ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಕೂಗು: ‘ಮುಂದಿನ ಪೀಳಿಗೆಗೂ ನದಿ, ಭೂಮಿ ಉಳಿಯಲಿ’

‘ಈಶ’ ಫೌಂಡೇಷನ್‌ ಸದ್ಗುರು ಜಗ್ಗಿ ವಾಸುದೇವ್‌ ಕರೆ
Last Updated 3 ಸೆಪ್ಟೆಂಬರ್ 2019, 18:33 IST
ಅಕ್ಷರ ಗಾತ್ರ

ಮಡಿಕೇರಿ: ‘ಮುಂದಿನ ಪೀಳಿಗೆಗೂ ನದಿ ನೀರು ಹಾಗೂ ಭೂಮಿ ಉಳಿಯಬೇಕು. ಅದಕ್ಕೆ ಹೆಚ್ಚಿನ ಕಾಡು ಬೆಳೆಸಿ ಪರಿಸರ ಉಳಿಸಬೇಕು’ ಎಂದು ‘ಈಶ’ ಫೌಂಡೇಷನ್‌ ಸದ್ಗುರು ಜಗ್ಗಿ ವಾಸುದೇವ್‌ ಕರೆ ನೀಡಿದರು.

ನಗರದ ಕ್ರಿಸ್ಟಲ್‌ ಹಾಲ್‌ನಲ್ಲಿ ಮಂಗಳವಾರ ನಡೆದ ‘ಕಾವೇರಿ ಕೂಗು’ ಅಭಿಯಾನದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವರ್ಗ ಹಾಗೂ ನರಕವನ್ನು ಸೃಷ್ಟಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಕಾವೇರಿ ನಮ್ಮ ಜೀವನದಿ. ಕಳೆದ ಏಳೆಂಟು ವರ್ಷದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬರ ಪರಿಸ್ಥಿತಿಯಿದೆ. ಇತ್ತೀಚೆಗೆ ನದಿಗಳು ಕೆಂಪಾಗಿ ಹರಿಯುತ್ತಿವೆ. ಭೂಸವಕಳಿ ಹೆಚ್ಚಾಗಿದೆ. ಕೊಡಗಿನ ಮಣ್ಣು ಕೆಆರ್‌ಎಸ್‌ ಸೇರುತ್ತಿದೆ. ಭೂಮಿಯ ಸಾರ್ಮರ್ಥ್ಯ ಕಡಿಮೆಯಾಗುತ್ತಿದೆ’ ಎಂದು ಸೂಚ್ಯವಾಗಿ ನುಡಿದರು.

ಕಾವೇರಿ ನದಿ ಪಾತ್ರದ ಪ್ರದೇಶದಲ್ಲಿ ಕಳೆದ 10 ವರ್ಷದಲ್ಲಿ 47 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ನದಿಯ ನೀರು ಸರಿಯಾಗಿ ಸಮುದ್ರ ಸೇರುವ ಮೊದಲೇ ನೀರು ಬತ್ತು ಹೋಗುತ್ತಿದೆ ಎಂದು ಎಚ್ಚರಿಸಿದರು.

ಜನಸಂಖ್ಯೆ ಹೆಚ್ಚಾಗುತ್ತಾ ಮರಗಳ ದಟ್ಟಣೆ ಕಡಿಮೆಯಾಗಿದೆ. ಭೂಮಿಯ ಜೈವಿಕಾಂಶದ ಮರು ಪೂರೈಕೆಯಾಗುತ್ತಿಲ್ಲ. ಭೂಮಿಯು ನೀರನ್ನು ಹೀರಿಟ್ಟುಕೊಳ್ಳುತ್ತಿಲ್ಲ. ಅದಕ್ಕೆ ಬದಲಾಗಿ ಭೂಸವೆತ ಉಂಟಾಗುತ್ತಿದೆ. ಭೂಮಿಯು ಕಾವೇರಿಯನ್ನು ಪೋಷಿಸುವಲ್ಲಿ ವಿಫಲವಾಗುತ್ತಿದೆ. ಕಾವೇರಿ ಬತ್ತಿಹೋಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

ನದಿಯ ಪರಿಸರವನ್ನು ಪುನರುಜ್ಜೀವನಗೊಳಿಸಿದರೆ, ರೈತರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ. ಮಣ್ಣನ್ನು ಮತ್ತೆ ಫಲವತ್ತಾಗಿಸಲು ಇರುವ ಸುಲಭವಾದ ಮತ್ತು ಅಗ್ಗವಾದ ದಾರಿ ಮರಗಳನ್ನು ನೆಡುವುದು ಎಂದು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ನದಿ ದಡ ಒತ್ತುವರಿ ಮಾಡಿಕೊಂಡಿದ್ದರಿಂದಲೇ ಸಾಕಷ್ಟು ಅನಾಹುತ ಉಂಟಾಗುತ್ತಿದೆ. 242 ಕೋಟಿ ಮರ ಬೆಳೆಸುವುದು ಉತ್ತಮ ಕಾರ್ಯ. 60 ಸಸಿಗಳನ್ನು ಈಗಾಗಲೇ ಸದ್ಗುರು ಹಂಚಿಕೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ನಿವೃತ್ತ ಏರ್‌ ಮಾರ್ಷಲ್‌ ಕೆ.ಸಿ.ನಂದಾ ಕಾರ್ಯಪ್ಪ ಮಾತನಾಡಿ, ಅತಿಯಾದ ಪ್ರವಾಸೋದ್ಯಮ, ಹೋಮ್‌ ಸ್ಟೇಯಿಂದ ಕೊಡಗಿನ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ರೈಲು ಯೋಜನೆ, ನಾಲ್ಕು ಪಥದ ಹೆದ್ದಾರಿ ಮಾಡಿದರೆ ಕೊಡಗಿನಂತಹ ಪ್ರದೇಶದಲ್ಲಿ ವನ್ಯಜೀವಿಗಳು ಎಲ್ಲಿಗೆ ಹೋಗಬೇಕು? ಕೃಷಿಭೂಮಿಯನ್ನು ಕೃಷಿಯೇತರ ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಅಂತರರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ ಮಾತನಾಡಿ, ಜೀವನದಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೋರಿದರು.

ಶಾಸಕ ಕೆ.ಜಿ. ಬೋಪಯ್ಯ, ನದಿ ಪಾತ್ರದ ಪ್ರದೇಶದಲ್ಲಿ ಗಿಡ ನೆಡುವುದು ಒಳ್ಳೆಯ ಉದ್ದೇಶ, ಕೊಡಗಿನಲ್ಲಿ ಕಾಡು ಉಳಿದಿರುವುದಕ್ಕೆ ಸ್ಥಳೀಯರ ಕಾಳಜಿಯೂ ಕಾರಣ. ನೆಲ, ಮಣ್ಣು, ಮರಗಳನ್ನು ಪೂಜಿಸುವ ಪದ್ಧತಿ ಇವತ್ತಿಗೂ ಕೊಡಗಿನಲ್ಲಿ ಉಳಿದಿದೆ ಎಂದು ಹೇಳಿದರು.

ನಟ ರಕ್ಷಿತ್ ಶೆಟ್ಟಿ ಮಾತನಾಡಿ, ಕಾವೇರಿ ಕೂಗು ಅಭಿಯಾನ ರೈತರಿಗೆ ಬಹಳ ಸಹಾಯ ಆಗಲಿದೆ. ಸ್ಯಾಂಡಲ್ ವುಡ್ ಎಲ್ಲಾ ನಟ– ನಟಿಯರು ಈ ಒಳ್ಳೆಯ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ನಟ ದಿಗಂತ್ ಮನವಿ ಮಾಡಿದರು.

ರ‍್ಯಾಲಿ ಮಾರ್ಗ

ಸೆ.4, 5 ಮತ್ತು 6ರಂದು ಕ್ರಮವಾಗಿ ಹುಣಸೂರು, ಮೈಸೂರು ಮತ್ತು ಮಂಡ್ಯದಲ್ಲಿ ನದಿ ಹಾಗೂ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿರುವ ಈ ರ‍್ಯಾಲಿಯು, ಸೆ.8ರಂದು ಬೆಂಗಳೂರು ತಲುಪಲಿದೆ. ಅಲ್ಲಿನ ಸಾರ್ವಜನಿಕ ಸಭೆಯಲ್ಲಿ, ಸದ್ಗುರು ಅಭಿಯಾನದ ಉದ್ದೇಶ ತಿಳಿಸಲಿದ್ದಾರೆ.

242 ಕೋಟಿ ಮರ ನೆಡುವ ಗುರಿ

‘ಎಲ್ಲ ಭಾರತೀಯ ನದಿಗಳಂತೆ ಕಾವೇರಿಯೂ ಅರಣ್ಯಪೋಷಿತ ನದಿ. ಭೂಮಿಯು ನೀರನ್ನು ಹಿಡಿದುಕೊಳ್ಳುತ್ತಿಲ್ಲ. ಅದಕ್ಕೆ ಬದಲಾಗಿ ಭೂಸವೆತ ಉಂಟಾಗುತ್ತಿದೆ. ಆದ್ದರಿಂದಲೇ ಈಶ ಫೌಂಡೇಷನ್‌, ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರ ನೆಡುವ ಗುರಿ ಹೊಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಶೇ 40ರಷ್ಟು ವೃದ್ಧಿಸುವ ಉದ್ದೇಶದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಸದ್ಗುರು ತಿಳಿಸಿದರು.

ಅಭಿಯಾನಕ್ಕೆ ನೆರವು: ರಾಜ್ಯ ಸರ್ಕಾರದಿಂದ ಒಡಂಬಡಿಕೆ?

‘ಕಾವೇರಿ ಕೂಗು‘ ಅಭಿಯಾನಕ್ಕೆ ನೆರವು ನೀಡುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರವು ಇದೇ ತಿಂಗಳು ಒಡಂಬಡಿಕೆ ಮಾಡಿಕೊಳ್ಳಲಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

‘ರೈತರಿಗೆ ಅರಣ್ಯ ಕೃಷಿಯ ಬಗ್ಗೆ ಹೆಚ್ಚಿನ ಅರಿವಿಲ್ಲ. ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನರ್ಸರಿ ಬೆಳೆಸಬೇಕು. ಅದಕ್ಕೆ ಸರ್ಕಾರದ ನೆರವು ಕೊಡಿಸುವ ಜವಾಬ್ದಾರಿಯನ್ನು ಈಶ ಫೌಂಡೇಷನ್ ಹೊತ್ತುಕೊಳ್ಳಲಿದೆ’ ಎಂದು ಜಗ್ಗಿ ವಾಸುದೇವ್‌ ಭರವಸೆ ನೀಡಿದರು.

‘ಭೂಕುಸಿತಕ್ಕೆ ಕಾಡು ನಾಶವೊಂದೇ ಕಾರಣವಾಗಿಲ್ಲ. ಕಳೆದ ವರ್ಷ ಮಡಿಕೇರಿಯಲ್ಲಿ ಅರಣ್ಯ ಪ್ರದೇಶದಲ್ಲಿಯೇ ದೊಡ್ಡ ಪ್ರಮಾಣದ ಭೂಕುಸಿತವಾಗಿತ್ತು. ಈ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಯಬೇಕು’ ಎಂದು ಶಾಸಕ ಕೆ.ಜಿ.ಬೋಪಯ್ಯ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT