ಶುಕ್ರವಾರ, ನವೆಂಬರ್ 22, 2019
26 °C

‘ಕನ್ನಡ ಬಳಕೆಗೆ ಮುಜುಗರ ಸರಿಯಲ್ಲ’

Published:
Updated:
Prajavani

ವಿರಾಜಪೇಟೆ: ಎರಡು ಸಾವಿರಕ್ಕೂ ಅಧಿಕ ಇತಿಹಾಸವಿದ್ದರೂ ಕೂಡ ಕನ್ನಡ ಭಾಷೆಯು ಇತರೆ ಭಾಷೆಗಳ ಆಕ್ರಮಣದಿಂದ ಅಳಿವಿನ ಅಂಚಿಗೆ ಹೋಗುತ್ತಿದೆ ಎಂದು ಹಿರಿಯ ವೈದ್ಯ ಡಾ.ಕಾಳಿಮಾಡ ಶಿವಪ್ಪ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಕರ್ನಾಟಕ ಸಂಘದ ವತಿಯಿಂದ ಶನಿವಾರ ಪುರಭವನದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಶಿಕ್ಷಕರು ಕೂಡ ಕನ್ನಡ ಭಾಷೆಯನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಇಂದಿನ ಯುವ ಪೀಳಿಗೆ ಕನ್ನಡ ಭಾಷೆಯನ್ನು ಬಳಸಲು ಮುಜುಗರಪಡುತ್ತಿರುವುದು ಸರಿಯಲ್ಲ. ದೈನಂದಿನ ಚಟುವಟಿಕೆಗಳಲ್ಲಿ ಕನ್ನಡವನ್ನು ಬಳಸುವುದರಿಂದ ಭಾಷೆ ಉಳಿವು ಹಾಗೂ ಬೆಳವಣಿಗೆ ಸಾಧ್ಯ. ಗಡಿನಾಡಿನ ಅಂಚಿನಲ್ಲಿ ಭಾಷೆಯ ಸ್ಥಿತಿಗತಿ ಮತ್ತು ಭಾಷೆಯನ್ನು ಬಳಸುವವರ ಸ್ಥಿತಿಗತಿಯನ್ನು ಮೊದಲು ಅರಿತು ಕೊಳ್ಳಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ, ಕನ್ನಡ ನಮ್ಮ ಜೀವನದ ಭಾಷೆಯಾಗಬೇಕು. ಇಂಗ್ಲಿಷ್ ಭಾಷೆಗಳ ಮೇಲಿನ ವ್ಯಾಮೋಹದಿಂದ ಇಂದು ಕನ್ನಡ ಭಾಷೆಯನ್ನು ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕನ್ನಡವನ್ನು ಬೆಳೆಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು ಎಂದರು.

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೆರ ಬಾಂಡ್ ಗಣಪತಿ, ಶಿಕ್ಷಕ ಎ.ವಿ ಮಂಜುನಾಥ್ ಹಾಗೂ ಬಲ್ಲಡಿಚಂಡ ಗಿರಿ ನಂಜಪ್ಪ ಸಭೆಯಲ್ಲಿ ಮಾತನಾಡಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಮಾಜ ಹಾಗೂ ಸಹಕಾರ ಕ್ಷೇತ್ರದಿಂದ ಕೊಡಂದೆರ ಬಾಂಡ್ ಗಣಪತಿ, ಕ್ರೀಡಾ ಕ್ಷೇತ್ರದಿಂದ ಬುಟ್ಟಿಯಂಡ ಚಂಗಪ್ಪ, ವೈದ್ಯಕೀಯ ಹಾಗೂ ಜನಪದ ಕ್ಷೇತ್ರದಿಂದ ಡಾ.ಕಾಳಿಮಾಡ ಶಿವಪ್ಪ, ಪತ್ರಿಕೋದ್ಯಮ ಹಾಗೂ ಪರಿಸರ ಕ್ಷೇತ್ರದಿಂದ ಬಲ್ಲಡಿಚಂಡ ಗಿರಿ ನಂಜಪ್ಪ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಎ.ವಿ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ್ಣ, ಉಪಾಧ್ಯಕ್ಷ ಚೇನಂಡ ಗಿರೀಶ್, ಕಟ್ಟಡ ಸಮಿತಿ ಅಧ್ಯಕ್ಷ ಚೇನಂಡ ಸುರೇಶ್, ಖಜಾಂಚಿ ಕೋಟೇರ ಗಣೇಶ್ ತಮ್ಮಯ್ಯ, ಬೊಳ್ಯಪಂಡ ಸುರೇಶ್, ಬಾಚೀರ ಗಣೇಶ್, ಪುಗ್ಗೇರ ನಂದಾ, ಚಿಲ್ಲವಂಡ ಕಾವೇರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)