ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆ ಮಕ್ಕಳ ವಿಭಾಗದಲ್ಲಿ 17 ಎನ್‌ಐಸಿಯು: ಡಾ.ಪುರುಷೋತ್ತಮ್

ನವಜಾತ ಶಿಶು ಆರೈಕೆ ಸಪ್ತಾಹ
Last Updated 18 ನವೆಂಬರ್ 2022, 12:01 IST
ಅಕ್ಷರ ಗಾತ್ರ

ಮಡಿಕೇರಿ: ‘ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗವು ಈಗ 17 ಹಾಸಿಗೆಯುಳ್ಳ ನವಜಾತ ಶಿಶು ಆರೈಕೆ ಕೇಂದ್ರ ಹೊಂದಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು’ ಎಂದು ಕೊಡಗು ವೈದ್ಯಕೀಯ ವಿದ್ಯಾಲಯ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬೋಧಕ ಆಸ್ಪತ್ರೆ) ವತಿಯಿಂದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ನವಜಾತ ಶಿಶು ಆರೈಕೆ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಮೊದಲು 10 ಹಾಸಿಗೆಯುಳ್ಳ ನವಜಾತ ಶಿಶು ಆರೈಕೆ ಕೇಂದ್ರ ಇತ್ತು. ಕೋವಿಡ್ ಸಮಯದಲ್ಲಿ ರಾಜ್ಯ ಸರ್ಕಾರ ₹ 20 ಕೋಟಿಯಷ್ಟು ಬೆಲೆಬಾಳುವ ಉಪಕರಣಗಳ ನೆರವಿನೊಂದಿಗೆ ಈಗ 17 ಹಾಸಿಗೆಯುಳ್ಳ ಎನ್.ಐ.ಸಿ.ಯು ಕಾರ್ಯ ನಿರ್ವಹಿಸುತ್ತಿದೆ. ಮುಂದೆ ಇದನ್ನು 20 ರಿಂದ 25 ಹಾಸಿಗೆಯುಳ್ಳ ಕೇಂದ್ರವಾಗಿ ಸ್ಥಳಾಂತರಿಸುವ ಸಾಧ್ಯತೆಯಿದೆ. ಮೊದಲು ತಿಂಗಳಿಗೆ 40 ಶಿಶು ಆರೈಕೆ ನಡೆಸುತ್ತಿದ್ದು, ಈಗ ತಿಂಗಳಿಗೆ 100ರಿಂದ 150ರವರೆಗೆ ನವಜಾತ ಶಿಶುಗಳ ಆರೈಕೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಅವಧಿಪೂರ್ವ ಜನನ, ಕಡಿಮೆ ತೂಕ, ಉಸಿರಾಟದ ತೊಂದರೆ, ಅಪೌಷ್ಠಿಕ ಮಕ್ಕಳು ಹಾಗೂ ಇತರೆ ಸೋಂಕಿನ ಮಕ್ಕಳಿಗೆ ಆರೈಕೆ ನೀಡಲಾಗುತ್ತಿದೆ. 100 ಮಕ್ಕಳು ಜನನವಾದರೆ ಇದರಲ್ಲಿ ನಾಟಿ, ಸ್ಥಳೀಯ ಔಷಧಿಗಳ ಮೊರೆ ಹೋಗಿ ಶೇ 10ರಷ್ಟು ಮಕ್ಕಳು ಸಾವನ್ನಪ್ಪುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಮಾತನಾಡಿ, ‘ನವಜಾತ ಶಿಶುವಿನ ಮರಣದ ದರ ಇತರೆ ಸಂದರ್ಭಗಳಲ್ಲಿ ಮಕ್ಕಳು ಮರಣ ಹೊಂದುವುದಕ್ಕೆ ಹೋಲಿಸಿದರೆ ಶೇ 70ಕ್ಕೂ ಅಧಿಕ ಇದೆ. ಈ ಪ್ರಮಾಣ ತಗ್ಗಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

‘ಬಾಲ್ಯಾವಸ್ಥೆಯಲ್ಲಿ ಆರೋಗ್ಯ ಸಮಸ್ಯೆಗಳಿಂದ ಮಕ್ಕಳು ಮರಣ ಹೊಂದುವ ಪ್ರಮಾಣಕ್ಕೆ ಹೋಲಿಸಿದರೆ ನವಜಾತ ಶಿಶುಗಳ ಮರಣ ಪ್ರಮಾಣ ಅಧಿಕ. ಇದನ್ನು ತಪ್ಪಿಸಲು ನಿರಂತರವಾಗಿ ಅರಿವು ಮೂಡಿಸಲಾಗುತ್ತಿದೆ’ ಎಂದರು.

‘ಭಾರತದಲ್ಲಿ ಪ್ರತಿವರ್ಷ ನ. 15ರಿಂದ 21 ರವರೆಗೆ ನವಜಾತ ಶಿಶು ಆರೈಕೆ ಕುರಿತು ಸಪ್ತಾಹ ಆಚರಿಸಲಾಗುತ್ತಿದೆ. ನವಜಾತ ಶಿಶುಗಳ ಜೀವ ರಕ್ಷಣೆ ಮತ್ತು ಬೆಳವಣಿಗೆ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶ’ ಎಂದು ಹೇಳಿದರು.

‘ನವೆಂಬರ್ ತಿಂಗಳಿನಿಂದ ಫೆಬ್ರುವರಿ 28ರವರೆಗೆ ‘ಸ್ಯಾನ್ಸ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ 5 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಾರೆ. ತ್ವರಿತ ಚಿಕಿತ್ಸೆ ನಿರ್ವಹಣೆಯಿಂದ ಶಿಶುವಿನ ರಕ್ಷಣೆಗೆ ಪ್ರಯತ್ನಿಸಲಾಗುತ್ತಿದೆ’ ಎಂದು ತಿಳಿಸಿದರು.

ಚಿತ್ರಕಲಾ ಸ್ಪರ್ಧೆ, ಕಿರುನಾಟಕ, ಕವನ, ಕೊಳಲುವಾದನ ಕಾರ್ಯಕ್ರಮ ಹಮ್ಮಿಕೊಂಡು ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕೊಡಗು ವೈದ್ಯಕೀಯ ವಿದ್ಯಾಲಯ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್, ಶುಶ್ರೂಷಣಾಧಿಕಾರಿ ವೀಣಾ, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಂಜುಳಾ, ಮಕ್ಕಳ ತಜ್ಞ ವೈದ್ಯರಾದ ಡಾ.ದಿವ್ಯರಾಣಿ, ಡಾ.ರವಿಚಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಟಿ.ಎನ್.ಪಾಲಾಕ್ಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT