ಶನಿವಾರ, ಮೇ 21, 2022
28 °C

ಕನ್ನಡ ರಾಜ್ಯೋತ್ಸವ 2021: ಕೊಡಗಿನ ಹೆಮ್ಮೆಯ ‘ನಾ ಕನ್ನಡಿಗ’ ಟಾಮಿ ಥೋಮಸ್

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಇವರ ಹೆಸರು ಟಾಮಿ ಥೋಮಸ್. ಆದರೆ, ಕೊಡಗಿನಲ್ಲಿ ಇವರು ಪರಿಚಿತರಾಗಿರುವುದು ಮಾತ್ರ ‘ನಾ ಕನ್ನಡಿಗ...’ ಎಂದು. ಅದಕ್ಕೆ ಕಾರಣ ಅವರು ಸದ್ದಿಲ್ಲದೇ ಮಾಡುತ್ತಿರುವ ಕನ್ನಡ ಸೇವೆ. ನಮ್ಮ ಭಾಷೆಯ ಮೇಲೆ ಅವರಿಗಿರುವ ಪ್ರೀತಿ, ಅಭಿಮಾನ.
ಟಾಮಿ ಮಾತೃಭಾಷೆ ಮಲಯಾಳಂ. ಆದರೆ, ಕನ್ನಡದ ಮೇಲೆ ಅವರಿಗೆ ಪ್ರೀತಿ ಹೆಚ್ಚು. ಅದಕ್ಕೇ ಅವರು ನಾ ಕನ್ನಡಿಗನಾಗಿದ್ದಾರೆ. ಜಿಲ್ಲೆಯ ಯಾವ ಮೂಲೆಗೆ ತೆರಳಿ, ಟಾಮಿ ಥೋಮಸ್‌ ಹೆಸರು ಹೇಳಿದರೆ ಯಾರಿಗೂ ತಿಳಿಯುವುದಿಲ್ಲ. ನಾ ಕನ್ನಡ ಎಂದರೆ ಸಾಕು. ಅವರ ಬಗ್ಗೆ ಹೇಳುತ್ತಾರೆ.

ರೆಸಾರ್ಟ್‌ವೊಂದರ ಉದ್ಯೋಗಿ ಯಾಗಿರುವ ಟಾಮಿ. ಅಲ್ಲಿಗೆ ಪ್ರತಿನಿತ್ಯ ಬರುವ ಪ್ರವಾಸಿಗರಿಗೆ ಕನ್ನಡದ ಮಹತ್ವ ಸಾರುತ್ತಾರೆ. ಕನ್ನಡ ಗೊತ್ತಿಲ್ಲದ ಹೊರ ರಾಜ್ಯದ ಪ್ರವಾಸಿಗರಿಗೆ ಕನ್ನಡ ಪದ ಹೇಳಿಕೊಡುತ್ತಾರೆ. ಸಿಗುವ ಐದಾರು ನಿಮಿಷದಲ್ಲೇ ಸ್ವಲ್ಪ ಕನ್ನಡ ಪದ ಕಲಿಸುವ ಪ್ರಯತ್ನ ಮಾಡುತ್ತಾರೆ. ಪ್ರವಾಸಿಗರೂ ಅಭಿಮಾನದಿಂದ ಕಲಿಯುತ್ತಾರೆ ಎಂದು ಹೇಳುತ್ತಾರೆ ನಾ ಕನ್ನಡಿಗ. ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಕನ್ನಡ ಕಾರ್ಯಕ್ರಮಕ್ಕೆ ಮೀಸಲಿರಿಸಿದ್ದಾರೆ.

ಸಿದ್ದಾಪುರ ಸಮೀಪದ ಇಂಜಿಲಗೆರೆಯಲ್ಲಿ ನೆಲೆಸಿದ್ದು, ತಮ್ಮ ನಿವಾಸಕ್ಕೂ ನಾ ಕನ್ನಡಿಗ ಮನೆ ಎಂದು ನಾಮಕರಣ ಮಾಡಿದ್ದಾರೆ. ಕೊಡಗಿನಲ್ಲಿ ಬಹುಭಾಷಿಕರಿದ್ದಾರೆ. ಅದರಲ್ಲೂ ಸಿದ್ದಾಪುರದ ಆಸುಪಾಸಿನಲ್ಲಿ ಬೇರೆ ಬೇರೆ ಭಾಷೆಯ ಜನರು ನೆಲೆಸಿದ್ದಾರೆ. ಕೂಲಿ ಕೆಲಸಕ್ಕೆ ಹೊರ ರಾಜ್ಯದಿಂದ ಬಂದು ನೆಲೆಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬಂದವರಿಗೆ ಟಾಮಿ ಥೋಮಸ್‌ ಅವರು ಕನ್ನಡ ಕಲಿಸುತ್ತಿದ್ದಾರೆ.

ನ.1ರಂದು ಬಹುಭಾಷಿಕರನ್ನು ಒಂದೆಡೆ ಸೇರಿಸಿ, ಕನ್ನಡ ಹಬ್ಬ ಆಚರಿಸುತ್ತಾರೆ. ಇವರ ಕನ್ನಡ ಮೇಲಿನ ಪ್ರೀತಿ ಕಂಡು ಅನ್ಯಭಾಷಿಕರು ಕನ್ನಡ ಕಲಿತ್ತಿದ್ದಾರೆ. ವಿರಾಜಪೇಟೆ ತಾಲ್ಲೂಕು ಘಟಕದ ಜಾನಪದ ಪರಿಷತ್‌ ಅಧ್ಯಕ್ಷರೂ ಆಗಿದ್ದಾರೆ.

‘ನನ್ನ ಮಾತೃಭಾಷೆ ಮಲಯಾಳಂ ಆದರೂ ನನಗೆ ಆಶ್ರಯ ನೀಡಿರುವುದು ಈ ನಾಡು. ಕನ್ನಡ ಅನ್ನದ ಭಾಷೆ. ನಾವು ನೆಲೆಸಿದ ತಾಣದ ಬಗ್ಗೆ ಅಭಿಮಾನ ಇರಬೇಕು. ಹೀಗಾಗಿ, ಭಾಷೆ ಕಲಿಸಲು ಮುಂದಾದೆ. ಅದಕ್ಕೆ ಸ್ಪಂದನೆ ವ್ಯಕ್ತವಾಗುತ್ತಿದೆ’ ಎನ್ನುತ್ತಾರೆ ಟಾಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು