ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮ ಕಸಿದುಕೊಂಡ ಕೋವಿಡ್‌: ‘ಕೈಲ್‌ ಮುಹೂರ್ತ’ದ ಮೇಲೂ ಕರಿಛಾಯೆ

ಸರಳ ಆಚರಣೆಗೆ ಸೀಮತ
Last Updated 1 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕಾಫಿ ನಾಡು ಕೊಡಗು ಜಿಲ್ಲೆಯಲ್ಲೂ ಸಾಲು ಸಾಲು ಹಬ್ಬಗಳಿಗೆ ಮುನ್ನುಡಿ ಬರೆಯುವ ಕಾಲವಿದು. ಆದರೆ, ಈ ಎಲ್ಲ ಹಬ್ಬಗಳ ಮೇಲೂ ಕೋವಿಡ್‌ 19 ಕರಿನೆರಳು ಬೀರಿದ್ದು, ಹಬ್ಬಗಳ ಸಂಭ್ರಮವನ್ನು ಕಸಿದುಕೊಳ್ಳುತ್ತಿದೆ. ಸೆ.2 ಹಾಗೂ 3ರಂದು ಜಿಲ್ಲೆಯಲ್ಲಿ ಕೊಡವ ಸಮುದಾಯದವರು ‘ಕೈಲ್‌ ಮುಹೂರ್ತ’ (ಕೈಲ್‌ ಪೊಳ್ದ್‌) ಆಚರಣೆ ಮಾಡುತ್ತಿದ್ದರೂ ಅವರಲ್ಲಿ ಹಿಂದಿನಷ್ಟು ಸಂಭ್ರಮ, ಸಡಗರ ಇಲ್ಲವಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸಂಭ್ರಮ ಮಾಯವಾಗುತ್ತಿದೆ. ಮೂರು ವರ್ಷಗಳಿಂದ ಸುರಿದ ಭಾರಿ ಮಳೆಯು ಉತ್ಸವದಂತೆ ಆಚರಿಸುವ ಕ್ರೀಡಾಕೂಟ ಹಾಗೂ ಹಬ್ಬಗಳ ಸಂಭ್ರಮವನ್ನು ಕಸಿದುಕೊಂಡಿತ್ತು. ಅದಾದ ಮೇಲೆ ಎರಡು ವರ್ಷಗಳಿಂದ ಕೋವಿಡ್‌ ಸಾಂಕ್ರಾಮಿಕ ಕಾಯಿಲೆಯು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವ ಹಬ್ಬಕ್ಕೂ ಅಡ್ಡಿ ಪಡಿಸುತ್ತಿದೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕೋವಿಡ್‌ ನಿರ್ಬಂಧಗಳು ಸಡಿಲಿಕೆಯಾಗಿವೆ. ಕಾಲೇಜು ಹಾಗೂ ಪ್ರೌಢಶಾಲೆಗಳು ಆರಂಭವಾಗಿವೆ. ಸೆ.6ರಿಂದ ಪ್ರಾಥಮಿಕ ಶಾಲೆಗಳೂ ಬಾಗಿಲು ತೆರೆಯುತ್ತಿವೆ. ಆದರೆ, ಕೊಡಗಿನಲ್ಲಿ ನಿರ್ಬಂಧಗಳು ಮುಂದುವರಿದಿವೆ. ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ.

ಹಬ್ಬದ ವಿಶೇಷತೆ ಏನು?: ಕೊಡವ ಭಾಷೆಯಲ್ಲಿ ಕೈಲ್ ಎಂದರೆ ಆಯುಧ, ಪೋಳ್ದ್ ಎಂದರೆ ಪೂಜೆ ಎಂಬ ಅರ್ಥವಿದೆ. ಜಿಲ್ಲೆಯ ಕೊಡವ ಸಮುದಾಯದ ಜನರು ಕೋವಿ, ಒಡಿಕತ್ತಿ, ಪೀಚೆಕತ್ತಿ, ಕೋವಿ ಮುಂತಾದ ಆಯುಧಗಳನ್ನು ಸ್ಚಚ್ಛಗೊಳಿಸಿ, ದೇವರ ಮನೆಯಲ್ಲಿಟ್ಟು, ಹೂವಿನಿಂದ ಅಲಂಕರಿಸಿ ಈ ಹಬ್ಬದ ವೇಳೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಬಗೆಬಗೆಯ ಮಾಂಸದ ಅಡುಗೆ ಮಾಡಿ ಸೇವಿಸುತ್ತಾರೆ. ಈ ಹಬ್ಬದಲ್ಲಿ ಪಂದಿಕರಿ, ಕಡಂಬಿಟ್ಟು, ಕೋಳಿ ಸಾರು, ಪಾಪಿಟ್ಟು, ಅಕ್ಕಿ ರೊಟ್ಟಿಗಳಿಗೆ ಆದ್ಯತೆ ಇರಲಿದೆ.

ಇನ್ನು ಕೊಡವರ ಐನ್‌ಮನೆಗಳಲ್ಲೂ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಕಾವೇರಿ ತುಲಾ ಸಂಕ್ರಮಣ, ಹುತ್ತರಿ ಹಬ್ಬದಂತೆಯೇ ಈ ಹಬ್ಬಕ್ಕೂ ಕೊಡವ ಸಮುದಾಯದಲ್ಲಿ ವಿಶೇಷ ಸ್ಥಾನಮಾನ. ದೂರದ ಊರುಗಳಲ್ಲಿ ನೆಲೆಸಿರುವ ಬಂಧುಗಳು ಹಬ್ಬಕ್ಕೆ ಆಗಮಿಸುತ್ತಾರೆ. ಆದರೆ, ಕೋವಿಡ್‌ ಕಾರಣಕ್ಕೆ ಹೊರ ರಾಜ್ಯದಲ್ಲಿ ನೆಲೆಸಿರುವವರು ಈ ವರ್ಷ ಬರುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಈ ಹಬ್ಬದ ಅಂಗವಾಗಿ, ಸುಮಾರು ಒಂದು ತಿಂಗಳು ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಆದರೆ, ಈ ವರ್ಷ ಎಲ್ಲಿಯೂ ಆಯೋಜನೆ ಮಾಡುತ್ತಿಲ್ಲ. ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಮಡಕೆ ಒಡೆಯುವ ಸ್ಪರ್ಧೆ, ಕಾಳು ಹೆಕ್ಕುವ ಸೇರಿದಂತೆ ಹಲವು ಸ್ಪರ್ಧೆಗಳ ಆಯೋಜನೆ ಮಾಡಲಾಗುತ್ತಿತ್ತು. ಸಂಭ್ರಮವನ್ನು ಕೋವಿಡ್‌ ಕಸಿದುಕೊಂಡಿದೆ. ನಾಪೋಕ್ಲು, ಬಲಮುರಿ, ವಿರಾಜಪೇಟೆ, ಮೂರ್ನಾಡು, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಹುದಿಕೇರಿ ಭಾಗದಲ್ಲಿ ಈ ಕ್ರೀಡಾಕೂಟಗಳು ರಂಜಿಸುತ್ತಿದ್ದವು. ಅದಕ್ಕೆ ಕಡಿವಾಣ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT