ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಬಲೆಗೆ ಐವರ ಗ್ಯಾಂಗ್

ಹಿರಿಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಆರೋಪಿಗಳು
Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಮಹಿಳೆಯರಿರುವ ಐದು ಮಂದಿಯ ಗ್ಯಾಂಗ್ ಗಿರಿನಗರ ಪೊಲೀಸರ ಬಲೆಗೆ ಬಿದ್ದಿದೆ.

ಮಂಡ್ಯದ ಗಿರಿಜಮ್ಮ (38), ಮಂಜುಳಾ (23), ಮಂಜುನಾಥ (27), ಸಂತೋಷ್ ಅಲಿಯಾಸ್ ಜೀವ (24) ಹಾಗೂ ರಮೇಶ್ ಅಲಿಯಾಸ್ ಹೊನ್ನ (22) ಎಂಬುವರನ್ನು ಬಂಧಿಸಿ, ₹ 10.47 ಲಕ್ಷ ಮೌಲ್ಯದ 350 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಧನೇಂದ್ರ ಹಾಗೂ ರೇಖಾ ಎಂಬುವರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ

ಮೂರು ಶೈಲಿಗಳು: ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡಿದ್ದ ಆರೋಪಿಗಳು, ಅವರ ಗಮನ ಬೇರೆಡೆ ಸೆಳೆಯಲು ಮೂರು ತಂತ್ರಗಳನ್ನು ಬಳಸುತ್ತಿದ್ದರು. ಬೆಳಿಗ್ಗೆ ಬಸ್‌ಗಳಲ್ಲಿ ನಗರಕ್ಕೆ ಬರುತ್ತಿದ್ದ ಇವರು, ಎರಡು ತಂಡಗಳಾಗಿ ಕಾರ್ಯಾಚರಣೆ ನಡೆಸಿ ಸಂಜೆಯೇ ಮಂಡ್ಯಕ್ಕೆ ವಾಪಸ್ ಹೋಗುತ್ತಿದ್ದರು.

ನಿರ್ಜನ ರಸ್ತೆಯಲ್ಲಿ ಹಿರಿಯ ನಾಗರಿಕರು ಒಂಟಿಯಾಗಿ ಹೋಗುತ್ತಿದ್ದರೆ, ರಸ್ತೆ ಮಧ್ಯೆ ಪರ್ಸ್ ಎಸೆಯುತ್ತಿದ್ದರು. ಅವರು ಹತ್ತಿರ ಬರುತ್ತಿದ್ದಂತೆಯೇ ಅದನ್ನು ಎತ್ತಿಕೊಂಡು, ‘ಪರ್ಸ್ ಸಿಕ್ಕಿರುವ ವಿಷಯವನ್ನು ಯಾರಿಗೂ ಹೇಳಬೇಡಿ. ಇದರಲ್ಲಿರುವ ಹಣವನ್ನು ಹಂಚಿಕೊಳ್ಳೋಣ ಬನ್ನಿ’ ಎಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿ ಅವರನ್ನು ಮಾತಿಗೆ ಎಳೆದು, ಗಮನ ಬೇರೆಡೆ ಹೋಗುವಂತೆ ಮಾಡುತ್ತಿದ್ದರು. ಈ ಹಂತದಲ್ಲಿ ಒಬ್ಬಾತ ಅವರಿಗೆ ಗೊತ್ತಾಗದಂತೆ ಚಿನ್ನದ ಸರ ಬಿಚ್ಚಿಕೊಳ್ಳುತ್ತಿದ್ದ.

ಅದೇ ರೀತಿ ಹಬ್ಬದ ಸಂದರ್ಭದಲ್ಲಿ ಈ ಗ್ಯಾಂಗ್ ದೇವಸ್ಥಾನಗಳಿಗೆ ತೆರಳುತ್ತಿತ್ತು. ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ತಾವೂ ನಿಲ್ಲುತ್ತಿದ್ದರು. ತಾವೇ ತಳ್ಳಾಟ ಸೃಷ್ಟಿಸಿ ಹಿರಿಯ ಮಹಿಳೆಯರ ಚಿನ್ನದ ಸರ ಬಿಚ್ಚಿಕೊಂಡು ಹೊರಗೆ ಬರುತ್ತಿದ್ದರು.

ಡ್ರಾಪ್ ನೀಡುವವರ ಸೋಗಿನಲ್ಲೂ ಇವರು ವಂಚಿಸುತ್ತಾರೆ. ಆರೋಪಿಗಳ ಪೈಕಿ ಒಬ್ಬಾತ ಆಟೊ ಓಡಿಸಿಕೊಂಡು ಬಂದರೆ, ಮಂಜುಳಾ ಅದರಲ್ಲಿ ಪ್ರಯಾಣಿಕಳಂತೆ ಕೂರುತ್ತಾಳೆ.

ಒಂಟಿ ಮಹಿಳೆ ಬಸ್‌ಗಾಗಿ ಕಾಯುತ್ತ ನಿಂತಿದ್ದರೆ ಅವರ ಹತ್ತಿರ ಹೋಗಿ, ‘ನೀವು ಎಲ್ಲಿಗೆ ಹೋಗಬೇಕು’ ಎಂದು ಮಂಜುಳಾ ಕೇಳುತ್ತಾಳೆ. ಅವರು ಯಾವ ಪ್ರದೇಶವನ್ನೇ ಹೇಳಿದರೂ, ‘ನಾನೂ ಅಲ್ಲಿಗೆ ಹೋಗುತ್ತೇನೆ. ನೀವು ಇದೇ ಆಟೊದಲ್ಲೇ ಬನ್ನಿ. ಒಟ್ಟಿಗೆ ಹೋದರೆ ಬಾಡಿಗೆ ಕಮ್ಮಿ ಆಗುತ್ತದೆ’ ಎಂದು ನಂಬಿಸುತ್ತಾಳೆ. ಅವರು ಹತ್ತಿ ಆಟೊ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ, ಇನ್ನೊಬ್ಬ ಆರೋಪಿ ಗಿರಿಜಮ್ಮ ಸಹ ಅದೇ ಆಟೊ ಹತ್ತುತ್ತಾಳೆ. ಹೀಗೆ, ಮಹಿಳೆಯನ್ನು ಮಧ್ಯದಲ್ಲಿ ಕೂರಿಸಿಕೊಂಡು ಗೊತ್ತಾಗದಂತೆ ಚಿನ್ನದ ಸರ ದೋಚುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮೂರು ತಿಂಗಳಲ್ಲಿ ಐದು ಕಡೆ ಕೃತ್ಯ

ಆರೋಪಿಗಳು ಇತ್ತೀಚೆಗೆ ಜೆ.ಪಿ.ನಗರ (140 ಗ್ರಾಂನ ಸರ), ವಿ.ವಿ.ಪುರ (134 ಗ್ರಾಂ), ಕೆ.ಜಿ.ನಗರ (252 ಗ್ರಾಂ), ಗಿರಿನಗರ (208 ಗ್ರಾಂ) ಹಾಗೂ ಶಂಕರಪುರ (115 ಗ್ರಾಂ) ಠಾಣೆಗಳ ವ್ಯಾಪ್ತಿಯಲ್ಲಿ ಒಡವೆ ದೋಚಿದ್ದರು. ಅವರ ಪತ್ತೆಗೆ ದಕ್ಷಿಣ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ, ವಿಶೇಷ ತಂಡ ರಚಿಸಿದ್ದರು.

‘ಈ ಗ್ಯಾಂಗ್ ಸದಸ್ಯರು ಮೂರು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದರು. ಆ ಸಮಯದಲ್ಲೇ ಕೃತ್ಯಗಳು ಪ್ರಾರಂಭವಾಗಿದ್ದರಿಂದ ಅವರೇ ಆರೋಪಿಗಳು ಎಂಬುದು ಖಚಿತವಾಯಿತು. ಒಬ್ಬೊಬ್ಬರನ್ನೇ ವಶಕ್ಕೆ ಪಡೆದು ವಿಚಾರಣೆ ನೆಡಸಿದಾಗ ಪ್ರಕರಣ ಬಯಲಾಯಿತು’ ಎಂದು ತನಿಖಾಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT