ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ನಡುಕ ಹುಟ್ಟಿಸಿದ ಉಪಚುನಾವಣೆ ಫಲಿತಾಂಶ

Last Updated 31 ಮೇ 2018, 14:45 IST
ಅಕ್ಷರ ಗಾತ್ರ

2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಸಾಧಿಸುವ ಮೂಲಕ ಪುನಃ ದೇಶದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿ ದೇಶದ ಕೆಲವೆಡೆ ನಡೆದ ಉಪಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ತೋರಿದೆ. ಇದು ಶಾಪವೋ ವರವೋ ಎಂದು ನಿರ್ಣಯಿಸಬೇಕಾಗಿರುವುದು ಮಾತ್ರ ಬಿಜೆಪಿಗೆ ಬಿಟ್ಟಿದ್ದು.

ನಾಲ್ಕು ಲೋಕಸಭಾ ಕ್ಷೇತ್ರಗಳಾದ ಉತ್ತರಪ್ರದೇಶದ ಕೈರಾನಾ, ಮಹಾರಾಷ್ಟ್ರದ ಪಲ್ಗಾರ್–ಭಂಡಾರಗೊಂಡಿಯಾ, ನಾಗಾಲ್ಯಾಂಡ್ ಕ್ಷೇತ್ರಗಳ ಫಲಿತಾಂಶಗಳು ಬಿಜೆಪಿಗೆ ಸಣ್ಣ ನಡುಕ ಹುಟ್ಟಿಸಿದೆ .ಅಲ್ಲದೇ ಈಗಿನ ಬೆಳವಣಿಗೆಯನ್ನು ಗಮನಿಸಿದರೆ ಬಿಜೆಪಿ ತನ್ನ ಮೈತ್ರಿಕೂಟಗಳನ್ನು ಕಳೆದುಕೊಂಡರೂ ಲೋಕಸಭೆಯ 545 ಸದಸ್ಯರ ಪೈಕಿ 273 ಸದಸ್ಯರು ಬಿಜೆಪಿಯವರೇ ಆದ ಕಾರಣ 2019ರ ಲೋಕಸಭೆ ಚುನಾವಣೆಯಲ್ಲಿ ಚೇತರಿಸಿಕೊಳ್ಳುವ ಕುರುಹುಗಳೂ ಕಾಣಿಸುತ್ತಿವೆ. ಆದರೂ ಮುಂದಿನ ಲೋಕಸಭೆ ಚುನಾವಣೆ ಮಾತ್ರ ಬಿಜೆಪಿ ಪಾಲಿಗೆ ಬಹು ನಿರ್ಣಾಯಕವೆಂದೇ ಹೇಳಿದರೂ ಸರಳ ಬಹುಮತ ಕಳೆದುಕೊಂಡ ಕಾರಣ ಸ್ವಲ್ಪ ಕಷ್ಟಸಾಧ್ಯವೇ ಸರಿ. 

*ಉತ್ತರಪ್ರದೇಶದ ಅಧಿಕಾರ ಗಾಧಿಯಲ್ಲಿ ನಿರಾಸೆ
 ಇಲ್ಲಿ ಜಾಟ್ ಸಮುದಾಯದ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ತಬಸುಮ್ ಹಸನ್ ಹಾಗೂ ಬಿಜೆಪಿಯ ಮೃಗಾಂಕ ಸಿಂಗ್ ನಡುವೆ ಕೈರಾನಾದಲ್ಲಿ ಬಾರಿ ಹಣಾಹಣಿ ಏರ್ಪಟ್ಟಿತ್ತು. ಆದರೆ ಆರ್‌ಎಲ್‌ಡಿ ಪಕ್ಷದ ಜತೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ಕೈ ಜೋಡಿಸಿದ ಕಾರಣ ಬಿಜೆಪಿ ಮುಖಭಂಗ ಅನುಭವಿಸಿದೆ.

ಮೃಗಾಂಕ ಅವರು 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಆದರೂ ಇದಕ್ಕೆ ತಲೆಕೆಡಿಸಿಕೊಳ್ಳದ ಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಕಣಕ್ಕಿಳಿಸಿತ್ತು. ಮೃಗಾಂಕ ಅವರ ತಂದೆ ಸಂಸದ ಹುಕುಮ್ ಸಿಂಗ್ ಸಾವಿನ ಆಧಾರದ ಮೇಲೆ ಮತಗಳನ್ನು ಪಡೆಯಬಹುದೆಂಬ ಉದ್ದೇಶ ಬಿಜೆಪಿಯವರದ್ದಾಗಿತ್ತು. ಆದರೆ ಅವರ ಎಲ್ಲಾ ಉಪಾಯಗಳು ತಲೆಕೆಳಗಾಗಿದ್ದು, ಆರು ವರ್ಷಗಳ ನಂತರ ಮೊದಲ ಬಾರಿ ಅಧಿಕಾರ ಜಾಟ್‌ ಸಮುದಾಯದ ಪರವಾಗಿದೆ. ಈ ಮೂಲಕ ಅಭ್ಯರ್ಥಿ ತಬಸುಮ್ ಅವರು ಉತ್ತರಪ್ರದೇಶದ ಲೋಕಸಭಾ ಕ್ಷೇತ್ರಗಳಲ್ಲಿ ಅಧಿಕಾರ ಪಡೆದ ಮೊದಲ ಮುಸ್ಲಿಮ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

* ಪಲ್ಗಾರ ಮತ್ತು ಭಂಡಾರ ಗೊಂಡಿಯಾ
ಮಹಾರಾಷ್ಟ್ರದ ಪಲ್ಗಾರ ಮತ್ತು ಭಂಡಾರ ಗೊಂಡಿಯಾ ಈ ಎರಡು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಭಂಡಾರ–ಗೊಂಡಿಯಾ ಕ್ಷೇತ್ರದಲ್ಲಿ ಎನ್‌ಸಿಪಿ (Nationalist Congress Party) ಮಧುಕ್‌ರಾವ್‌ಕುಕಡೆ ವಿರುದ್ಧ ಬಿಜೆಪಿಯ ಹೇಮಂತ್ ಪಟ್ಲೆ ಸೋತು ಸುಣ್ಣವಾಗಿದ್ದಾರೆ.

ಇನ್ನು ಬಿಜೆಪಿಯ ಶಾಶ್ವತ ಪಾರುಪಥ್ಯದ ಕ್ಷೇತ್ರ ಎಂದೇ ಕರೆಯಲ್ಪಡುತ್ತಿದ್ದ ಪಲ್ಗಾರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಬಿಜೆಪಿಯ ರಾಜೇಂದ್ರ ಗವಿತ್ ವಿರುದ್ಧ ಶಿವಸೇನಾ ಆಭ್ಯರ್ಥಿ ಶ್ರೀನಿವಾಸ್ ವಾನಘ ಸೋತಿದ್ದಾರೆ.

* ನಾಗಲ್ಯಾಂಡ್
ಇಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಕ್ಷ (NDPP) ಮತ್ತು ಬಿಜೆಪಿಯ ಭಾಗವಾಗಿರುವ ಪೀಪಲ್ಟ್ ಡೆಮಾಕ್ರೆಟಿಕ್ ಅಲಯನ್ಸ್ (PDA) ಏರ್ಪಟ್ಟ ಸ್ಪರ್ಧೆಯಲ್ಲಿ ಪಿಡಿಎ ಅಭ್ಯರ್ಥಿ ಸಿ ಅಪೋಕ್ ಜಮೀರ್‌ರನ್ನು ಹಿಂದಿಕ್ಕಿದ ಎನ್‌ಡಿಪಿಪಿ ಅಭ್ಯರ್ಥಿ ಟೊಕೆಹೋ ಯೆಪ್ತೋಮಿ ಮುನ್ನಡೆ ಸಾಧಿಸಿದರು. ಇನ್ನು ವಿಧಾನಸಭಾ ಕ್ಷೇತ್ರವಾದ ಮೇಘಾಲಯದ ಅಂಪಟಿಯನ್ನು ಬಿಜೆಪಿಯ ಬೆನ್ನೆಲುಬಾಗಿದ್ದ ಎನ್‌ಪಿಪಿ ಪಕ್ಷ ತನ್ನ ಭದ್ರತೆಯನ್ನು ಕಳೆದು ಕೊಂಡಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಿಯಾನಿ ಡಿ ಶಿರಾ ಜಯಶೀಲರಾಗಿದ್ದಾರೆ.

* ಬಿಹಾರ ಮತ್ತು ಜಾರ್ಖಂಡ್
ಬಿಹಾರ ವಿಧಾನಸಭಾ ಕ್ಷೇತ್ರವಾದ ಜೋಕಿಹಾಟ್‌ನಲ್ಲಿ ಬಿಜೆಪಿ ಮೈತ್ರಿ ಜೆಡಿಯು ಅಭ್ಯರ್ಥಿ ಮುರ್ಷಿದ್ ಆಲಾಮ್, ಆರ್‌ಜೆಡಿ ಅಭ್ಯರ್ಥಿ ಶಹನಾವಾಜ್ ವಿರುದ್ದ ಸೋಲನ್ನನುಭವಿಸಿದ್ದಾರೆ. ಮುಸ್ಲಿಂ ಸಮುದಾಯದ ಪ್ರಭಾವಿತ ವಲಯ ಜೋಕಿಹಾಟ್‌ನಲ್ಲಿ ಜೆಡಿಯು ಸೋಲಲು ಮುರ್ಷಿದ್ ಆಲಾಮ್‌ಗೆ ಅಂಟಿಕೊಂಡ ಆರೋಪಗಳು ಎಂದೇ ಹೇಳಬಹುದು. ಏಕೆಂದರೆ ಇವರ ವಿರುದ್ಧ ಅತ್ಯಾಚಾರ ಹಾಗೂ ಕಳ್ಳತನ ಆರೋಪಗಳು ಕೇಳಿಬಂದಿದ್ದವು.

ಜಾರ್ಖಂಡಿನ ಗೋಮಿಯಾ ಮತ್ತು ಸಿಲ್ಲಿ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಮೈತ್ರಿಯುತ ಮುಕ್ತಿ ಮೋರ್ಚಾ ಪಕ್ಷದ ಪಾಲಾಗಿವೆ. ಗೋಮಿಯಾದ ಜೆಎಂಎಂ ಅಭ್ಯರ್ಥಿ ಬಬಿತಾ ದೇವಿ, ಎಜೆಎಸ್‌ಯು All Jharkhand Students Union (AJSU) ಅಭ್ಯರ್ಥಿ ಲಂಬೋಧರ್ ಮಹೋತಾ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.  ಇನ್ನು ಸಿಲ್ಲಿ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಜೆಎಂಎಂನ ಸೀಮಾ ದೇವಿ ಕೂಡ ಗೆಲುವಿನಲ್ಲಿ ಮಿಂದೇಳುವ ಮೂಲಕ ಎಜೆಎಸ್‌ಯು ಸುದೇಶ್ ಮಹಾತೋ ಅವರನ್ನು ಸೋಲಿಸಿದ್ದಾರೆ. 2014ರಲ್ಲೂ ಕೂಡ ಎಜೆಎಸ್‌ಯು ತನ್ನ ಸ್ಥಾನವನ್ನು ಕಳೆದುಕೊಂಡಿತ್ತು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಹೇಮಂತ್ ಸೊರೇನ್ ನೇತೃತ್ವದ ಕಾಂಗ್ರೆಸ್ ಮೈತ್ರಿಯ ಜೆಎಂಎಂ ಉತ್ತಮ ಆಡಳಿತ ಪ್ರದರ್ಶಿಸುವ ಸಾಧ್ಯತೆಗಳು ಗೋಚರಿಸುತ್ತಿದೆ.

* ಪಶ್ಚಿಮ ಬಂಗಾಳ, ಕೇರಳ, ಉತ್ತರಖಾಂಡ 
ಕೇರಳದ ಚೆಣಗನ್ನೂರಿನಲ್ಲಿ ಸಿಪಿಎಂ, ಪಶ್ಚಿಮ ಬಂಗಾಳ ಮಹೇಶ್ತಲ ವಿಧಾನಸಭೆಯಲ್ಲಿ ಟಿಎಂಸಿ ಗೆಲುವು ಸಾಧಿಸಿದ್ದು, ಉತ್ತರಾಖಂಡದ ತರಾಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ತನ್ನ ಸ್ಥಾನ ಕಾಯ್ದುಕೊಂಡಿದೆ. ಇಲ್ಲಿನ ಬಿಜೆಪಿಯ ಮುನ್ನಿ ದೇವಿ ಕಾಂಗ್ರೆಸ್‌ನ ಜೀತ್ ರಾಮ್‌ ಅವರನ್ನು 1,500ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT