ಶುಕ್ರವಾರ, ಆಗಸ್ಟ್ 6, 2021
27 °C
ಕಲುಷಿತಗೊಳ್ಳುತ್ತಿದೆ ನೀರು, ತ್ಯಾಜ್ಯ ಹಾಕುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಕಾಜೂರು ಹೊಳೆ ಒಡಲು ಸೇರುತ್ತಿದೆ ಕಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ಹಾಗೂ ಪಟ್ಟಣದ ಕೋಳಿ, ಹಂದಿ ಮಾಂಸದಂಗಡಿ ತ್ಯಾಜ್ಯವನ್ನು ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಸೇತುವೆ ಬಳಿ ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿದೆ. ಇದರಿಂದ ಹೊಳೆ ನೀರು ಕಲುಷಿತಗೊಳ್ಳುತ್ತಿದೆ.

ಕೊವಿಡ್–19, ಲಾಕ್‌ಡೌನ್ ನಿರ್ಬಂಧ ಇದ್ದಾಗ ಅಂಗಡಿ, ಹೊಟೇಲ್‌ ಗಳು ಮುಚ್ಚಿದ್ದು ತ್ಯಾಜ್ಯ ಸಮಸ್ಯೆಯಿಲ್ಲದೆ ಪರಿಸರ ಸ್ವಚ್ಛವಾಗಿತ್ತು. ಇದೀಗ ಲಾಕ್‌ಡೌನ್ ಸಡಿಲಗೊಂಡ ಬೆನ್ನಲ್ಲೇ ಕಸದ ರಾಶಿ, ಮದ್ಯದ ಬಾಟಲಿಗಳನ್ನು ಸುರಿಯಲಾಗುತ್ತಿದೆ. ಕಾಜೂರು ಹೊಳೆ ಹರಿದು ಹೇಮಾವತಿ ನದಿಯನ್ನು ಸೇರುತ್ತದೆ. ಜೋರಾಗಿ ಮಳೆಯಾದರೆ ತ್ಯಾಜ್ಯವೂ ನದಿ ಸೇರುತ್ತದೆ ಎಂದು ಕಾಜೂರು, ದೊಡ್ಡಕೊಳತ್ತೂರು, ಎಡೆಹಳ್ಳಿ ಗ್ರಾಮಸ್ಥರು ಹೇಳುತ್ತಾರೆ.

ಸೇತುವೆ ಬಳಿ ತೋಟದೊಳಗೆ ಕಾರಣಿಕ ದೈವ ಕಟ್ಟೆ ಬಸವಣ್ಣ ದೇವರ ಗುಡಿಯಿದ್ದು, ಗ್ರಾಮಸ್ಥರು ಹಣ್ಣು–ಕಾಯಿ ಸಮರ್ಪಿಸಿ, ಹರಕೆ ಹೊತ್ತು ಪೂಜಿಸುತ್ತಾರೆ. ರಸ್ತೆಯಲ್ಲೇ ಕಸ ಹಾಕದೆ, ಸ್ವಚ್ಛತೆ ಕಾಪಾಡುವಂತೆ ಸೂಚನಾ ಫಲಕವನ್ನೂ ಅಳವಡಿಸಲಾಗಿದೆ. ಆದರೂ ಶನಿವಾರಸಂತೆ ಪಟ್ಟಣ ಹಾಗೂ ದುಂಡಳ್ಳಿ ಜನತೆ ಹಳ್ಳಿಗಳಿಗೆ ಬಂದು ರಸ್ತೆ ಪಕ್ಕದಲ್ಲೇ ಕಸ ಸುರಿದು ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ.

ದುಂಡಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನಹರಿಸಿ, ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಚಿನ್ನಪ್ಪ, ಮಹೇಶ್, ಚಂದು, ಚಂದ್ರಶೇಖರ್ ಹಾಗೂ ಬಾಬು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.