ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಯೋಗಾಭ್ಯಾಸದ ಮನಸ್ಸಿದೆ, ಸಭಾಂಗಣ ಇಲ್ಲ!

ಜಿಲ್ಲೆಯಲ್ಲಿವೆ ಬೆರಳೆಣಿಕೆಯಷ್ಟು ಯೋಗ ಕೇಂದ್ರಗಳು; ಇರುವುದೊಂದೇ ಜಾಗ; ಭವನ ನಿರ್ಮಾಣಕ್ಕೆ ಮನವಿ
Last Updated 20 ಜೂನ್ 2022, 3:53 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಯೋಗದ ಕುರಿತ ಆಸಕ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದರೂ ಯೋಗಾ ಭ್ಯಾಸಕ್ಕೆ ಸೂಕ್ತ ಸ್ಥಳಾವಕಾಶ ಇಲ್ಲದೇ ಪರದಾಡುವಂತಹ ಸ್ಥಿತಿ ಇದೆ. ಎಲ್ಲ ತಾಲ್ಲೂಕುಗಳಲ್ಲಿಯೂ ಸುಸಜ್ಜಿತವಾದ ಯೋಗ ಸಭಾಂಗಣ ಬೇಕು ಎಂಬ ಒತ್ತಾಯ ಯೋಗಾಭ್ಯಾಸಿಗಳಿಂದ ಕೇಳಿ ಬಂದಿದೆ.

ಮಡಿಕೇರಿ ನಗರದಲ್ಲಿ ಯುವಜನ ಮತ್ತ ಕ್ರೀಡಾ ಸಬಲೀಕರಣ ಇಲಾಖೆಯಿಂದ ನಿರ್ಮಾಣವಾಗಿರುವ ಜಿಲ್ಲಾ ಯೋಗ ಸಭಾಂಗಣ ಬಿಟ್ಟರೆ ಜಿಲ್ಲೆಯ ಉಳಿದ ಕಡೆ ಸುಸಜ್ಜಿತವಾದ ಸಭಾಂಗಣ ಇಲ್ಲ. ಎಲ್ಲೆಡೆ ಯೋಗಾಭ್ಯಾಸಿಗಳಿಗೆ ಸ್ಥಳದ ಅಭಾವವೇ ಪ್ರಧಾನವಾಗಿ ಕಾಡುತ್ತಿದೆ.

ಭೌಗೋಳಿಕ ಹಾಗೂ ಪ್ರಾಕೃತಿಕವಾಗಿ ವಿಶಿಷ್ಟ ಸ್ಥಾನ ಪಡೆದಿರುವ ಜಿಲ್ಲೆಯಲ್ಲಿ ಬೆಳಿಗ್ಗೆ ಹೊತ್ತು ಗಡಗಡ ನಡುಗಿಸುವ ಚಳಿಯಲ್ಲಿ ಎದ್ದು, ಆವರಿಸಿದ ಮಂಜಿನ ನಡುವೆ ಯೋಗಾಭ್ಯಾಸ ಮಾಡುವುದೂ ದೊಡ್ಡ ಸವಾಲಿನ ಕೆಲಸವೇ ಆಗಿದೆ. ಇಂತಹ ಸವಾಲಿನ ಕೆಲಸವನ್ನು ಇತ್ತೀಚಿನ ದಿನಗಳಲ್ಲಿ ಹಲವು ಮಂದಿ ಮಾಡುತ್ತಿ ದ್ದಾರೆ. ಆದರೆ, ಅವರಿಗೆಲ್ಲ ಸುಸಜ್ಜಿತ ವಾದ ಸಭಾಂಗಣವೊಂದು ಬೇಕಿದೆ.

ಮಡಿಕೇರಿಯಲ್ಲಿ ಯೋಗಭಾರತೀ ವತಿಯಿಂದ ಶಿಕ್ಷಕ ಮಹೇಶ್ ಅವರು ಭಾರತೀಯ ವಿದ್ಯಾಭವನದಲ್ಲಿ ಬೆಳಿಗ್ಗೆ ಮತ್ತು ಸಂಜೆ ತರಗತಿಗಳನ್ನು ನಡೆಸುತ್ತಿ ದ್ದಾರೆ. ಪ್ರಣವ ಯೋಗ ಕೇಂದ್ರದ ಶಿಕ್ಷಕಿ ಶಿಲ್ಪಾ ರವೀಂದ್ರ ರೈ ನಿತ್ಯ ಬೆಳಿಗ್ಗೆ ಮ್ಯಾನ್ಸ್ ಕಾಂಪೌಂಡ್‌ನಲ್ಲಿ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯ ಜಿಲ್ಲಾ ಯೋಗ ಸಭಾಂಗಣದಲ್ಲಿ ತರಬೇತಿ ನೀಡುತ್ತಿದ್ದಾರೆ. ಅವರು ಇಲ್ಲಿನ ನ್ಯೂ ಎಕ್ಸ್‌ಟೆನ್ಷನ್‌ ಬಡಾವಣೆಯಲ್ಲಿನ ಬ್ಯಾಂಕ್ ಆಫ್ ಇಂಡಿಯಾ ಎದುರಿನ ತಮ್ಮದೇ ಕೇಂದ್ರದಲ್ಲಿ ಬೆಳಿಗ್ಗೆ, ಸಂಜೆ ತರಬೇತಿ ನೀಡುತ್ತಿದ್ದಾರೆ. ಸಂಜೆ ಮಹಿಳೆಯರಿಗೆ ವಿಶೇಷ ತರಬೇತಿ ಇರಲಿದೆ.

ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಓ.ಕೆ.ಲಿಂಗಪ್ಪ ಅವರು ಬಾಲಭವನದಲ್ಲಿ ಬೆಳಿಗ್ಗೆ ನಿತ್ಯ ಯೋಗ ಕಲಿಸುತ್ತಿದ್ದಾರೆ. ‘ಮಾರ್ನಿಂಗ್ ಸ್ಟಾರ್ಸ್’ ಎಂಬ ತಂಡವನ್ನು ಕಟ್ಟಿಕೊಂಡಿರುವ ಕೆಲವು ಸಮಾನ ಮನಸ್ಕರು ಇಲ್ಲಿನ ಮ್ಯಾನ್ಸ್ ಕಾಂಪೌಂಡ್‌ನಲ್ಲಿ ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದಾರೆ.

ಆಯುಷ್‌ ಇಲಾಖೆಯಿಂದ ಬಲ್ಲಮಾವಟಿ, ತೊರೆನೂರು ಹಾಗೂ ಶ್ರೀಮಂಗಲದಲ್ಲಿರುವ ಆಯುಷ್ ಕ್ಷೇಮ ಕೇಂದ್ರಗಳಲ್ಲಿಯೂ ನಿತ್ಯ ಬೆಳಿಗ್ಗೆ ಉಚಿತ ಯೋಗಾಭ್ಯಾಸಗಳು ನಡೆಯುತ್ತಿವೆ.

ಗೋಣಿಕೊಪ್ಪಲು ಪಟ್ಟಣದಲ್ಲಿ 20 ವರ್ಷಗಳ ಹಿಂದೆ ಯೋಗ ಪ್ರಕಾಶ್ ಅವರಿಂದ ಯೋಗ ಆರಂಭಿಸ ಲಾಯಿತು. ಇದೀಗ ಹಲವು ಕಡೆ ಯೋಗ ನಡೆಯುತ್ತಿದೆ. ಆದರೆ, ಯೋಗ ಮಾಡಲು ಪ್ರತ್ಯೇಕ ಸ್ಥಳ ಎಂಬುದಿಲ್ಲ. ಹೊಸ ಕಟ್ಟಡಗಳಲ್ಲಿ ಜಾಗ ವಿಶಾಲ ವಾಗಿದ್ದು ಜಾಗ ಖಾಲಿ ಇದ್ದರೆ ಒಂದಷ್ಟು ದಿನ ಯೋಗ ನಡೆಸುತ್ತಾರೆ.

ಬೈಪಾಸ್ ರಸ್ತೆಯ ಸೌಖ್ಯ ಕಟ್ಟಡದಲ್ಲಿ ಆರ್ಟ್ ಆಫ್ ಲಿವಿಂಗ್‌ನವರು ಆಗಾಗ್ಗೆ ಯೋಗ ನಡೆಸುತ್ತಿದ್ದಾರೆ. ಬಾಳೆಲೆಯ ಅಳಮೇಂಗಡ ರಾಜಪ್ಪ ಸುದರ್ಶನ ಕ್ರಿಯೆ ಯೋಗ ಹೇಳಿಕೊಡುತ್ತಿದ್ದಾರೆ.

ಕೈಕೇರಿ ಭಗವತಿ ದೇವಸ್ಥಾನದ ಆವರಣದಲ್ಲಿಯೂ ಬೆಳಿಗ್ಗೆ ಮತ್ತು ಸಂಜೆ ಗುರು ಎಂಬುವರು ಪತಂಜಲಿ ಯೋಗ ಹೇಳಿಕೊಡುತ್ತಿದ್ದಾರೆ. ವೆಂಕಟಪ್ಪ ಬಡಾವಣೆಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಉಚಿತವಾಗಿ ರಾಜಯೋಗ ಹೇಳಿ ಕೊಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಕಟ್ಟಡದಲ್ಲಿಯೂ ಯೋಗ ಕೇಂದ್ರವೊಂದು ಇದೆ.

ಸ್ಥಳಾವಕಾಶ ಕೊರತೆ: ‘ಸೋಮವಾರ ಪೇಟೆಯ ಜನರಲ್ಲಿ ಯೋಗಾಭ್ಯಾಸ ಮಾಡುವ ಉತ್ಸಾಹ ಇದ್ದರೂ, ಸ್ಥಳಾವಕಾಶದ ಕೊರತೆ ಯಿಂದ ತರಗತಿ ಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಆರ್ಟ್ ಆಫ್ ಲಿವಿಂಗ್‍ನ ಯೋಗ ಶಿಕ್ಷಕಿ ಎಂ.ಈ.ರಾಗಿಣಿ ಬೇಸರ ವ್ಯಕ್ತಪಡಿಸಿದರು.

‘ನಮ್ಮ ಸಂಸ್ಥೆಯಲ್ಲಿ ಯೋಗ ಶಿಬಿರಕ್ಕೆ ಅಜೀವ ಸದಸ್ಯತ್ವಕ್ಕೆ ₹500 ಶುಲ್ಕ ನೀಡಿ ನೋಂದಾಯಿಸಿಕೊಂಡ ನೂರಾರು ಜನರಿದ್ದಾರೆ. ಈಗ ವಿಶ್ವ ಯೋಗ ದಿನದ ಕಾರ್ಯಕ್ರಮದ ಪ್ರಯುಕ್ತ ಸುಮಾರು 30 ಮಂದಿ ಇಲ್ಲಿನ ಪಟ್ಟಣ ಪಂಚಾಯಿತಿಯ ಅಟಲ್ ಜೀ ಕನ್ನಡ ಭವನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಉಚಿತವಾಗಿ ಯೋಗ ತರಬೇತಿ ನೀಡಲು ನಮಗೆ ಒಂದು ಶಾಶ್ವತ ಸಭಾಂಗಣದ ಅವಶ್ಯಕತೆ ಇದೆ’ ಎಂದು ಹೇಳಿದರು.

‘ಎಲ್ಲರೂ ಯೋಗ ಕಲಿತು ಆರೋಗ್ಯ ದಿಂದ ಇರಬೇಕೆನ್ನುವ ಉದ್ದೇಶದಿಂದ ನಮ್ಮ ಸಂಸ್ಥೆಯ ಮೂಲಕ ತಾಲ್ಲೂಕಿನ 100 ಗ್ರಾಮಗಳಲ್ಲಿ ಯೋಗ ಶಿಬಿರ ಮಾಡುವ ಯೋಜನೆ ಇದೆ. ಈಗಾಗಲೇ ಕೆಲವು ಗ್ರಾಮಗಳಲ್ಲಿ ಶಿಬಿರಗಳನ್ನು ನಡೆಸಲು ತಯಾರಿ ನಡೆಸುತ್ತಿದ್ದೇವೆ. ಇದರಲ್ಲಿ ಸ್ಥಳೀಯರನ್ನು ಸೇರಿಸಿಕೊಂಡು ತರಬೇತಿ ನೀಡಲಾಗುತ್ತದೆ’ ಎಂದರು.

ವಿರಾಜಪೇಟೆ ಪಟ್ಟಣದ ಕಾವೇರಿ ಯೋಗ ಕೇಂದ್ರವು ಕಳೆದ 23 ವರ್ಷಗಳಿಂದ ನಿರಂತರವಾಗಿ ಯೋಗಾಸಕ್ತರಿಗೆ ತರಬೇತಿ ನೀಡುತ್ತಿದೆ. ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿನ ಕಾವೇರಿ ಆಶ್ರಮದಲ್ಲಿ ನಿತ್ಯ ಮುಂಜಾನೆ 5.45 ರಿಂದ 7.15ರವರೆಗೆ ಯೋಗ ತರಗತಿ ನಡೆಯುತ್ತಿದೆ. ಯೋಗ ಗುರುಗಳಾದ ಸೀತಾರಾಮ್ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕೇಂದ್ರದಲ್ಲಿ ನಿತ್ಯ 25ಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸ ಮಾಡುತ್ತಿದ್ದಾರೆ.

ತರಬೇತಿ ಕೇಂದ್ರದ ಕೊರತೆ

ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ವಾಣಿಜ್ಯ ನಗರಿ ಕುಶಾಲನಗರ ಪಟ್ಟಣದಲ್ಲಿ ಯೋಗ ಕೇಂದ್ರಗಳ ಕೊರತೆ ಇದೆ.

ನೂತನ ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದಲ್ಲಿ ಸುಮಾರು 20 ಸಾವಿರದಿಂದ 30 ಸಾವಿರ ಜನಸಂಖ್ಯೆ ಇದೆ. ಇಲ್ಲಿನ ಜನರಿಗೆ ಯೋಗ ತರಬೇತಿ ಆಸಕ್ತಿ ಕೂಡ ಇದೆ. ಆದರೆ, ಶಾಶ್ವತವಾದ ಯೋಗ ತರಬೇತಿ ಕೇಂದ್ರ ಇಲ್ಲದೆ ಇಲ್ಲಿನ ಜನರಿಗೆ ನಿರಾಸೆ ಉಂಟಾಗಿದೆ.

ಶಾಲಾ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿದ್ದ ಮಕ್ಕಳಿಗೆ ಶಾಲಾ ಅವಧಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಅದೇ ರೀತಿ ಯೋಗಪಟು ಮಧುಸೂದನ್ ಅವರು ಕೆಲವೇ ಮಂದಿಗೆ ಯೋಗ ತರಬೇತಿ ನೀಡುತ್ತಿದ್ದಾರೆ. ಜನಸಂಖ್ಯೆ ಅನುಗುಣವಾಗಿ ಕನಿಷ್ಠ 5 ಯೋಗ ಕೇಂದ್ರಗಳ ಅಗತ್ಯವಿದೆ.

ಯೋಗ ಶಿಕ್ಷಕರು ಏನಂತಾರೆ?

ದೇಹ, ಮನಸ್ಸಿನ ಆರೋಗ್ಯ

ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಹೆಚ್ಚುತ್ತದೆ. ತಮ್ಮ ಇತಿಮಿತಿ ಒಳಗೆ ಎಲ್ಲರೂ ನಿತ್ಯ ಯೋಗ ಮಾಡಬೇಕು.

–ಕೆ.ಕೆ.ಮಹೇಶ್‌ಕುಮಾರ್, ಭಾರತೀಯ ವಿದ್ಯಾಭವನದ ಯೋಗ ಶಿಕ್ಷಕ

ಪ್ರಯೋಜನ ಪಡೆಯಿರಿ

ಮಡಿಕೇರಿಯಲ್ಲಿ ನಿತ್ಯ ಹಲವು ಕಡೆ ಯೋಗ ಕಲಿಸಲಾಗುತ್ತಿದೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕು

–ಶಿಲ್ಪಾ ರವೀಂದ್ರ ರೈ, ಪ್ರಣವ ಯೋಗ ಕೇಂದ್ರದ ಯೋಗ ಶಿಕ್ಷಕಿ

ಕಟ್ಟಡ ಅಗತ್ಯ

ಶನಿವಾರಸಂತೆಯಲ್ಲಿ ಯೋಗ ಕೇಂದ್ರ ಇಲ್ಲ. ಸರ್ಕಾರದಿಂದ ಉತ್ತಮವಾದ ಕಟ್ಟಡ ದೊರೆತರೆ ಕಲಿಯುವವರ ಸಂಖ್ಯೆ ಹೆಚ್ಚಾಗುತ್ತದೆ

–ಎಂ.ಡಿ.ಮೋಹನ್‌ಕುಮಾರ್, ಶನಿವಾರಸಂತೆ

ಉಚಿತ ತರಬೇತಿ

ಆಯುಷ್ ಇಲಾಖೆಯಿಂದ ಸಾರ್ವಜನಿಕರಿಗೆ ಉಚಿತವಾಗಿ ಯೋಗವನ್ನು ಹೇಳಿಕೊಡಲಾಗುತ್ತಿದೆ. ಬಲ್ಲಮಾವಟಿ, ತೊರೆನೂರು, ಶ್ರೀಮಂಗಲದಲ್ಲಿ ಈ ಸೌಲಭ್ಯ ಇದೆ

–ಡಾ.ಸಿ.ರೇಣುಕಾದೇವಿ, ಜಿಲ್ಲಾ ಆಯುಷ್ ಅಧಿಕಾರಿ

ಕ್ರೀಡಾಂಗಣ ನಿರ್ಮಿಸಿ

ಸಿದ್ದಾಪುರ ಭಾಗದಲ್ಲಿ ಯೋಗ ಕೇಂದ್ರಗಳು ಹಾಗೂ ಸಾರ್ವಜನಿಕ ಕ್ರೀಡಾಂಗಣಗಳು ಇಲ್ಲ. ಕೂಡಲೇ ಯೋಗ ಕೇಂದ್ರ ಹಾಗೂ ಸಾರ್ವಜನಿಕ ಕ್ರೀಡಾಂಗಣ ಕಲ್ಪಿಸಿಕೊಡಬೇಕು

–ಎಸ್.ಜಿ.ಚೆಲುವಕುಮಾರ್, ಕ್ರೀಡಾಪಟು

ಸ್ಥಳಾವಕಾಶದ ಕೊರತೆ

ಜನರಲ್ಲಿ ಯೋಗಾಭ್ಯಾಸ ಮಾಡುವ ಉತ್ಸಾಹ ಇದ್ದರೂ, ಸಮರ್ಪಕ ಸ್ಥಳಾವಕಾಶದ ಕೊರತೆಯಿಂದ ತರಗತಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ

–ಎಂ.ಈ. ರಾಗಿಣಿ, ಆರ್ಟ್ ಆಫ್ ಲಿವಿಂಗ್‍ನ ಯೋಗ ಶಿಕ್ಷಕಿ

****

ನಿರ್ವಹಣೆ: ಕೆ.ಎಸ್.ಗಿರೀಶ, ಮಾಹಿತಿ: ಶ.ಗ.ನಯನತಾರಾ, ಸಿ.ಎಸ್.ಸುರೇಶ್, ಎಂ.ಎಸ್.ಸುನಿಲ್‌, ಡಿ.ಪಿ.ಲೋಕೇಶ್, ರಘು ಹೆಬ್ಬಾಲೆ, ಜೆ.ಸೋಮಣ್ಣ, ಎಂ.ಎನ್‌.ಹೇಮಂತ್‌, ರೆಜಿತ್‌ಕುಮಾರ್‌ ಗುಹ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT