ಹೊಸ್ಕೆರೆಯಲ್ಲಿ ವಸತಿ ಶಾಲೆ: ಗ್ರಾಮಸ್ಥರ ವಿರೋಧ

7

ಹೊಸ್ಕೆರೆಯಲ್ಲಿ ವಸತಿ ಶಾಲೆ: ಗ್ರಾಮಸ್ಥರ ವಿರೋಧ

Published:
Updated:

ಮಡಿಕೇರಿ: ತಾಲ್ಲೂಕಿನ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ್ಕೆರೆಯಲ್ಲಿ ದೆಹಲಿ ಮೂಲದ ಕಂಪನಿಯೊಂದು ಅಂತರರಾಷ್ಟ್ರೀಯ ವಸತಿ ಶಾಲೆ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ಹೊಸಕೇರಿ ಸೇವ್‌ ಸಂಘಟನೆ ಸದಸ್ಯರು ವಿರೋಧಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಚೇರಂಡ ಸುಭಾಷ್‌ ಮಾತನಾಡಿ, ‘89 ಎಕರೆ ಪ್ರದೇಶದಲ್ಲಿ ಶಾಲೆ ನಿರ್ಮಾಣವಾಗುತ್ತಿದೆ. ಇದರಿಂದ ಪರಿಸರ ಮತ್ತು ಕೃಷಿಕರ ನೆಮ್ಮದಿಯ ಬದುಕಿನ ಮೇಲೆ ಅಗಾಧ ಪರಿಣಾಮ ಬೀರುವ ಸಾಧ್ಯತೆಯಿದೆ. ಅದಕ್ಕೆ ಅವಕಾಶ ನೀಡಬಾರದು’ ಎಂದು ಮನವಿ ಮಾಡಿದರು.

‘ಕಂಪನಿ ಖರೀದಿಸಿರುವ ಜಾಗದ ಸುತ್ತಲೂ ಅರಣ್ಯವಿದೆ. ಅಲ್ಲಿ ಶಾಲೆ ನಿರ್ಮಾಣವಾದರೆ ಪರಿಸರವೂ ಹಾಳಾಗಿ ಗ್ರಾಮಸ್ಥರ ನೆಮ್ಮದಿಗೂ ಭಂಗ ಉಂಟಾಗಲಿದೆ’ ಎಂದು ಎಚ್ಚರಿಸಿದರು.

ಸದಸ್ಯ ಬಲ್ಲಿಚಂಡ ಚಂದನ್ ಅಪ್ಪಯ್ಯ ಮಾತನಾಡಿ, ‘ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಈ ಬಗ್ಗೆ ಗಮನ ಹರಿಸದ ಗ್ರಾಮ ಪಂಚಾಯಿತಿ ಬೃಹತ್ ಯೋಜನೆಗೆ ಅವಕಾಶ ನೀಡುತ್ತಿದೆ’ ಎಂದು ದೂರಿದರು.

‘ಈ ಬಗ್ಗೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ವಿರೋಧ ವ್ಯಕ್ತವಾಗಿ ಯೋಜನೆಗೆ ಅವಕಾಶ ನೀಡದಂತೆ ನಿರ್ಣಯ ಕೂಡ ತೆಗೆದುಕೊಳ್ಳಲಾಗಿತ್ತು. ಆದರೆ, ಇದೀಗ ಯೋಜನೆಗೆ ಗ್ರಾಮ ಪಂಚಾಯಿತಿಯೇ ಅವಕಾಶ ನೀಡಿರುವ ಬಗ್ಗೆ ಇಲಾಖೆ ಹಂತದಲ್ಲಿ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

ಉದ್ದೇಶಿತ ವಸತಿ ಶಾಲಾ ಆವರಣದಲ್ಲಿ ಹೆಲಿಪ್ಯಾಡ್‌, ಈಜುಕೊಳ, 8ರಿಂದ 7 ಬೃಹತ್‌ ಕಟ್ಟಡ ನಿರ್ಮಿಸಲಾಗುತ್ತಿದೆ. ಜತೆಗೆ, ಶಾಲೆಯ ನಿವೇಶನ ಜಾಗ ಎತ್ತರ ಪ್ರದೇಶದಲ್ಲಿದೆ. ಗುಡ್ಡ ಕುಸಿಯುವ ಸಾಧ್ಯತೆಯೂ ಇದೆ ಎಂದು ಚಂದನ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸದಸ್ಯ ಕೇಟೋಳಿರ ಸನ್ನಿ, ಮಂಡೇಪಂಡ ಕುಟ್ಟಣ್ಣ, ಬಲ್ಲಚಂಡ ಬೋಪಣ್ಣ, ಸುನೀಲ್‌ ಹಾಜರಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !