕಾಶ ಇಲ್ಲದಂತಾಗಿದ್ದು, ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬ್ಬೆಟ್ಟ ಗಿರಿಜನರ ಹಾಡಿಯ 15 ಕುಟುಂಬಗಳು ಒಪ್ಪತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕು ಕೇಂದ್ರಕ್ಕೆ ಹೊಂದಿಕೊಂಡಂತಿರುವ ಈ ಹಾಡಿಯಲ್ಲಿ 15 ಕುಟುಂಬಗಳಲ್ಲಿ ಮಕ್ಕಳೂ ಸೇರಿದಂತೆ 60ಕ್ಕೂ ಹೆಚ್ಚು ಜನರಿದ್ದಾರೆ. ಆದರೆ, ಮೂಲ ಸವಲತ್ತುಗಳಿಂದ ವಂಚಿತರಾಗಿರುವ ಇಲ್ಲಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವೃದ್ಧರು ಕಾಯಿಲೆಗೆ ತುತ್ತಾಗಿದ್ದಾರೆ. ಪೊಲೀಸರ ಭಯದಿಂದ ಹಾಡಿಯ ಜನರು ಹೊರಬರುತ್ತಿಲ್ಲ. ಅವಿದ್ಯಾವಂತರಾದ ಇವರು ತಮ್ಮ ಕಷ್ಟವನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇದೆ. ಪಡಿತರ ಸರಬರಾಜು ಮಾಡಬೇಕಾದ ಐಟಿಡಿಪಿ ಅಧಿಕಾರಿಗಳು ಇದೂವರೆಗೆ ಹಾಡಿಗೆ ಭೇಟಿ ನೀಡಿಲ್ಲ ಎಂದು ನಿವಾಸಿಗಳು ತಮ್ಮ ಸಂಕಟವನ್ನು ಹೇಳಿಕೊಂಡರು.

ಇಲ್ಲಿ ಮುತ್ತ ಮತ್ತು ಜಯ ಎಂಬುವವರು ಮಾತ್ರ ಹಸಿರು ಪಡಿತರ ಚೀಟಿ ಹೊಂದಿದ್ದು, ಇವರಿಗೆ ಮಾತ್ರ ಪಡಿತರ ಸಿಗುತ್ತಿದೆ. ಉಳಿದಂತೆ ಮತ್ತಾರಿಗೂ ಪಡಿತರ ಪಡೆಯುತ್ತಿಲ್ಲ. ವರ್ಷಕ್ಕೊಮ್ಮೆ ಸಂಘ ಸಂಸ್ಥೆಗಳು ಇಲ್ಲಿ ಕಾರ್ಯಕ್ರಮ ನಡೆಸಿ ಸವಲತ್ತುಗಳನ್ನು ಮಾಡಿಸಿಕೊಡುವ ಭರವಸೆಗಳನ್ನು ನೀಡಿ ಹಿಂದಿರುಗಿದ ನಂತರ ಮತ್ತೊಮ್ಮೆ ಇಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

‘ಚೌಡ್ಲು ಗ್ರಾಮ ಪಂಚಾಯಿತಿಯ ಆಡಳಿತ ಹಾಗೂ ಕಂದಾಯ ಇಲಾಖೆ ಇವರಿಗೆ ಕಾರ್ಡ್ ಒದಗಿಸಿಕೊಡುವ ಮಾನವೀಯತೆ ತೋರಿಸುತ್ತಿಲ್ಲ’ ಎಂದು ಮುತ್ತ ದೂರಿದರು.

ಐಟಿಡಿಪಿ ಇಲಾಖೆಯಿಂದ ಅಂಗನವಾಡಿ ಮೂಲಕ ಹಾಡಿ ನಿವಾಸಿಗಳಿಗೆ ಅಕ್ಕಿಯನ್ನು ವಿತರಿಸುತ್ತಾರೆ. ಕಳೆದ ಫೆಬ್ರುವರಿ 3 ರಂದು ಅಂಗನವಾಡಿಯಿಂದ ಪಡಿತರ ಹಂಚಿದ್ದಾರೆ. ನಂತರ ಯಾವುದೇ ಪಡಿತರ ಇಲ್ಲಿನ ನಿವಾಸಿಗಳಿಗೆ ಸಿಕ್ಕಿಲ್ಲ. ಈಗ ಕೂಲಿ ಕೆಲಸವೂ ಇಲ್ಲದೆ ಹಸಿದ ಹೊಟ್ಟೆಯಲ್ಲಿ ಮಲಗುವಂತಹ ಪರಿಸ್ಥಿತಿ ಬಂದಿದೆ.

ಸ್ಥಳೀಯ ನಿವಾಸಿ ಜೇನುಕುರುಬರ ಈರಪ್ಪ ಮಾತನಾಡಿ, ‘ನಾವು ಪ್ರಾಣಿಗಳಿಗಿಂತಲೂ ಕಡೆಯಾಗಿ ಜೀವನ ನಡೆಸುತ್ತಿದ್ದೇವೆ. ನನಗೆ 80 ವರ್ಷ. ಕಳೆದ 5 ತಿಂಗಳಿನಿಂದ ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಕೇಳಿದರೆ, ತಾಲ್ಲೂಕು ಕಚೇರಿಗೆ ಹೋಗಿ ಕೇಳಿ ಎನ್ನುತ್ತಾರೆ. ಆರೋಗ್ಯ ಸರಿಯಿಲ್ಲದ ಕಾರಣ ನಡೆದಾಡಲು ಸಾಧ್ಯವಾಗುತ್ತಿಲ್ಲ. ಯಾರನ್ನು ಕೇಳುವುದು ಅಂತಲೂ ಗೊತ್ತಿಲ್ಲ’ ಎಂದು ಸಂಕಟ ತೋಡಿಕೊಂಡರು.

ಗಿರಿಜನರ ಹಾಡಿಗೆ 45 ದಿನಕ್ಕೊಮ್ಮೆ ಪಡಿತರ ಹಾಗೂ ಪೌಷ್ಟಿಕ ಆಹಾರವನ್ನು ಅಂಗನವಾಡಿಗಳ ಮೂಲಕ ವಿತರಿಸುತ್ತೇವೆ. ಮುಂದಿನ ನಾಲ್ಕೈದು ದಿನಗಳ ಒಳಗೆ ಪಡಿತರ ವಿತರಿಸುತ್ತೇವೆ. ಪಡಿತರ ಚೀಟಿ ಹೊಂದಿಲ್ಲದ ಕುಟುಂಬಗಳಿಗೆ ‘ಹಸಿದ ಹೊಟ್ಟೆಗೆ- ತಣಿವು ಪೆಟ್ಟಿಗೆ’ ಯೋಜನೆಯಲ್ಲಿ ಪಡಿತರ ಕಿಟ್ ಒದಗಿಸಲು ಅವಕಾಶವಿದೆ. ಚೌಡ್ಲು ಗ್ರಾ.ಪಂ ಪಿಡಿಒ ಅವರೊಂದಿಗೆ ಮಾತನಾಡಿ ಕ್ರಮವಹಿಸುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಖರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT