ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಚುನಾವಣೆ: ಪೈಪೋಟಿ ನಿರೀಕ್ಷೆ

ಕಲಾವಿದರ ಬಳಗದ ಅಧ್ಯಕ್ಷ ಕೇಶವ ಕಾಮತ್‌ ನಾಮಪತ್ರ ಸಲ್ಲಿಕೆ, 2ನೇ ಅವಧಿಗೆ ಹಾಲಿ ಅಧ್ಯಕ್ಷರ ಕಣ್ಣು
Last Updated 6 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್‌ಗೆ ಮೇ 9ರಂದು ಚುನಾವಣೆ ನಡೆಯುತ್ತಿದ್ದು, ಕೊಡಗು ಜಿಲ್ಲಾ ಘಟಕದ ಚುಕ್ಕಾಣಿ ಹಿಡಿಯಲೂ ಪ್ರಬಲ ಪೈಪೋಟಿ ಆರಂಭವಾಗಿದೆ.

ಒಂದು ಸುತ್ತಿನ ಪ್ರಚಾರ ನಡೆಸಿರುವ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು, ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದು ಮತ್ತೊಂದು ಸುತ್ತಿನ ಪ್ರಚಾರಕ್ಕೆ ಅಣಿಯಾಗಿದ್ದಾರೆ. ಅವರಿಗೆ ತಮ್ಮ ಬೆಂಬಲಿಗರು, ಸಾಹಿತ್ಯಾಸಕ್ತರು ಹಾಗೂ ಕಲಾವಿದರು ಸಾಥ್‌ ನೀಡುತ್ತಿದ್ದಾರೆ. ಈ ಬಾರಿಯ ಪರಿಷತ್‌ ಚುನಾವಣೆಯನ್ನು ಸಾಹಿತ್ಯಾಸಕ್ತರು ಅತ್ಯಂತ ಕುತೂಹಲದಿಂದ ಗಮನಿಸುತ್ತಿದ್ದಾರೆ.

ಕೇಶವ ಕಾಮತ್‌ ಹಾಗೂ ಲೋಕೇಶ್‌ ಸಾಗರ್‌ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರವೂ ಒಂದು ದಿನ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು ಇನ್ನೂ ಯಾರ್‍ಯಾರು ನಾಮಪತ್ರ ಸಲ್ಲಿಸಲಿದ್ದಾರೆ ನೋಡಬೇಕಿದೆ.

ಹಲವು ವರ್ಷಗಳಿಂದಲೂ ಸಾಹಿತ್ಯ ಪರಿಷತ್‌ನೊಂದಿಗೆ ಒಡನಾಟವಿರುವ ಕೇಶವ ಕಾಮತ್‌, ಪರಿಷತ್‌ ಚುಕ್ಕಾಣಿ ಹಿಡಿಯಲು ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲೇ ಅವರು ಬಹುತೇಕ ಸದಸ್ಯರನ್ನೂ ಭೇಟಿ ಮಾಡಿ ಚರ್ಚಿಸಿದ್ದಾರೆ. ಅವರಿಗೆ ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಮಾಜಿ ಅಧ್ಯಕ್ಷರುಗಳೂ ಬೆಂಬಲವಾಗಿ ನಿಂತಿದ್ದಾರೆ.

‘ಇದುವರೆಗೂ ಪರಿಷತ್‌ನಲ್ಲಿ ಹಲವು ಜವಾಬ್ದಾರಿ ನಿಭಾಯಿಸಿದ ಅನುಭವ ನನಗಿದೆ. ಎಲ್ಲ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಪರಿಷತ್‌ ಅನ್ನು ಸಾಮಾನ್ಯರು ಪರಿಷತ್‌ ಮಾಡುತ್ತೇನೆ’ ಎಂದು ನಾಮಪತ್ರ ಸಲ್ಲಿಕೆ ವೇಳೆ ಕೇಶವ ಕಾಮತ್‌ ತಿಳಿಸಿದ್ದರು. ಜೊತೆಗೆ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು, ಕೇಶವ ಕಾಮತ್‌ ಅವರ ಪ್ರಚಾರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಇದು ಕಾಮತ್ ಅವರ ಹಾದಿ ಇನ್ನಷ್ಟು ಸುಗಮಗೊಳಿಸಿದೆ. ಕಳೆದ ಆರು ತಿಂಗಳಿಂದ ಪರಿಷತ್‌ ಸದಸ್ಯರ ಮನೆ ಮನೆಗೆ ಭೇಟಿ ನೀಡಿ, ಚರ್ಚಿಸಿ ಚುಣಾವಣೆ ಕಣಕ್ಕೆ ಇಳಿದಿದ್ದಾರೆ ಕಾಮತ್‌ ಅವರು.

ಹಲವು ಸಂಘಟನೆಗಳಲ್ಲಿ ಸಾಧನೆ:
ಕೇಶವ ಕಾಮತ್‌ ಅವರು ಹಲವು ಸಂಘಟನೆಗಳಲ್ಲಿ ಗುರುತಿಸಿಕೊಂಡು ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ, ಪೊನ್ನಂಪೇಟೆ ಹೋಬಳಿಯ ಘಟಕದ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿ, ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿಯ ಸಂಚಾಲಕನಾಗಿ 2 ಲಕ್ಷಕ್ಕೂ ಹೆಚ್ಚಿನ ಕನ್ನಡಾಭಿಮಾನಿಗಳಿಗೆ ಉಟೋಪಚಾರದ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಪತ್ರಕರ್ತನಾಗಿ 33 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಕೇಶವ ಕಾಮತ್‌ ಪ್ರಚಾರ ನಡೆಸುತ್ತಿದ್ದಾರೆ.

ಪ್ರಸ್ತುತ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ, ಕೊಡಗು ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷರಾಗಿ ಹಾಗೂ ಕೊಡಗು ಪತ್ರಿಕಾ ಭವನದ ಕೋಶಾಧಿಕಾರಿ ಆಗಿಯೂ ಕಾಮತ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪರಿಷತ್ತಿನ ಎಲ್ಲ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮತಯಾಚಿಸುತಿದ್ದೇನೆ. ನನಗೂ ಒಂದು ಅವಕಾಶ ಮಾಡಿಕೊಡುವಂತೆ ಕಾಮತ್‌ ಅವರು ಪರಿಷತ್‌ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.

2ನೇ ಅವಧಿ ಮೇಲೆ ಹಾಲಿ ಅಧ್ಯಕ್ಷರ ಕಣ್ಣು:

ಕಳೆದ ಐದು ವರ್ಷಗಳಿಂದ ಹಲವು ಸಮ್ಮೇಳನ ನಡೆಸಿದ್ದೇನೆ. ಕೊರೊನಾ ಹಾಗೂ ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದಿಂದ ಇನ್ನೂ ಹಲವು ಯೋಜನೆಗಳ ಜಾರಿ ಸಾಧ್ಯವಾಗಿಲ್ಲ. ಮುಂದೆಯೂ ಅವಕಾಶ ನೀಡಿದರೆ ಕನ್ನಡದ ಬೆಳವಣಿಗೆಗೆ ಇನ್ನಷ್ಟು ಶ್ರಮಿಸುತ್ತೇನೆ ಎಂದು ಲೋಕೇಶ್‌ ಹೇಳಿಕೊಳ್ಳುತ್ತಿದ್ದಾರೆ.

‘ನಮ್ಮ ತಂಡವು ಐದು ವರ್ಷಗಳಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಎನ್ನುವಂತೆ ಕೃಷಿ ಸಾಹಿತ್ಯ ಸಮ್ಮೇಳನ, ಅನ್ನದಾತರಿಗಾಗಿ ರೈತ ಸಾಹಿತ್ಯ ಸಮ್ಮೇಳನ, ಎರಡು ಮಕ್ಕಳ ಸಾಹಿತ್ಯ ಸಮ್ಮೇಳನ, ಮಹಿಳೆ ಹಾಗೂ ಯುವ ಸಾಹಿತ್ಯ ಸಮ್ಮೇಳನ, ವಚನ ಹಾಗೂ ದಾಸ ಸಾಹಿತ್ಯ ಸಮಾವೇಶ ಸೇರಿದಂತೆ ಹಲವು ವಿಭಿನ್ನ ಕಾರ್ಯಕ್ರಮ ನಡೆಸಿದ್ದೇವೆ’ ಎಂದು ಹೇಳುತ್ತಾ ಲೋಕೇಶ್‌ ಸಾಗರ್ ಮತ್ತೊಮ್ಮೆ ಜಿಲ್ಲಾ ಘಟಕದ ಮೇಲೆ ಕಣ್ಣಿಟ್ಟಿದ್ದಾರೆ.

ಯಾರಿಗೆ ಮತದಾನದ ಅವಕಾಶ?:

ಕಸಾಪ ಸದಸ್ಯರಾಗಿ ಮೂರು ವರ್ಷ ಪೂರೈಸಿದವರಿಗೆ ಮತದಾನ ಹಕ್ಕಿದೆ. ಈಗಾಗಲೇ ತಹಶೀಲ್ದಾರ್‌ ಕಚೇರಿಯಿಂದ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು ಜಿಲ್ಲೆಯಲ್ಲಿ 2,429 ಮತದಾರರು ಇದ್ದಾರೆ. ಮಡಿಕೇರಿಯಲ್ಲಿ 764, ವಿರಾಜಪೇಟೆ 303, ಪೊನ್ನಂಪೇಟೆ 282, ಕುಶಾಲನಗರ, 424 ಸೋಮವಾರಪೇಟೆಯಲ್ಲಿ 656 ಮತದಾರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT