ಸೋಮವಾರ, ನವೆಂಬರ್ 18, 2019
22 °C

ಕೊಡಗು: ಜಿಲ್ಲೆಯ ವಿವಿಧೆಡೆ ರಾಜ್ಯೋತ್ಸವ ಸಂಭ್ರಮ

Published:
Updated:
Prajavani

ಮಡಿಕೇರಿ: ನಗರದಲ್ಲಿ ವಿವಿಧ ಸಂಘಟನೆಗಳಿಂದ ಶುಕ್ರವಾರ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಡಿಕೇರಿ ರಕ್ಷಣಾ ವೇದಿಕೆ ವತಿಯಿಂದ 64ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ರಾಜಾಸೀಟ್ ರಸ್ತೆಯಲ್ಲಿರುವ ಕುವೆಂಪು ಪುತ್ಥಳಿಗೆ ಹಾರ ಹಾಕಿ ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು.

ಇದರೊಂದಿಗೆ ನಗರಸಭೆಯ ಹಿರಿಯ ನೌಕರ ಹಾಗೂ ಕನ್ನಡಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಓಬಳಿ ಅವರನ್ನು ಸನ್ಮಾನಿಸಲಾಯಿತು.
ಮಡಿಕೇರಿ ರಕ್ಷಣಾ ವೇದಿಕೆಯ ಸದಸ್ಯರಾದ ಸತ್ಯ, ಪ್ರದೀಪ್, ಉಮೇಶ್ ಕುಮಾರ್ ಇದ್ದರು.

ಟೆಂಪೊ ನಿಲ್ದಾಣದದಲ್ಲಿ ಸಡಗರ: ವೀರನಾಡು ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಡಿಕೇರಿಯ ನೂತನ ಖಾಸಗಿ ಬಸ್ ನಿಲ್ದಾಣ ಸಮೀಪವಿರುವ ಟೆಂಪೊ ನಿಲ್ದಾಣದ ಬಳಿ ಕನ್ನಡ ರಾಜ್ಯೋತ್ಸವ ಆಚರಿಸಿದರು.

ಧ್ವಜಾರೋಹಣವನ್ನು ನಗರಸಭೆ ಆಯುಕ್ತ ರಮೇಶ್ ಹಾಗೂ ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್ ಜಿ. ಆಚಾರ್ಯ ನೆರವೇರಿಸಿದರು. ಕನ್ನಡ ನಾಡು ನುಡಿಯ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಗಣ್ಯರು ಕರೆ ನೀಡಿದರು.

ಪ್ರಮುಖರಾದ ಸಾಹಿತಿ ಅಲ್ಲಾರಂಡ ವಿಠಲ್ ನಂಜಪ್ಪ, ಬೇಬಿ ಮ್ಯಾಥ್ಯು ಉಪಸ್ಥಿತರಿದ್ದರು.

ಸಮೀಪದ ಕಡಗದಾಳು ಬೊಟ್ಲಪ್ಪ ಯುವ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಯುವ ಬರಹಗಾರ ಕಿಶೋರ್ ರೈ ಧ್ವಜಾರೋಹಣ ನೆರವೇರಿಸಿದರು. ನಂತರ, ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ.ಕೆ. ಮಂಜು ಅವರು ವಹಿಸಿದ್ದರು.

ಕಿಶೋರ್ ರೈ ಮಾತನಾಡಿ, ಕನ್ನಡ ನಾಡು ನುಡಿ ಭಾಷಾ ವೈಶಿಷ್ಟತೆ ಹಾಗೂ ಇಂದಿನ ಯುವ ಪೀಳಿಗೆ ಇಂಗ್ಲಿಷ್‌ನತ್ತ ಮಾರು ಹೋಗುತ್ತಿದ್ದಾರೆ, ಇದೊಂದು ಬೇಸರದ ವಿಚಾರ ಎಂದು ವಿಷಾದಿಸಿದರು.

ಸಂಘದ ಸ್ಥಾಪಕ ಅಧ್ಯಕ್ಷ ಬಿ.ಎಸ್.ಜಯಪ್ಪ, ಸಂಘದ ಮಹಿಳಾ ಉಪಾಧ್ಯಕ್ಷೆ ಬಿ.ಜೆ.ವಸಂತಿ ಭಾಗವಹಿಸಿದ್ದರು.
ಸಂಘದ ಸದಸ್ಯರಾದ ಅವಿನಾಶ್ ಬೊಟ್ಲಪ್ಪ ಅವರು ನಿರೂಪಿಸಿದರು. ಬಿಎಂ.ದೇವಾನಂದ ಸ್ವಾಗತಿಸಿದರು. ಬಿ.ಎಂ.ಶಿವಕಾಂತ್ ವಂದಿಸಿದರು.

ಪ್ರತಿಕ್ರಿಯಿಸಿ (+)