ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ನಾಡಿನಲ್ಲಿ ಕನ್ನಡದ ಕಂಪು

ಜ್ಞಾನ, ತಂತ್ರಜ್ಞಾನದ ಮಾಹಿತಿ ಕನ್ನಡದಲ್ಲೇ ಸಿಗಲಿ: ಸಾ.ರಾ. ಮಹೇಶ್‌ ಆಶಯ
Last Updated 1 ನವೆಂಬರ್ 2018, 12:37 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಗುರುವಾರ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. ಎಲ್ಲೆಡೆಯೂ ಕನ್ನಡ ಕಂಪು. ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಸಂಘ– ಸಂಸ್ಥೆಗಳು ರಾಜ್ಯೋತ್ಸವ ಆಚರಿಸಿದವು.

ಜಿಲ್ಲಾಡಳಿತದಿಂದ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಮಹೇಶ್, 21ನೇ ಶತಮಾನದ ಈ ಹೊತ್ತಿನಲ್ಲಿ ಕನ್ನಡವು ಆಧುನಿಕತೆಯೊಂದಿಗೆ ತನ್ನದೇ ಆಸ್ಮಿತೆ ಉಳಿಸಿಕೊಳ್ಳಬೇಕಾಗಿದೆ. ಪ್ರಾದೇಶಿಕ ಭಾಷೆಗಳನ್ನು ಮಟ್ಟಹಾಕುವ ರೀತಿಯಲ್ಲಿ ಇಂಗ್ಲಿಷ್‌ ಬೆಳೆಯುತ್ತಿದೆ. ಇಂದು ಕರ್ನಾಟಕದಲ್ಲಿ ಕನ್ನಡ ಬಲ್ಲವರ ಸಂಖ್ಯೆ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
‘ಜ್ಞಾನ ಹಾಗೂ ತಂತ್ರಜ್ಞಾನ ಸಂಬಂಧಿ ಮಾಹಿತಿಗಳು ಕನ್ನಡಿಗರಿಗೆ ಕನ್ನಡದಲ್ಲೆ ಲಭ್ಯವಾಗಬೇಕು. ಆರ್ಥಿಕವಾಗಿ ಕನ್ನಡಿಗರು ಮತ್ತಷ್ಟು ಬಲಿಷ್ಠರಾಗಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದಕ್ಕೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹರಿದು ಬಂದ ನೆರವಿನ ಮಹಾಪೂರವೇ ಉತ್ಕೃಷ್ಟ ಉದಾಹರಣೆ’ ಎಂದು ಹೇಳಿದರು.

‘ಕನ್ನಡ ಭಾಷೆಯ ಮೊಟ್ಟ ಮೊದಲ ಶಾಸನ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದಗಳಿವೆ. ಕನ್ನಡದ ಮೊದಲ ಗ್ರಂಥ ಕವಿರಾಜ ಮಾರ್ಗದಲ್ಲಿ ಕನ್ನಡ ನಾಡಿನ ವಿಸ್ತಾರವಿದೆ. ಕನ್ನಡದ ಆದಿಕವಿ ಪಂಪ ಕನ್ನಡ ನಾಡಿನ ಬಗ್ಗೆ ಚಾಗದ ಬೋಗದ ಅಕ್ಕರದ ನಾಡೆಂದು ತಿಳಿಸುತ್ತಾ, ಇಲ್ಲಿ ಮನುಷ್ಯನಾಗಿ ಅಲ್ಲದಿದ್ದರೂ ಮರಿದುಂಬಿ ಆಗಿಯಾದರೂ ಹುಟ್ಟಬೇಕೆನ್ನುತ್ತಾನೆ. ಕನ್ನಡದೊಂದಿಗೆ ಇತರ ಭಾಷೆಯನ್ನು ಕಲಿಯಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಬೇರೆ ಸಂಸ್ಕೃತಿಯನ್ನು ಪ್ರೀತಿಸು ನಮ್ಮ ಸಂಸ್ಕೃತಿಯಲ್ಲಿ ಜೀವಿಸು ಎಂಬುದರ ಅರಿವು ನಮಗಿರಬೇಕು’ ಎಂದು ಹೇಳಿದರು.

ಸಾಂಸ್ಕೃತಿಕ ಕಲರವ: ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಳಿಸಿತು. ಸಂತ ಮೈಕಲ್‌ ಶಾಲೆ, ರಾಜರಾಜೇಶ್ವರಿ ಶಾಲೆ, ಬ್ಲಾಸಂ ಶಾಲೆ, ಭಾರತೀಯ ವಿದ್ಯಾರ್ಥಿ ಭವನದ ವಿದ್ಯಾರ್ಥಿಗಳು ನೃತ್ಯ ಪ್ರಸ್ತುತ ಪಡಿಸಿದರು.

ದೆಹಲಿಯ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಜೋವೆನ್‌ ಜೋಸೆಫ್‌, ಎಂ.ಸಿ. ಕೃತೇಶ್‌, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿಹೆಚ್ಚು ಅಂಕಗಳಿಸಿದ್ದ ಗಾಳಿಬೀಡು ಶಾಲೆ ವರಿಷ್ಮಾ, ಪಿಯುನಲ್ಲಿ ಹೆಚ್ಚು ಅಂಕ ಗಳಿಸಿ (ಕಲಾ ವಿಭಾಗ) ಗ್ರಿಷ್ಮಾ ಹಾಗೂ ಗಾಂಧಿ ಗ್ರಾಮ ಪುರಸ್ಕಾರ ಪಡೆದ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವಿಧಾನ ‍ಪರಿಷತ್‌ ಸದಸ್ಯರಾದ ಎಂ.ಪಿ. ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT