ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆ. 11ರಿಂದ 15ರವರೆಗೂ ಬಿಜೆಪಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
‘ಆ. 11ರಿಂದ 13ರವರೆಗೆ ಬಿಜೆಪಿ ಯುವ ಮೋರ್ಚಾ ವತಿಯಿದ 4 ಮಂಡಲಗಳಲ್ಲಿಯೂ ಬೈಕ್ ಜಾಥಾ ನಡೆಯಲಿದೆ. 12ರಿಂದ 14ರವರೆಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ಅಥವಾ ಅವರ ಕುಟುಂಬದವರಿಗೆ ಸನ್ಮಾನ, ವೀರ ಸೇನಾನಿಗಳ ಪ್ರತಿಮೆ ಸ್ವಚ್ಛತೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
14ರಂದು ಅಖಂಡ ಭಾರತವನ್ನು ವಿಭಜಿಸಿದ್ದರ ಪ್ರಯುಕ್ತ ಕರಾಳದಿನವನ್ನಾಚರಿಸಿ ಯುವಜನರಿಗೆ ಅದರ ಅರಿವು ಮೂಡಿಸುವುದು. ದೇಶ ಹೇಗೆ ತುಂಡಾಯಿತು ಎಂಬುದರ ಕುರಿತು ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.
13ರಿಂದ 15ರವರೆಗೆ ಪ್ರತಿ ಮನೆಗಳಲ್ಲೂ ರಾಷ್ಟ್ರಧ್ವಜಾರೋಹಣವನ್ನು ನಡೆಸಲಾಗುವುದು. ಇದಕ್ಕಾಗಿ ಬೂತ್‌ಮಟ್ಟದಲ್ಲಿ ಸಿದ್ಧತೆಗಳು ನಡೆದಿವೆ ಎಂದರು.
ಬಿಜೆಪಿಗೆ ಯಾವತ್ತೂ ಅಷ್ಟೇ ದೇಶವೇ ಮೊದಲು. ಮಿಕ್ಕ ವಿಚಾರಗಳು ನಂತರ. ಹಾಗಾಗಿ, ದೇಶಭಕ್ತಿಯನ್ನು ಪ್ರೇರೇಪಿಸುವ ಹಲವು ಕಾರ್ಯಕ್ರಮಗಳನ್ನು ಈ ಅವಧಿಯಲ್ಲಿ ಏರ್ಪಡಿಸಲಾಗುವುದು. 15ರಂದು ಪಕ್ಷದ ಕಚೇರಿಗಳಲ್ಲಿ ಸ್ವಾತಂತ್ರ್ಯೋತ್ಸವ ನಡೆಯಲಿದೆ ಎಂದು ಹೇಳಿದರು.
ಕೊಡಗಿನಲ್ಲಿನ ಜನರು ಹಿಂದಿನಿಂದಲೂ ಸಾಕಷ್ಟು ಅರಣ್ಯ ಉಳಿಸಿಕೊಂಡಿದ್ದಾರೆ. ದೇವರ ಕಾಡು ಹಾಗೂ ಸಿ ಅಂಡ್ ಡಿ ಲ್ಯಾಂಡ್ ಅನ್ನು ಮೀಸಲು ಅರಣ್ಯ ಎಂದು ಘೋಷಿಸುವ ಪ್ರಯತ್ನವನ್ನು ಸರ್ಕಾರ ನಿಲ್ಲಿಸಬೇಕು. ಬೇಕಿದ್ದರೆ, ಇಂತಹ ಕ್ರಮಗಳನ್ನು ಅರಣ್ಯ ಕಡಿಮೆ ಇರುವ ಇತರ ಜಿಲ್ಲೆಗಳಲ್ಲಿ ಕೈಗೊಳ್ಳಲಿ. ಕೊಡಗಿನಲ್ಲಿ ಇಂತಹ ಕೃತ್ಯ ಮಾಡಬಾರದು ಎಂದು ಒತ್ತಾಯಿಸಿದರು.
ಒಂದು ವೇಳೆ ಸರ್ಕಾರ ಒಪ್ಪದೇ ದೇವರ ಕಾಡುಗಳನ್ನು ಮೀಸಲು ಅರಣ್ಯ ಎಂದು ಘೋಷಿಸಲು ಮುಂದಾದರೆ ಹೋರಾಟ ನಡೆಸಲಾಗುವುದು ಎಂದೂ ಎಚ್ಚರಿಕೆ ನೀಡಿದರು.
ಪಕ್ಷದ ಪದಾಧಿಕಾರಿಗಳಾದ ಮಹೇಶ್ ಜೈನಿ, ತಳೂರು ಕಿಶೋರ್‌ಕುಮಾರ್, ಕಿಲನ್ ಗಣಪತಿ, ಕವನ್ ಕಾವೇರಪ್ಪ, ಬಿ.ಕೆ.ಜಗದೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.