ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮವನ್ನು ಮರೆತರೆ ಭಾರತ ಉಳಿಯದು; ಹಿ.ಶಿ.ರಾಮಚಂದ್ರೇಗೌಡ

ದಸರೆಯಲ್ಲಿ ಜನಪದ ಕಲರವ, ವೈವಿಧ್ಯಮಯ ಜನಪದ ಕಲೆಗಳ ಪ್ರದರ್ಶನ
Last Updated 3 ಅಕ್ಟೋಬರ್ 2022, 12:17 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ದಸರಾ ಉತ್ಸವದಲ್ಲಿ ಭಾನುವಾರ ಎಲ್ಲೆಡೆ ಜನಪದ ಕಲರವ ಕೇಳಿ ಬಂತು.

ಮಡಿಕೇರಿ ನಗರ ದಸರಾ ಸಮಿತಿ, ಕೊಡಗು ಜಿಲ್ಲಾ ಜಾನಪದ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ನಡೆದ ಜಾನಪದ ದಸರಾದಲ್ಲಿ ವೈವಿಧ್ಯಮ ಕಾರ್ಯಕ್ರಮಗಳು ಜರುಗಿದವು.

ಜಾನಪದ ವಿದ್ವಾಂಸ ಹಾಗೂ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಉದ್ಘಾಟಿಸಿ ಮಾತನಾಡಿದರು.

‘ಗ್ರಾಮವನ್ನು ಮರೆತರೆ ಭಾರತ ಉಳಿಯದು’ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

‘ಸ್ಮಾರ್ಟ್‌ ಸಿಟಿ’ ಎಂದು ಹೆಚ್ಚು ಹೆಚ್ಚು ನಗರಗಳ ಕಡೆಗೆ ಗಮನ ಕೊಡುತ್ತಿದ್ದೇವೆ. ಆದರೆ, ‘ಸ್ಮಾರ್ಟ್ ವಿಲೇಜ್’ ಪರಿಕಲ್ಪನೆ ಬಾರದ ಹೊರತು ದೇಶ ಉಳಿಯುವುದು ಕಷ್ಟ ಎಂದು ಪ್ರತಿಪಾದಿಸಿದರು.

‘ನಾವಿಂದು ಕೇವಲ ಖರೀದಿದಾರರಾಗುತ್ತಿದ್ದೇವೆ. ನಮ್ಮಲ್ಲೇ ಇರುವ ಅಗಾಧ ಜ್ಞಾನವನ್ನು ಬಳಕೆ ಮಾಡಿಕೊಳ್ಳದೇ ‍ಪಾಶ್ಚಾತ್ಯರತ್ತ ನೋಡುತ್ತಿದ್ದೇವೆ. ಸ್ಥಳೀಯ ಜ್ಞಾನ ಬಹಳ ಮುಖ್ಯ. ಮೂಲ ಜ್ಞಾನ ನಿರಾಕರಿಸುವವನು ತನ್ನ ಬೇರನ್ನು ಕಳೆದುಕೊಳ್ಳುತ್ತಾನೆ. ಪರಕೀಯರಾಗುವ ಬದಲು ಸ್ವಕೀಯರಾಗಬೇಕು, ನಮ್ಮನ್ನು ನಾವು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

‘ಜಾನಪದ ಎಂದರೆ ಅಮ್ಮ. ಅಮ್ಮ ಸೃಷ್ಟಿಕರ್ತೆ, ಆಕೆ ಮೌಲ್ಯ ಕಲಿಸುತ್ತಾಳೆ. ಆದರೆ, ಆಕೆಯ ಸೃಜನಶೀಲತೆಯನ್ನು ತಂದೆ ಆಕ್ರಮಿಸಿಕೊಳ್ಳುತ್ತಾನೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾಷಣಗಳು ಕೇವಲ ಬುರುಡೆಗಳು. ಭಾಷಣ ಮುಖ್ಯ ಅಲ್ಲ. ಕ್ರಿಯೆ ಮತ್ತು ಪ್ರತಿಕ್ರಿಯೆ ಮುಖ್ಯ ಎಂದ ಅವರು ನಿವೃತ್ತ ಐಎಎಸ್ ಅಧಿಕಾರಿ ಎಚ್.ಎಲ್.ನಾಗೇಗೌಡ ಅವರು ನಿವೃತ್ತಿಯ ಹಣದಲ್ಲಿ 15 ಎಕರೆಯಲ್ಲಿ ಜಾನಪದ ಲೋಕ ನಿರ್ಮಿಸಿದ ವೃತ್ತಾಂತ ಹೇಳಿದರು.

ಈ ನಿಟ್ಟಿನಲ್ಲಿ ‘ಅಮ್ಮ ಮತ್ತು ಜಾನಪದ’ ಎಂಬ ಕಾರ್ಯಕ್ರಮ ರೂಪಿಸಿ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರಿಗೆ ಹೇಳಿರುವೆ ಎಂದರು.

ಕಾರ್ಯಕ್ರಮದ ಆರಂಭದಲ್ಲೇ ಮಧು ಮತ್ತು ತಂಡದವರ ಡೊಳ್ಳು ಕುಣಿತ, ಪೂಜಾಕುಣಿತಗಳು ಗಮನ ಸೆಳೆದವು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ, ದಸರಾ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ ಪಾಲಿಕೆ ಸದಸ್ಯರಾದ ಶ್ವೇತಾ ಪ್ರಶಾಂತ, ಸವಿತಾ,ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಎಚ್.ಟಿ.ಅನಿಲ್, ವಿವಿಧ ಮಂಟಪಗಳ ಸಮಿತಿಯ ಅಧ್ಯಕ್ಷರಾದ ನಂದಾ ಉತ್ತಪ್ಪ, ತಿಮ್ಮಯ್ಯ, ಬ್ರಿಜೇಶ್, ಚಂದ್ರ, ನೀರಜ್ ಬೋಪಣ್ಣ, ಅನಿಶ್, ಉಮೇಶ್ ಇದ್ದರು.

ಪ್ರತಿಕೂಲದ ನಡುವೆಯೂ ಕ್ರೀಡೆ

ಮಳೆಯಿಂದಾಗಿ ಮೈದಾನವೆಲ್ಲ ಒದ್ದೆಯಾಗಿತ್ತು. ಹಾಗಾಗಿ, ಅನಿವಾರ್ಯವಾಗಿ ಜನಪದ ಕ್ರೀಡೆಗಳನ್ನು ವೇದಿಕೆಯ ಕೆಳಭಾಗದಲ್ಲೇ ಆಡಿಸಬೇಕಾಯಿತು. ಒಂದೆಡೆ ವೇದಿಕೆಯ ಮೇಲೆ ಜನಪದ ನೃತ್ಯ, ಹಾಡುಗಳು ನಡೆಯುತ್ತಿದ್ದರೆ, ಅದೇ ವೇಳೆಯಲ್ಲೆ ಕೆಳಭಾಗದಲ್ಲಿ ಜನಪದ ಕ್ರೀಡೆಗಳು ನಡೆದವು. ಒಂದು ರೀತಿಯ ಜಾನಪದ ಜಾತ್ರೆಯಂತಹ ವಾತಾವರಣ ಕಂಡು ಬಂತು.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವುದು, ಗೋಣಿಚೀಲದ ಓಟ, ಬುಗುರಿ, ಗೋಲಿಯಾಟ ಹೀಗೆ ಹಲವು ಜನಪದ ಕ್ರೀಡೆಗಳು ನಡೆದವು.

ಮನ ತಣಿಸಿದ ಗೀತೆ, ಕುಣಿತ

ಕಡಗದಾಳುವಿನ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಸೊಪ್ಪು ಕಟ್ಟಿಕೊಂಡು ‘ಕಾಡು ಕುರುಬರ ಮಕ್ಕಳು ದೂರಿ ದೂರಿ’ ಎಂದು ಮಾಡಿದ ನೃತ್ಯ ಮನೋಜ್ಞವಾಗಿ ಮೂಡಿಬಂದಿತು. ವೀಣಾ ಮತ್ತು ತಂಡದವರು ಪ್ರಸ್ತುತಪಡಿಸಿದ ಜನಪದಗೀತೆಯೂ ಸುಶ್ರಾವ್ಯವಾಗಿತ್ತು.

ಹಾಡು, ನೃತ್ಯ, ಚಿತ್ರಕಲೆ ಈ ಮೂರನ್ನು ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ಪ್ರಸ್ತುಪಡಿಸಿದ ಕ್ಲಿಪ್ ಆರ್ಟ್ ತಂಡದವರ ಪ್ರತಿಭೆಗೆ ಜನರು ಮಾರುಹೋದರು. ಹಾಡು, ನೃತ್ಯ ಮುಗಿಯುವುದರೊಳಗೆ ಅದಕ್ಕೆ ಸಂಬಂಧಿಸಿದ ಚಿತ್ರವನ್ನು ಕಲಾವಿದರು ವೇದಿಕೆಯ ಮೇಲೆಯೇ ಬಿಡಿಸಿದ್ದು ಆಕರ್ಷಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT